ದೇಶಾದ್ಯಂತ ರೈತ ಕಹಳೆ: "ಜೀವನ ಕಿತ್ತುಕೊಂಡವರಿಗೆ ಮತ ಹಾಕಬೇಕೇ"?
ನವದೆಹಲಿ, ಫೆಬ್ರವರಿ.16: ಪಶ್ಚಿಮ ಬಂಗಾಳ ಸೇರಿದಂತೆ ದೇಶದಲ್ಲಿ ಚುನಾವಣೆಗಳು ನಡೆಯುತ್ತಿರುವ ಎಲ್ಲ ರಾಜ್ಯಗಳಲ್ಲೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಹರಿಯಾಣದ ರೋಹ್ಟಕ್ ನಲ್ಲಿರುವ ಗರ್ಹಿ ಸಂಪ್ಲಾದಲ್ಲಿ ಕಿಸಾನ್ ಮಹಾ ಪಂಚಾಯತ್ ಉದ್ದೇಶಿಸಿ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಮಾತನಾಡಿದರು. 2021ರಲ್ಲೇ ದೇಶದ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆ ಎಲ್ಲ ರಾಜ್ಯಗಳಲ್ಲೂ ರೈತರನ್ನು ಎಚ್ಚರಿಸುವ ಕೆಲಸವನ್ನು ನಮ್ಮ ಹೋರಾಟದ ಮೂಲಕ ನಡೆಸಲಾಗುತ್ತದೆ ಎಂದರು.
ಕೇಂದ್ರದ ಎದೆಯಲ್ಲಿ ಭಯ: ರೈತರ ಬೆದರಿಸಲು ಶೌಚಾಲಯ, ನೀರು, ವಿದ್ಯುತ್ ವ್ಯತ್ಯಯ!?
ದೇಶಾದ್ಯಂತ ಕಿಸಾನ್ ಮಹಾ ಪಂಚಾಯತ್ ನಡೆಸುವುದಕ್ಕೆ ಉದ್ದೇಶಿಸಲಾಗಿದೆ. ಮುಂದೆ ಬರುವ ವಿಧಾನಸಭಾ ಚುನಾವಣೆಗಳಲ್ಲಿ ನಮ್ಮ ಜೀವನವನ್ನು ಕಸಿದುಕೊಂಡವರಿಗೆ ಮತ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

"ಪಶ್ಚಿಮ ಬಂಗಾಳ" ರೈತರನ್ನು ಪ್ರಶ್ನಿಸುತ್ತೇವೆ ಎಂದು ತಿಕೈಟ್"
ಕೃಷಿ ಕಾಯ್ದೆಗಳ ವಿರುದ್ಧ ನಾವು ರಾಷ್ಟ್ರವ್ಯಾಪಿ ಹೋರಾಟ ನಡೆಸುತ್ತೇವೆ. ಗುಜರಾತ್ ಗೆ ಹೋಗುತ್ತೇವೆ, ಮಹಾರಾಷ್ಟ್ರಕ್ಕೆ ಹೋಗುತ್ತೇವೆ. ಅದೇ ರೀತಿ ಚುನಾವಣೆಗಳು ನಡೆಯುವ ಪಶ್ಚಿಮ ಬಂಗಾಳದಲ್ಲೂ ಕಿಸಾನ್ ಮಹಾ ಪಂಚಾಯತ್ ನಡೆಸುತ್ತೇವೆ. ಅಲ್ಲಿರುವ ರೈತರನ್ನೂ ಕೂಡಾ ಪ್ರಶ್ನೆ ಮಾಡುತ್ತೇವೆ. ಪಶ್ಚಿಮ ಬಂಗಾಳದ ರೈತರು ಕೂಡಾ ಹಲವು ರೀತಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲಿರುವ ರೈತರು ಬೆಳೆದ ಬೆಳೆಗೂ ಸಹ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರಾಕೇಶ್ ತಿಕೈಟ್ ಆರೋಪಿಸಿದ್ದಾರೆ.

ಹೋರಾಟದಿಂದ ಚುನಾವಣೆ ಮೇಲೆ ಪರಿಣಾಮ ಬೀರುತ್ತಾ?
ಪಶ್ಚಿಮ ಬಂಗಾಳದಲ್ಲಿ ರೈತರ ಹೋರಾಟದಿಂದ ವಿಧಾನಸಭಾ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆಗೆ ರಾಕೇಶ್ ತಿಕೈಟ್ ಉತ್ತರಿಸಿದ್ದಾರೆ. ನಾವು ಪಶ್ಚಿಮ ಬಂಗಾಳದಲ್ಲಿ ಚುನಾವಣಾ ವಿಚಾರಕ್ಕಾಗಿ ಹೊರಟಿಲ್ಲ. ನಮಗೆ ರೈತರ ಉದ್ದೇಶ ಈಡೇರಿದರೆ ಸಾಕು. ರೈತರ ಸಮಸ್ಯೆಗಳನ್ನು ಹೊತ್ತುಕೊಂಡು ನಾವು ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದೇವೆ. ಚುನಾವಣೆ ವಿಷಯಗಳನ್ನು ಹೊತ್ತುಕೊಂಡು ಅಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"ರೈತರಿಗೆ ಧ್ವನಿಯಾಗದ ನಾಯಕರಿಗೆ ಮತ ನೀಡಬೇಕೇ?"
ಕೃಷಿ ಕಾಯ್ದೆಗಳ ವಿರುದ್ಧ ರೈತರ ಹೋರಾಟಕ್ಕೆ ಬೆಂಬಲ ನೀಡದ ನಾಯಕರಿಗೆ ಯಾವುದೇ ಕಾರಣಕ್ಕೂ ಮತ ನೀಡಬೇಡಿ ಎಂದು ಹರಿಯಾಣದ ಭಾರತ್ ಕಿಸಾನ್ ಒಕ್ಕೂಟದ ಮುಖ್ಯಸ್ಥ ಗುರ್ನಾಮ್ ಸಿಂಗ್ ಛಾದೂನಿ ಕರೆ ಕೊಟ್ಟಿದ್ದಾರೆ. ಪಂಚಾಯ್ತಿಯಿಂದ ಪಾರ್ಲಿಮೆಂಟ್ ವರೆಗೂ ಯಾರೇ ಆಗಲಿ. ನಮ್ಮ ಪ್ರತಿಭಟನೆಗೆ ಸ್ಪಂದಿಸದಿದ್ದರೆ ಅಂಥವರಿಗೆ ಮತವನ್ನು ಏಕೆ ನೀಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ನೀವು ಅಂಥವರಿಗೆ ಮತ ನೀಡಬೇಡಿ, ಅವರ ಬದಲಿಗೆ ಬೇರೊಬ್ಬರಿಗೆ ಮತ ಹಾಕಿ ಎಂದು ಕರೆ ಕೊಟ್ಟರು.

7 ಕಿಸಾನ್ ಪಂಚಾಯತ್ ನಲ್ಲಿ ರಾಕೇಶ್ ತಿಕೈಟ್
ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಮೂರು ರಾಜ್ಯಗಳಲ್ಲಿ ನಡೆಯುವ 7 ಕಿಸಾನ್ ಮಹಾ ಪಂಚಾಯತ್ ಸಭೆಗಳಲ್ಲಿ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ಭಾಗವಹಿಸಲಿದ್ದಾರೆ. ಹರಿಯಾಣ, ಮಹಾರಾಷ್ಟ್ರ ಮತ್ತು ರಾಜಸ್ಥಾನದಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆಸುವುದಕ್ಕೆ ಈಗಾಗಲೇ ನಿರ್ಧರಿಸಲಾಗಿದೆ. ಕಿಸಾನ್ ಮಹಾ ಪಂಚಾಯತ್ ಸಭೆಗಳು ಸಂಯುಕ್ತ ಕಿಸಾನ್ ಮೋರ್ಚಾದ ಭಾಗವಾಗಿದ್ದು, ಫೆಬ್ರವರಿ.23ರವರೆಗೂ ಮೂರು ರಾಜ್ಯದ ವಿವಿಧ ಕಡೆಯಲ್ಲಿ ಈ ಸಭೆಗಳನ್ನು ನಡೆಸಲಾಗುತ್ತದೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲ್ಲಿಕ್ ತಿಳಿಸಿದ್ದಾರೆ. ಹರಿಯಾಣದ ಕರ್ನಾಲ್, ರೋಹ್ಟಕ್, ಸಿರ್ಸಾ ಮತ್ತು ಹಿಸಾರ್ ಜಿಲ್ಲೆಗಳು, ಮಹಾರಾಷ್ಟ್ರದ ಅಕೋಲಾ ಹಾಗೂ ರಾಜಸ್ಥಾನದ ಸಿಕಾರ್ ಜಿಲ್ಲೆಗಳಲ್ಲಿ ಕಿಸಾನ್ ಮಹಾ ಪಂಚಾಯತ್ ಸಭೆಗಳನ್ನು ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ.

ನವದೆಹಲಿಯಲ್ಲಿ ಮುಂದುವರಿದ ರೈತ ಹೋರಾಟ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 83 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸುವ ನಿಟ್ಟಿನಲ್ಲಿ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಿಸಾನ್ ಮಹಾ ಪಂಚಾಯತ್ ಸಭೆಗಳನ್ನು ನಡೆಸಲಾಗುತ್ತಿದೆ.