ರಾಜಸ್ಥಾನದಲ್ಲಿ ಬಿಜೆಪಿಗೆ ರೋಚಕ ಜಯ, ಅಶೋಕ್ ಗೆಹ್ಲೋಟ್ ರಾಜೀನಾಮೆ
ಜೈಪುರ, ಡಿಸೆಂಬರ್ 3: 200 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನ ವಿಧಾನಸಭೆಗೆ ನಡೆದ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಬಿಜೆಪಿಗೆ ರೋಚಕ ಜಯವಾಗಿದೆ. ಕಳೆದ 25 ವರ್ಷಗಳಿಂದ ಆಡಳಿತರೂಢ ಪಕ್ಷ ಅಧಿಕಾರ ಕಳೆದುಕೊಳ್ಳುವ ವಾಡಿಕೆಯಂತೆ ಕಾಂಗ್ರೆಸ್ ಈ ಬಾರಿ ಸೋತಿದೆ. ಈ ಬೆನ್ನಲ್ಲೇ ಸಿಎಂ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ, ಚುನಾವಣೆ ಘೋಷಣೆ ನಂತರ ಶ್ರೀಗಂಗಾನಗರದ ಕರಣಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಗುರ್ಮೀತ್ ಸಿಂಗ್ ಕೂನಾರ್ ಮೃತಪಟ್ಟಿದ್ದರು. ಹೀಗಾಗಿ ಆ ಒಂದು ಕ್ಷೇತ್ರ ಹೊರತುಪಡಿಸಿ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದು ಭಾನುವಾರ ಫಲಿತಾಂಶ ಪ್ರಕಟಗೊಂಡಿತು. ಇದರಲ್ಲಿ ಬಿಜೆಪಿ 115 ಸ್ಥಾನಗಳಲ್ಲಿ ಗೆದ್ದರೆ, ಕಾಂಗ್ರೆಸ್ 68 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನಕ್ಕೆ ಇಳಿಯಿತು. ಇದಲ್ಲದೆ ಪಕ್ಷೇತರರು 8 ಕ್ಷೇತ್ರಗಳು, ಬಿಎಸ್‌ಪಿ 2, ಆರ್‌ಎಲ್‌ಟಿಪಿ 2, ಇತರರು 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿ, ಬಿಜೆಪಿಯ ಒಗ್ಗಟ್ಟಿನ ಮಂತ್ರ ಹಾಗೂ ಪ್ರಧಾನಿ ಮೋದಿ ಅಲೆಯಿಂದಾಗಿ ಬಿಜೆಪಿ ಪ್ರಚಂಡ ಜಯ ಗಳಿಸಿದೆ. ಈ ಮೂಲಕ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳು ರಾಜಸ್ಥಾನದಲ್ಲಿ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಫಲಿತಾಂಶಕ್ಕೂ ಮುನ್ನ ಬಹಿರಂಗವಾಗಿದ್ದ ರಾಜಸ್ಥಾನ ಫಲಿತಾಂಶಗಳು ಬಹುತೇಕ ಬಿಜೆಪಿಗೆ ಬಹುಮತ ಬರುತ್ತದೆ ಎಂದು ಹೇಳಿದ್ದವು. ಅದರಂತೆ ಈಗ ಬಿಜೆಪಿಗೆ ಗೆಲುವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಮಾತನಾಡಿರುವ ಸಿಎಂ ಅಶೋಕ್ ಗೆಹ್ಲೋಟ್, ನಾನು ಯಾವಾಗಲೂ ಜನರ ಆದೇಶವನ್ನು ಸ್ವೀಕರಿಸುತ್ತೇನೆ. ಭವಿಷ್ಯದ ಸರ್ಕಾರಕ್ಕೆ ನನ್ನ ಶುಭಾಶಯಗಳನ್ನು ಹೇಳುತ್ತೇನೆ. ಅವರು ರಾಜ್ಯದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ, ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು, ಪ್ರಧಾನಿ ಮೋದಿ ಅವರು ನೀಡಿದ 'ಸಬ್ಕಾ ಸಾಥ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್' ಮಂತ್ರದ ಗೆಲುವು, ಇದು ಪ್ರಧಾನಿ ನೀಡಿದ ಗ್ಯಾರಂಟಿ ಗೆಲುವು. ಅಮಿತ್ ಶಾ ನೀಡಿದ ಕಾರ್ಯತಂತ್ರದ ಗೆಲುವು ಮತ್ತು ನಡ್ಡಾ ಜೀ ಅವರು ನೀಡಿದ ಸಮರ್ಥ ನಾಯಕತ್ವದ ಗೆಲುವು. ಮುಖ್ಯವಾಗಿ, ಇದು ನಮ್ಮ ಪಕ್ಷದ ಕಾರ್ಯಕರ್ತರ ಗೆಲುವು. ಜನರು ಕಾಂಗ್ರೆಸ್‌ನ ದುರಾಡಳಿತವನ್ನು ತಿರಸ್ಕರಿಸಿದ್ದಾರೆ ಮತ್ತು ಬಿಜೆಪಿಯ ಉತ್ತಮ ಆಡಳಿತವನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿಯ ನಾಯಕಿ ವಸುಂಧಾರ ರಾಜೇ ಅವರು ಝಲ್ರಾಪಟಾನ್ ಕ್ಷೇತ್ರದಿಂದ 53,193 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇನ್ನು ವಿದ್ಯಾದರ್‌ನಗರದಿಂದ ಸ್ಪರ್ಧಿಸಿದ್ದ ದಿಯಾ ಕುಮಾರಿ ಕೂಡ 71,368 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಸೋಲಿನ ಬಗ್ಗೆ ವ್ಯಂಗ್ಯವಾಡಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ರಾಜಸ್ಥಾನವು ಜಾದುಗಾರನ ಕಾಟದಿಂದ ಹೊರಬಂದಿದೆ. ಮಹಿಳೆಯರ ಗೌರವ ಹಾಗೂ ಬಡವರ ಕಲ್ಯಾಣಕ್ಕಾಗಿ ಜನರು ಮತ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಗೆ ರೇಸ್ ಶುರುವಾಗಿದ್ದು, ಮಾಜಿ ಸಿಎಂ ವಸುಂಧರಾ ರಾಜೇ, ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಸತೀಶ್ ಪೂನ್ಯಾ, ಬಿಜೆಪಿ ರಾಜ್ಯಾಧ್ಯಕ್ಷ ಸಿ.ಪಿ. ಜೋಶಿ, ದಿಯಾ ಕುಮಾರಿ, ಬಾಬಾ ಬಾಲಕನಾಥ್ ಸ್ಪರ್ಧೆಯಲ್ಲಿದ್ದಾರೆ. ಹಾಲಿ ಸಚಿವ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಲಿದ್ದು, ನೂತನ ಸಿಎಂ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ ಹೆಚ್ಚು ಸುದ್ದಿಯಲ್ಲಿತ್ತು, ಕಾಂಗ್ರೆಸ್ ಈ ಬಾರಿ ಅಧಿಕಾರ ಉಳಿಸಿಕೊಳ್ಳಲಿದೆ ಎಂದೇ ಭಾವಿಸಲಾಗಿತ್ತು. ಇದಕ್ಕಾಗಿ ಕಾಂಗ್ರೆಸ್ ಗ್ಯಾರಂಟಿಗಳನ್ನು ನೀಡಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಅದು ಕೆಲಸ ಮಾಡಿಲ್ಲ. ಹಾಲಿ ಸಿಎಂ ಅಶೋಕ್ ಗೆಹಲೋತ್ ಹಾಗೂ ಸಚಿನ್ ಪೈಲಟ್ ನಡುವಿನ ವೈಮನಸ್ಸು ಹಾಗೂ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿಯೂ ಕಾಂಗ್ರೆಸ್ ಸೋಲಿಗೆ ಕಾರಣ ಎಂದೇ ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications