ಸಿಗದ ಸಚಿವ ಸ್ಥಾನ: ಏಕನಾಥ್ ಶಿಂಧೆ ಬಣದ ಶಾಸಕನ ರಾಜೀನಾಮೆ
ಮುಂಬೈ, ಡಿಸೆಂಬರ್ 16: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾನುವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಬಿಜೆಪಿಯ 19 ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ)ದ ತಲಾ 10 ಶಾಸಕರು ಫಡ್ನವೀಸ್ ಸಂಪುಟಕ್ಕೆ ಸಚಿವರಾಗಿ ಸೇರ್ಪಡೆಗೊಂಡಿದ್ದಾರೆ. ರಾಜ್ಯದಲ್ಲಿ ಡಿಸೆಂಬರ್ 5ರಂದು 'ಮಹಾಯತಿ' ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿ, ಏಕನಾಥ್ ಶಿಂಧೆ ಹಾಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳು.
ಭಾನುವಾರ ರಾತ್ರಿ ನಡೆದ ಸಚಿವ ಸಂಪುಟ ವಿಸ್ತರಣೆ ಬಳಿಕ ಶಿವಸೇನೆ (ಏಕನಾಥ್ ಶಿಂಧೆ ಬಣ)ದಲ್ಲಿ ಅಸಮಾಧಾನ ಉಂಟಾಗಿದೆ. ಸಚಿವ ಸ್ಥಾನ ಕೈತಪ್ಪಿದ ಹಿನ್ನಲೆಯಲ್ಲಿ ಶಾಸಕ ನರೇಂದ್ರ ಬೋಂಧೇಕರ್ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಹಿರಂಗವಾಗಿ ಅಸಮಾಧಾನವನ್ನು ಹೊರಹಾಕಿದ್ದಾರೆ.

2024ರ ಚುನಾವಣೆಯಲ್ಲಿ ಶಾಸಕ ನರೇಂದ್ರ ಬೋಂಧೇಕರ್ ಭಾಂದರಾ ಕ್ಷೇತ್ರದಲ್ಲಿ 1,27,884 ಮತಗಳನ್ನು ಪಡೆದು 38,367 ಮತಗಳ ಅಂತರದಿಂದ ಜಯಗಳಿಸಿದ್ದರು. ಎದುರಾಳಿಯಾಗಿದ್ದ ಕಾಂಗ್ರೆಸ್‌ನ ಪೂಜಾ ಗಣೇಶ್ (89,517 ಮತ) ಸೋಲಿಸಿದ್ದರು. ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿದೆ ಎಂದು ನರೇಂದ್ರ ಬೋಂಧೇಕರ್ ಅಪಾರ ನಿರೀಕ್ಷೆ ಹೊಂದಿದ್ದರು.
ಶಾಸಕ ನರೇಂದ್ರ ಬೋಂಧೇಕರ್ ಶಿವಸೇನೆ (ಏಕನಾಥ್ ಶಿಂಧೆ ಬಣ) ಪಕ್ಷದ ಉಪ ನಾಯಕ ಮತ್ತು ವಿದರ್ಭ ಭಾಗದ ಪಕ್ಷದ ಸಂಯೋಜಕರಾಗಿದ್ದರು. ಈ ಪ್ರದೇಶದಲ್ಲಿ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ 'ಮಹಾಯತಿ' ಮೈತ್ರಿಕೂಟ 62 ಕ್ಷೇತ್ರಗಳ ಪೈಕಿ 47 ಸ್ಥಾನವನ್ನು ಗೆದ್ದಿತ್ತು. ಆದ್ದರಿಂದ ಶಾಸಕರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು.
ಮೂರು ಬಾರಿಯ ಶಾಸಕ: ಶಿವಸೇನೆ ಪಕ್ಷ ಮೂರು ಬಾರಿಯ ಶಾಸಕ ನರೇಂದ್ರ ಬೋಂಧೇಕರ್‌ಗೆ ಈ ಬಾರಿ ಸಚಿವ ಸ್ಥಾನದ ಭರವಸೆಯನ್ನು ನೀಡಿತ್ತು. ಆದರೆ ಶಿವಸೇನೆಯಲ್ಲಿ ಈಗಾಗಲೇ ಏಕನಾಥ್ ಶಿಂಧೆ ಉಪ ಮುಖ್ಯಮಂತ್ರಿಯಾಗಿದ್ದಾರೆ. ಭಾನುವಾರ ಪಕ್ಷಕ್ಕೆ 10 ಸಚಿವ ಸ್ಥಾನವನ್ನು ನೀಡಿದ್ದು, ನರೇಂದ್ರ ಬೋಂಧೇಕರ್‌ಗೆ ಸಚಿವ ಸ್ಥಾನ ಕೈತಪ್ಪಿದೆ.
ನರೇಂದ್ರ ಬೋಂಧೇಕರ್‌ಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಪಕ್ಷದ ವಿವಿಧ ಹುದ್ದೆಗಳಿಗೆ ಮಾತ್ರ ರಾಜೀನಾಮೆ ನೀಡಿದ್ದಾರೆ. ಅಸಮಾಧಾನ ಬಗೆಹರಿಸಲು ಏಕನಾಥ್ ಶಿಂಧೆ ಯಾವ ಕ್ರಮ ಕೈಗೊಳ್ಳಲಿದ್ದಾರೆ? ಎಂದು ಕಾದು ನೋಡಬೇಕಿದೆ.
ಸಚಿವ ಸ್ಥಾನ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆಯೇ ನರೇಂದ್ರ ಬೋಂಧೇಕರ್ ಏಕನಾಥ್ ಶಿಂಧೆ, ಪಕ್ಷದ ಹಿರಿಯ ನಾಯಕ ಉದಯ್ ಸಾಮಂತ್ ಮತ್ತು ಶ್ರೀಕಾಂತ್ ಶಿಂಧೆಗೆ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿ, ಪತ್ರವನ್ನು ಕಳಿಸಿದ್ದರು. ಆದರೆ ಯಾವುದೇ ನಾಯಕರು ಪ್ರತಿಕ್ರಿಯೆಯನ್ನು ನೀಡಿಲ್ಲ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರಲ್ಲಿ ಬಿಜೆಪಿ ಏಕಾಂಗಿಯಾಗಿ 132 ಸೀಟುಗಳಲ್ಲಿ ಜಯಗಳಿಸಿದೆ. ಆದರೆ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. ರಾಜ್ಯದಲ್ಲಿ 'ಮಹಾಯತಿ' ಮೈತ್ರಿಕೂಟ ಸರ್ಕಾರ ರಚನೆಯಾಗಿದೆ. ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಗಳು.
'ಮಹಾಯತಿ' ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟುಗಳನ್ನು ಹೊಂದಿವೆ. ಆದ್ದರಿಂದ ಸಂಪುಟದಲ್ಲಿ ಎರಡೂ ಪಕ್ಷಗಳಿಗೆ ತಲಾ 10 ಸಚಿವ ಸ್ಥಾನಗಳನ್ನು ನೀಡಲಾಗಿದೆ.












Click it and Unblock the Notifications