Tirumala Tirupati: ತಿರುಮಲ ಶ್ರೀವಾರಿ ಸುಪ್ರಭಾತ ಸೇವಾ ಟಿಕೆಟ್ ಪಡೆಯಲು ಚಾಣಾಕ್ಷತೆ.. 70 ಬಾರಿ ಪ್ರಯತ್ನಿಸಿ ಲಕ್ಕಿಡಿಪ್ ಟಿಕೆಟ್
ತಿರುಪತಿ ತಿಮ್ಮಪ್ಪನ ಭೇಟಿಗೆ ನಿತ್ಯ ಸಾವಿರಾರು ಭಕ್ತರು ಆಗಮಿಸುತ್ತಾರೆ. ವಿಶೇಷ ದಿನಗಳಲ್ಲಿ ಶ್ರೀವಾರಿಯ ದರ್ಶನ ಪಡೆಯುವುದು ಸುಲಭವೇನಲ್ಲ. ಆದರೆ ವಿಶೇಷ ದರ್ಶನದ ಟಿಕೆಟ್ ಪಡೆಯುವ ಮೂಲಕ ಭಕ್ತರು ತಿಮ್ಮಪ್ಪನ ದರ್ಶನವನ್ನು ಸುಲಭವಾಗಿ ಹಾಗೂ ಕಡಿಮೆ ಸಮಯದಲ್ಲಿ ಮಾಡಬಹುದು. ಆದರೆ ತಿರುಪತಿಯಲ್ಲಿ ನಕಲಿ ಟಿಕೆಟ್ ಮಾರಾಟದ ಮತ್ತೊಂದು ಜಾಲ ಪತ್ತೆಯಾಗಿದೆ.
ತಿರುಮಲ ಶ್ರೀವಾರಿ ಸುಪ್ರಭಾತ ಸೇವೆಗೆ ಸಂಬಂಧಿಸಿದಂತೆ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ. ನಕಲಿ ಗುರುತಿನ ಚೀಟಿಯೊಂದಿಗೆ ಟಿಟಿಡಿ ಲಕ್ಕಿಡಿಪ್‌ನಲ್ಲಿ ಶ್ರೀವಾರಿ ಸುಪ್ರಭಾತ ಸೇವೆ ಪಡೆದ ವ್ಯಕ್ತಿಯ ವಿರುದ್ಧ ತಿರುಮಲ ಟೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಡ ಮೂಲದ ರಸೂಲ್ ಎಂಬಾತ ಕೆಲ ದಿನಗಳಿಂದ ನಕಲಿ ಗುರುತಿನ ಟಿಕೆಟ್‌ನೊಂದಿಗೆ ಟಿಟಿಡಿ ಲಕ್ಕಿಡಿಪ್‌ನಲ್ಲಿ ಭಾಗವಹಿಸುತ್ತಿದ್ದ. ಅಲ್ಲದೆ ಆ ಸುಪ್ರಭಾತಸೇವಾ ಟಿಕೆಟ್‌ನೊಂದಿಗೆ ದರ್ಶನಕ್ಕೆ ಬಂದಿದ್ದ ಅವರನ್ನು ಟಿಟಿಡಿ ವಿಜಿಲೆನ್ಸ್ ಅಧಿಕಾರಿಗಳು ಗುರುತಿಸಿದ್ದಾರೆ. ಆತನಿಂದ ನಕಲಿ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತಿರುಮಲ ಟೂ ಟೌನ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಟಿಕೆಟ್‌ಗಳನ್ನು ಯಾರಿಗೂ ಮಾರಾಟ ಮಾಡಿಲ್ಲ ಎಂದು ಆರೋಪಿ ಹೇಳಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ರಸೂಲ್ ಸುಮಾರು 70 ಬಾರಿ ಲಕ್ಕಿಡಿಪ್ ಪಡೆಯಲು ಪ್ರಯತ್ನ ಮಾಡಿದ್ದಾರೆ. ಆನ್‌ಲೈನ್ ಲಕ್ಕಿಡಿಪ್‌ನಲ್ಲಿ ಅರ್ಜಿತಸೇವಾ ಟಿಕೆಟ್ ಪಡೆಯಲು ತಮ್ಮ ಪಾಸ್‌ಪೋರ್ಟ್‌ನ ಕೊನೆಯ ಸಂಖ್ಯೆಗಳನ್ನು ಬದಲಾಯಿಸಿದ್ದಾರೆ. ಈ ಕ್ರಮದಲ್ಲಿ ಸೋಮವಾರದ ಸುಪ್ರಭಾತಸೇವಾ ಟಿಕೆಟ್ ಅವರಿಗೆ ಸಿಕ್ಕಿದೆ.
ವಿಜಿಲೆನ್ಸ್ ಅಧಿಕಾರಿಗಳು ಟಿಕೆಟ್‌ನೊಂದಿಗೆ ದರ್ಶನಕ್ಕೆ ಬಂದಿದ್ದ ರಸೂಲ್‌ನ ಪಾಸ್‌ಪೋರ್ಟ್ ಮತ್ತು ಇತರ ಗುರುತಿನ ಚೀಟಿಗಳನ್ನು ಪರಿಶೀಲಿಸಿದರು. ಪಾಸ್‌ಪೋರ್ಟ್‌ನಲ್ಲಿನ ಸಂಖ್ಯೆಗಳು ಬದಲಾಗಿರುವುದನ್ನು ಕಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಜಾಣತನದಿಂದ ಪಾಸ್‌ಪೋರ್ಟ್‌ನ ಕೊನೆಯ ನಂಬರ್‌ಗಳನ್ನು ಬದಲಾಯಿಸಿ ಸುಪ್ರಭಾತ ಸೇವೆಗಳಿಗೆ ಆರೋಪಿ ಟಿಕೆಟ್ ಕಾಯ್ದಿರಿಸಿದ್ದನು. ಆದರೆ ಈತ ವಿಜಿಲೆನ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ತಿರುಪತಿಯಲ್ಲಿ ನಕಲಿ ಟಿಕೆಟ್ ಮಾರಾಟದ ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂತಹ ಘಟನೆ ನಡೆದಿದೆ.

ತಿರುಪತಿಯಲ್ಲಿ ನಕಲಿ ಟಿಕೆಟ್ ಮಾರಾಟ ಜಾಲ ಪತ್ತೆ
ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಟಿಕೆಟ್ ಪಡೆಯುವುದು ಕಷ್ಟವಾಗುತ್ತಿದೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಲು ಭಕ್ತರು ಹೆಣಗಾಡುತ್ತಿದ್ದಾರೆ. ಇದೇ ಸಂದರ್ಭವನ್ನು ಬಳಸಿಕೊಂಡ ವಂಚಕರ ಗುಂಪೊಂದು ನಕಲಿ ಟಿಕೆಟ್ ಮಾರಾಟಕ್ಕೆ ಇಳಿದಿತ್ತು. ಆದರೆ ಈ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ತಿರುಮಲ ಟೌನ್ ಪೊಲೀಸರು ತಿರುಪತಿ ತಿಮ್ಮಪ್ಪನ ದರ್ಶನದ ನಕಲಿ ಟಿಕೆಟ್ ಜಾಲವನ್ನು ಪತ್ತೆ ಮಾಡಿದ್ದರು. ದರ್ಶನದ ನಕಲಿ ಟಿಕೆಟ್ ನೀಡಿ ಸಾವಿರಾರು ರೂಪಾಯಿ ವಂಚಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. 49 ವರ್ಷದ ದೇವರಾಜ್ ಟಿ ಗೌಡ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ನಕಲಿ ಟಿಕೆಟ್ ಪಡೆದು ಮೋಸ ಹೋದ ವ್ಯಕ್ತಿ. ಬೆಂಗಳೂರಿನ ದೇವರಚಿಕ್ಕನಹಳ್ಳಿಯ ನಿವಾಸಿಯಾದ ದೇವರಾಜ್ ಟಿ ಗೌಡ ಅವರು 42,500 ರೂಪಾಯಿಗೆ ಆನ್‌ಲೈನ್‌ನಲ್ಲಿ ತಿರುಪತಿ ದರ್ಶನದ ಟಿಕೆಟ್ ಪಡೆದಿದ್ದರು. ಬಳಿಕ ತಾವು ಮೋಸ ಹೋಗಿರುವುದು ತಿಳಿದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ತಿರುಮಲದಲ್ಲಿ ವಿಜಿಲೆನ್ಸ್ ಇನ್ಸ್ ಪೆಕ್ಟರ್ ಬಿ ಶಂಕರ್ ಬಾಬು ಅವರಿಗೆ ದೇವರಾಜ್ ಟಿ ಗೌಡ ಅವರು ನಕಲಿ ಟಿಕೆಟ್ ಪಡೆದಿರುವುದಾಗಿ ದೂರು ನೀಡಿದ್ದರು. ತಿರುಮಲ ದೇವಸ್ಥಾನದಲ್ಲಿ ಶ್ರೀವಾರಿ ದರ್ಶನ ಟಿಕೆಟ್ ಕೊಡಿಸುವ ನೆಪದಲ್ಲಿ ಮಾರುತಿ ಎಂಬ ವ್ಯಕ್ತಿ ತನಗೆ ಮೋಸ ಮಾಡಿದ್ದಾನೆ ಎಂದು ಗೌಡ ಅವರು ಶಂಕರ್ ಬಾಬು ಅವರಿಗೆ ಇ-ಮೇಲ್‌ನಲ್ಲಿ ತಿಳಿಸಿದ್ದರು. ಈ ಮೂಲಕ ಆರೋಪಿಗಳು ಟಿಟಿಡಿಗೂ ಮೋಸ ಮಾಡುತ್ತಿದ್ದಾರೆ ಎಂದು ಗೌಡರು ಉಲ್ಲೇಖಿಸಿದ್ದರು. ಈ ಮೇಲ್ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ತಕ್ಕ ಪಾಠ ಕಲಿಸಿದ್ದರು.
ಸದ್ಯ ತಿರುಪತಿಯಲ್ಲಿ ಮತ್ತದೇ ಪ್ರಕರಣ ಕಂಡು ಬಂದಿದ್ದು ಭಕ್ತರು ಟಿಕೆಟ್ ಖರೀದಿ ಮಾಡುವ ವೇಳೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಟಿಟಿಡಿ ಮನವಿ ಮಾಡಿದೆ. ಯಾವುದೇ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ವೇಳೆ ತಮ್ಮ ಅಧಿಕೃತ ವೆಬ್ ಮೂಲಕ ಮಾಹಿತಿ ಪಡೆದು ಬುಕ್ ಮಾಡಬೇಕು. ಅನುಮಾನ ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಟಿಟಿಡಿ ಮನವಿ ಮಾಡಿದೆ.












Click it and Unblock the Notifications