ಬಿಜೆಪಿ ವರಿಷ್ಠರ ರಣತಂತ್ರ, RSS ಕಟ್ಟಾಳುಗಳಿಗೆ ಸಿಎಂ ಪಟ್ಟ!
ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ವಿಜಯ ಯಾತ್ರೆ ಮುಂದುವರಿದಿದೆ. ಪಂಚರಾಜ್ಯದ ಪಂಚ್, ಬಿಜೆಪಿ ನಾಯಕರಿಗೆ ಬೂಸ್ಟರ್ ಡೋಸ್‌ನ ಕೊಟ್ಟಿದೆ. ಅದರಲ್ಲೂ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಚುನಾವಣೆ ಅಖಾಡದಲ್ಲಿ ಬಿಜೆಪಿ ಗೆಲುವು ಕಮಲ ಪಾಳಯಕ್ಕೀಗ ಬಲ ತುಂಬಿದೆ. ಹೀಗಿದ್ದಾಗಲೇ ಮಧ್ಯಪ್ರದೇಶ, ರಾಜಸ್ಥಾನ & ಛತ್ತೀಸ್‌ಗಢ ರಾಜ್ಯಕ್ಕೆ ಸಿಎಂ ಆಯ್ಕೆ ಮಾಡುವಲ್ಲಿ RSS ಕಟ್ಟಾಳುಗಳಿಗೆ ಮಣೆ ಹಾಕಲಾಗಿದೆ!
ನಿನ್ನೆ ಎಲ್ಲರಿಗೂ ಅಚ್ಚರಿ ಕಾದಿತ್ತು, ಯಾಕಂದ್ರೆ ರಾಜಸ್ಥಾನದ ಸಿಎಂ ಸ್ಥಾನಕ್ಕೆ ಬಿಜೆಪಿ ವರಿಷ್ಠರು ಆಯ್ಕೆ ಮಾಡಿದ ವ್ಯಕ್ತಿ ಈ ಅಚ್ಚರಿಗೆ ಕಾರಣವಾಗಿದ್ದರು. ಇದೇ ಮೊದಲ ಬಾರಿಗೆ, ಶಾಸಕರಾಗಿ ಆಯ್ಕೆ ಆಗಿದ್ದ ಭಜನ್ ಲಾಲ್ ಶರ್ಮಾಗೆ ಬಿಜೆಪಿ ವರಿಷ್ಠರು ಮಣೆ ಹಾಕಿದ್ದರು. ಈ ಮೂಲಕ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಬಣಕ್ಕೆ ಬಿಗ್ ಶಾಕ್ ನೀಡಿದ್ದಾರೆ. ಹಾಗಾದ್ರೆ ಬಿಜೆಪಿ ಹೀಗೆ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ರಾಜ್ಯಗಳಲ್ಲಿ ಅಚ್ಚರಿಯ ಸಿಎಂಗಳ ಆಯ್ಕೆ ಮಾಡಿದ್ದು ಏಕೆ? ಮುಂದೆ ಓದಿ.

ತೊಡೆತಟ್ಟಿ ಅಖಾಡಕ್ಕೆ ಪ್ರವೇಶ!
ಹೌದು ಛತ್ತೀಸ್‌ಗಢ, ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ವಿಧಾನಸಭೆ ಚುನಾವಣೆ ಬಗ್ಗೆ ಬಿಜೆಪಿ ಸೀರಿಯಸ್ ಆಗಿತ್ತು. ಲೋಕಸಭೆ ಚುನಾವಣೆಗೆ ಮೊದಲು ನಡೆಯುತ್ತಿರುವ ಪಂಚರಾಜ್ಯ ಚುನಾವಣೆ ಮುಖ್ಯ ಕೂಡ ಆಗಿತ್ತು. ಹೀಗೆ ದೊಡ್ಡ ನಿರ್ಧಾರ ಕೈಗೊಳ್ಳುವ ಅನಿವಾರ್ಯತೆಯೂ ಬಿಜೆಪಿಗೆ ಎದುರಾಗಿತ್ತು. ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳ ಎದುರಿಸಲು ಬಿಜೆಪಿಯ ವರಿಷ್ಠರೇ ಫೀಲ್ಡ್‌ಗೆ ಇಳಿದಿದ್ದರು. ಕರ್ನಾಟಕದ ಸೋಲಿನ ಬಳಕ ಪಂಚರಾಜ್ಯ ಫಲಿತಾಂಶದಲ್ಲಿ ಗೆದ್ದು ಬೀಗುವ ವಿಶ್ವಾಸ ಬಿಜೆಪಿಗೆ ಇತ್ತು.
ಆರ್‌ಎಸ್‌ಎಸ್ ಕಟ್ಟಾಳುಗಳಿಗೆ ಮಣೆ?
ಹೀಗೆ 3 ದೊಡ್ಡ ರಾಜ್ಯಗಳಲ್ಲಿ ಅದ್ಭುತ ಗೆಲುವು ಸಾಧಿಸಿದ ಬಳಿಕ ಅಲ್ಲಿ ಅಚ್ಚರಿ ಸಿಎಂಗಳ ಆಯ್ಕೆ ಮಾಡಲಾಗಿದೆ. ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಭಜನ್ ಲಾಲ್ ಶರ್ಮಾ ರಾಜಸ್ಥಾನಕ್ಕೆ, ಬುಡಕಟ್ಟು ಸಮುದಾಯದ ನಾಯಕ ಛತ್ತೀಸ್‌ಗಢ ರಾಜ್ಯಕ್ಕೆ & ಮಧ್ಯಪ್ರದೇಶ ಸಿಎಂ ಸ್ಥಾನಕ್ಕೆ ಹಿಂದುಳಿದ ಸಮುದಾಯ ಯಾದವ ಸಮುದಾಯದ ನಾಯಕನನ್ನು ಆಯ್ಕೆ ಮಾಡಿದೆ ಬಿಜೆಪಿ ವರಿಷ್ಠ ಪಡೆ. ಹಾಗೇ ಈ ನಾಯಕರೆಲ್ಲರು ಆರ್‌ಎಸ್‌ಎಸ್ (RSS) ಕಟ್ಟಾಳುಗಳು ಅನ್ನೋದು ಮತ್ತೊಂದು ವಿಶೇಷ. ಹಾಗಾದರೆ ರಾಜಸ್ಥಾನದಲ್ಲಿ ಬಿಜೆಪಿ ವರಿಷ್ಠರು ರೂಪಿಸಿದ ರಣತಂತ್ರ ಎಂತಹದ್ದು?

ರಾಜಸ್ಥಾನ ರಾಜ್ಯದ ಜಾತಿ ಲೆಕ್ಕಾಚಾರ
ನಿಮಗೆಲ್ಲಾ ಗೊತ್ತಿರುವಂತೆ ರಾಜಸ್ಥಾನ ರಾಜಕೀಯದಲ್ಲಿ ರಾಜ ಮನೆತನಗಳ ಅಬ್ಬರ ಬಲು ಜೋರು. ಅಲ್ಲಿ ರಜಪೂತ ಸಮುದಾಯ & ಜಾಟ್ ಸಮುದಾಯ ಬಲವಾಗಿದೆ. ಹೀಗಿದ್ದಾಗ ಅಲ್ಲಿ ವಸುಂಧರಾ ರಾಜೇ ನೇತೃತ್ವದ ಗುಂಪನ್ನು ಹಿಂದಿಕ್ಕುವುದು ಕಷ್ಟದ ಕೆಲಸವೆ ಆಗಿತ್ತು. ಇದೆಲ್ಲವನ್ನೂ ಬಿಜೆಪಿ ವರಿಷ್ಠರು ಅಚ್ಚುಕಟ್ಟಾಗಿ ಮಾಡಿದ್ದಾರೆ. ಅದು ಹೇಗಂದ್ರೆ ರಾಜಸ್ಥಾನ ರಾಜಕೀಯದಲ್ಲಿ ಯಾರ ವಿರೋಧವನ್ನು ಕಟ್ಟಿಕೊಳ್ಳದೆ, ಆರ್‌ಎಸ್‌ಎಸ್ ಹಿನ್ನೆಲೆಯ ನಾಯಕ ಬಿಜೆಪಿ ವರಿಷ್ಠರ ಆಯ್ಕೆಯಾಗಿದ್ದಾರೆ. ಈ ಮೂಲಕ ರಾಜ ಮನೆತನಗಳ ಅಸಮಾಧನ ಸ್ಫೋಟ ಆಗದಂತೆ ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿದೆ.
ಲೋಕಸಭೆಗೆ ಮತ್ತಷ್ಟು ಬಲ!
ಹೀಗೆ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಹಾಗೂ ಆರ್‌ಎಸ್‌ಎಸ್ ಹಿನ್ನೆಲೆ ಇರುವ ಭಜನ್ ಲಾಲ್ ಶರ್ಮಾ ಅವರ ಆಯ್ಕೆ ಬಿಜೆಪಿಗೆ ಲೋಕಸಭೆಗೆ ಬಲ ತುಂಬಲಿದೆ. ಯಾಕಂದ್ರೆ ಅಲ್ಲಿ ಬಿಜೆಪಿ ವರಿಷ್ಠರ ವಿರುದ್ಧ ಮಾತನಾಡುವವರು ಈಗ ದೊಡ್ಡ ಸ್ಥಾನದಲ್ಲಿ ಇಲ್ಲ. ಒಂದೆಡೆ, ವಸುಂಧರಾ ರಾಜೇ ಅವರನ್ನು ಸೈಲೆಂಟ್ ಮಾಡುವ ಜೊತೆಗೆ ಅವರ ವಿರೋಧಿ ಪಾಳಯದ ನಾಯಕಿಗೆ ಡಿಸಿಎಂ ಪಟ್ಟ ನೀಡಲಾಗಿದೆ. ದಿಯಾ ಕುಮಾರಿ ಅವರು ಡಿಸಿಎಂ ಆಗಲಿದ್ದಾರೆ. ಹಾಗೇ ದಲಿತ ಸಮುದಾಯದ ನಾಯಕನಿಗೂ ಡಿಸಿಎಂ ಸ್ಥಾನ ನೀಡಲಾಗಿದೆ. ಈ ಮೂಲಕ ಕಮಲ ಪಾಳಯದ ರಣತಂತ್ರ ಎದುರಾಳಿ ಪಕ್ಷಗಳಿಗೆ ಭರ್ಜರಿ ಶಾಕ್ ನೀಡಿದೆ.












Click it and Unblock the Notifications