'ಅತ್ಯಾಚಾರ ಘಟನೆಗಳನ್ನು ತಡೆಯಲು ಶ್ರೀರಾಮನಿಗೂ ಸಾಧ್ಯವಿಲ್ಲ'
ಬಲ್ಲಿಯಾ, ಜುಲೈ 8: ಹೆಚ್ಚುತ್ತಿರುವ ಅತ್ಯಾಚಾರ ಘಟನೆಗಳನ್ನು ಶ್ರೀರಾಮನಿಗೂ ತಡೆಯಲು ಸಾಧ್ಯವಿಲ್ಲ ಎನ್ನುವ ಮೂಲಕ ಉತ್ತರ ಪ್ರದೇಶದ ಬೈರಿಯಾ ಜಿಲ್ಲೆಯ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್ ವಿವಾದ ಸೃಷ್ಟಿಸಿದ್ದಾರೆ.
'ನಾನು ಸಂಪೂರ್ಣ ಆತ್ಮವಿಶ್ವಾಸದಿಂದ ಹೇಳುತ್ತೇನೆ, ಇಂತಹ ಘಟನೆಗಳನ್ನು ಖುದ್ದು ಶ್ರೀರಾಮನಿಗೂ ತಡೆಯಲು ಸಾಧ್ಯವಿಲ್ಲ. ಇದು ನೈಸರ್ಗಿಕ ಮಾಲಿನ್ಯದಂತೆ. ಯಾರನ್ನೂ ಸ್ಪರ್ಶಿಸದೆ ಬಿಟ್ಟಿಲ್ಲ.
ಬೇರೆಯವರನ್ನು ತಮ್ಮ ಕುಟುಂಬದಂತೆ, ಸಹೋದರಿಯರಂತೆ ನೋಡುವುದು ಜನರ ಜವಾಬ್ದಾರಿ. ನಾವು ಇದನ್ನು ಮೌಲ್ಯಗಳ ಮೂಲಕ ನಿಯಂತ್ರಿಸಲು ಸಾಧ್ಯವೇ ಹೊರತು ಸಂವಿಧಾನದ ಮೂಲಕವಲ್ಲ' ಎಂದು ಅವರು ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರಿ ಸಿಬ್ಬಂದಿಗಿಂತ ವೇಶ್ಯೆಯರೇ ಎಷ್ಟೋ ಉತ್ತಮರು ಎನ್ನುವ ಮೂಲಕ ಈ ಹಿಂದೆಯೂ ಸುರೇಂದ್ರ ಸಿಂಗ್ ವಿವಾದ ಸೃಷ್ಟಿದ್ದರು, ಅಲ್ಲದೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪೋಷಕರು ಮತ್ತು ಸ್ಮಾರ್ಟ್‌ಫೋನ್‌ಗಳೇ ಕಾರಣ ಎಂದು ಅವರು ದೂಷಿಸಿದ್ದರು.
ದೇಶದಾದ್ಯಂತ ಸಂಚಲನ ಮೂಡಿಸಿದ್ದ ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರ ಪರವಾಗಿ ಸುರೇಂದ್ರ ಸಿಂಗ್ ಇತ್ತೀಚೆಗೆ ಧ್ವನಿ ಎತ್ತಿದ್ದರು.
ಮೂರು ಮಕ್ಕಳ ತಾಯಿಯನ್ನು ಯಾರೂ ಅತ್ಯಾಚಾರ ಮಾಡಲಾರರು ಎಂಬ ಹೇಳಿಕೆಯನ್ನು ಅವರು ನೀಡಿದ್ದರು.
ನಾನು ಸೈಕಾಲಜಿಯ ದೃಷ್ಟಿಕೋನದಿಂದ ಈ ಮಾತು ಹೇಳಿದ್ದೇನೆ. ಯಾರೂ ಮೂರು ಮಕ್ಕಳ ತಾಯಿಯನ್ನು ಅತ್ಯಾಚಾರ ಮಾಡಲಾರರು. ಅದು ಸಾಧ್ಯವಿಲ್ಲ. ಇದು ಕುಲದೀಪ್ ಸಿಂಗ್ ವಿರುದ್ಧ ಮಾಡಿರುವ ಸಂಚು.
ಬಹುಶಃ ಆಕೆಯ ತಂದೆಯನ್ನು ಯಾರೋ ಹೊಡೆದಿರಬೇಕು. ಆದರೆ ಈ ಅತ್ಯಾಚಾರ ಆರೋಪಗಳನ್ನು ನಾನು ನಂಬುವುದಿಲ್ಲ ಎಂದು ಹೇಳಿದ್ದರು.












Click it and Unblock the Notifications