ಒಂದಲ್ಲ.. ಎರಡಲ್ಲ.. 128 ಲಕ್ಷ ಕೋಟಿ ರೂಪಾಯಿ ಲಾಭ!
ಭಾರತೀಯ ಷೇರುಪೇಟೆ ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡುತ್ತಿದೆ. ಏಕೆಂದರೆ ಭಾರತದ ಷೇರು ಮಾರುಕಟ್ಟೆ ಲಾಭದ ಕಡೆಗೆ ಮುನ್ನುಗ್ಗುತ್ತಿದೆ. ಹೀಗಾಗಿ ದೇಶದ ಷೇರುಪೇಟೆ ಹೂಡಿಕೆದಾರರಿಗೆ ಭರ್ಜರಿ ಲಾಭವನ್ನ ತಂದುಕೊಟ್ಟಿದೆ. ಹಾಗೇ ಜೇಬು ತುಂಬಾ ಕಾಸು ಮಾಡಿಕೊಳ್ಳುತ್ತಿದ್ದಾರೆ ಹೂಡಿಕೆದಾರರು. ಅದ್ರಲ್ಲೂ 2023-24ನೇ ಆರ್ಥಿಕ ವರ್ಷದಲ್ಲಿ ಹೂಡಿಕೆದಾರರು ಭರ್ಜರಿ ಬಂಪರ್ ಬೆಳೆಯನ್ನೇ ಪಡೆದಿದ್ದಾರೆ!
ಷೇರು ಮಾರುಕಟ್ಟೆ ಹೂಡಿಕೆ ದೇಶದ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ಲೆಕ್ಕಾಚಾರದಲ್ಲಿ ಭಾರತವು ಇದೀಗ ಅಮೆರಿಕದ ಷೇರು ಮಾರುಕಟ್ಟೆಯನ್ನೂ ಮೀರಿಸಿ ಭಾರಿ ವೇಗವಾಗಿ ಮುನ್ನುಗ್ಗುತ್ತಿದೆ. ಅದರಲ್ಲೂ ಕಳೆದ 10 ವರ್ಷದಲ್ಲಿ ಭಾರತೀಯ ಷೇರುಪೇಟೆಗೆ ಭರ್ಜರಿ ಬಂಡವಾಳ ಹರಿದು ಬಂದಿದೆ. ಹೀಗಾಗಿ ಭಾರತದಲ್ಲಿ ಆರ್ಥಿಕ ಚೇತರಿಕೆ ಕಂಡಿದ್ದು ಹೂಡಿಕೆದಾರರಿಗೆ ಕೂಡ ಭರ್ಜರಿ ಲಾಭವಾಗಿದೆ. ಹಾಗಾದ್ರೆ 2023-24ನೇ ಆರ್ಥಿಕ ವರ್ಷದಲ್ಲಿ ಭಾರತದ ಷೇರು ಮಾರುಕಟ್ಟೆಯಲ್ಲಿ ಎಷ್ಟು ಲಾಭವಾಗಿದೆ? ಬನ್ನಿ ತಿಳಿಯೋಣ.

128 ಲಕ್ಷ ಕೋಟಿ ಲಾಭ!
2023 & 24ನೇ ಆರ್ಥಿಕ ವರ್ಷದಲ್ಲಿ ಹೂಡಿಕೆದಾರರಿಗೆ ಭರ್ಜರಿ 128 ಲಕ್ಷ ಕೋಟಿ ಲಾಭ ಆಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಹಿನ್ನಡೆ ಅನುಭವಿಸಿದ್ದ ಹೂಡಿಕೆದಾರರು ಇದೀಗ ಭರ್ಜರಿಯಾಗಿ ಲಾಭ ಮಾಡಿಕೊಂಡಿದ್ದಾರೆ. ಹೀಗೆ ಭಾರತೀಯ ಷೇರು ಮಾರುಕಟ್ಟೆ ಬೆಳವಣಿಗೆ ಕಾಣುತ್ತಿದೆ ಎಂಬ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆದಾರರು ಕೂಡ ಭಾರತದಲ್ಲಿ ಬಂಡವಾಳ ಹಾಕಲು ಮುಂದೆ ಬರುತ್ತಿದ್ದಾರೆ. ಹಾಗೇ ಈ ಹಣಕಾಸು ವರ್ಷವು ಆದಾಯದ ಏರಿಕೆ ಜೊತೆಗೆ ದೇಶದ ಆರ್ಥಿಕತೆ ಬೆಳವಣಿಗೆಗೂ ಕೊಡುಗೆ ನೀಡಿದೆ. ಹೂಡಿಕೆಯ ಒಳಹರಿವು ಹೆಚ್ಚಿದ್ದು ಕಾರ್ಪೊರೇಟ್ ವಲಯದ ಆದಾಯ ಹೆಚ್ಚಳ ಕೂಡ, ಈಗ ಉತ್ತಮವಾದ ಬೆಳವಣಿಗೆ ಎಂಬ ಅಭಿಪ್ರಾಯ ಕೂಡ ಕೇಳಿಬಂದಿದೆ.
ಲೋಕಸಭೆ ಚುನಾವಣೆ ವೇಳೆ ಬಂಪರ್!
ಇನ್ನೇನು ಲೋಕಸಭೆ ಚುನಾವಣೆ ಬೇರೆ ಬಂದೇ ಬಿಟ್ಟಿದೆ, ಹೀಗಾಗಿಯೇ ಭಾರತದಲ್ಲಿ ಹೊಸ ಸರ್ಕಾರ ಕೂಡ ರಚನೆ ಆಗಲಿದೆ. ಹೀಗಿದ್ದಾಗ ಷೇರು ಮಾರುಕಟ್ಟೆಯಲ್ಲಿ ಕೂಡ ಸಾಕಷ್ಟು ಏರಿಳಿತ ಉಂಟಾಗುತ್ತಿದೆ. ಇಷ್ಟೆಲ್ಲದರ ನಡುವೆ ಕೂಡ ಕಳೆದ ಆರ್ಥಿಕ ಸಾಲಿನಲ್ಲಿ ಭಾರತದ ಷೇರು ಮಾರುಕಟ್ಟೆಯ ಹೂಡಿಕೆದಾರರು ಭರ್ಜರಿ ಲಾಭ ಮಾಡಿದ್ದಾರೆ. ಹಾಗೇ ಈ ಲಾಭ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಮುಂದಿನ ಕೆಲವೇ ವರ್ಷದಲ್ಲಿ ಭಾರತ ಬಲಿಷ್ಠವಾದ ಆರ್ಥಿಕತೆ ಹೊಂದಲಿದ್ದು, ಷೇರು ಮಾರುಕಟ್ಟೆ ಇನ್ನಷ್ಟು ಎತ್ತರಕ್ಕೆ ಹೋಗುವ ನೀರಿಕ್ಷೆ ಇದೆ.
ನಿನ್ನೆ ಕೂಡ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಭರ್ಜರಿ ಲಾಭ ಮಾಡಿ ಖುಷಿಯಾಗಿದ್ದರು. ನಿನ್ನೆ ಬಿಎಸ್ಇ ಸೆನ್ಸೆಕ್ಸ್ ಗರಿಷ್ಠ 1,000 ಅಂಕ ಏರಿಕೆ ಕಂಡು 74,000 ಗಡಿ ದಾಟಿತ್ತು. ಎನ್ಎಸ್ಇ ನಿಫ್ಟಿ ಅಥವಾ ನಿಫ್ಟಿ-50 300ಕ್ಕೂ ಹೆಚ್ಚು ಅಂಕ ಏರಿಕೆ ಕಂಡು 22,400 ಅಂಕಕ್ಕೂ ತಲುಪಿತ್ತು. 2023-24ನೇ ಹಣಕಾಸು ವರ್ಷದಲ್ಲಿ ಮುಂಬೈ ಷೇರು ಸೂಚ್ಯಂಕವಾದ ಸೆನ್ಸೆಕ್ಸ್ 14,659 ಅಂಶ ಏರಿಕೆ ಕಾಣುವ ಮೂಲಕ ಸುಮಾರು ಶೇಕಡಾ 24.85ರಷ್ಟು ಬೆಳವಣಿಗೆ ಕಂಡಿದೆ. ಒಟ್ನಲ್ಲಿ ಈ ಮೂಲಕ ಭಾರತದಲ್ಲಿ ಹೂಡಿಕೆ ಮಾಡಲು ಇದೀಗ ಜಗತ್ತಿನ ಮೂಲೆ ಮೂಲೆಯಿಂದ ಹೂಡಿಕೆದಾರರು ಮುಂದೆ ಬರುತ್ತಿರುವುದು ವಿಶೇಷ.












Click it and Unblock the Notifications