EPFO: ಉದ್ಯೋಗಿಗಳಿಗೆ ಖುಷಿ ಸುದ್ದಿ! ಇಪಿಎಫ್‌ಒ ಬಡ್ಡಿದರದಲ್ಲಿ ಬದಲಾವಣೆಯಿಲ್ಲ?
ಫೆಬ್ರವರಿ 28 ರಂದು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಕೇಂದ್ರ ಟ್ರಸ್ಟಿಗಳ ಮಂಡಳಿಯನ್ನು (ಸಿಬಿಟಿ) ನಡೆಸಲು ನಿರ್ಧರಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅಧ್ಯಕ್ಷತೆಯಲ್ಲಿ 237ನೇ ಸಭೆ ನಡೆಯಲಿದ್ದು, ಉದ್ಯೋಗದಾತ ಸಂಘಗಳು, ಕಾರ್ಮಿಕ ಸಂಘಗಳ ಪ್ರತಿನಿಧಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ವಾರ ಬಡ್ಡಿ ದರ ಇಳಿಸಿದೆ. ಬ್ಯಾಂಕ್‌ಗಳು ಹಾಗೂ ಇತರೆ ಹಣಕಾಸಿನ ಸಂಸ್ಥೆಗಳು ಕೂಡ ಸಾಲದ ಮೇಲಿನ ಬಟ್ಟಿಯನ್ನು ಕಡಿಮೆ ಮಾಡುವ ನಿರೀಕ್ಷೆ ಇದ್ದು, ಉದ್ಯೋಗಿಗಳ ಪಿಎಫ್ ಹಣದ ಮೇಲೆ ನೀಡುವ ಬಡ್ಡಿದರ ಕೂಡ ಕಡಿಮೆ ಮಾಡಬಹುದಾ ಎನ್ನುವ ನಿರೀಕ್ಷೆ ಮಾಡಲಾಗಿತ್ತು, ಇದೀಗ ಮೂಲಗಳ ಪ್ರಕಾರ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ವರದಿಯಾಗಿದೆ.

ಸಭೆಯಲ್ಲಿ ಏನೆಲ್ಲಾ ಚರ್ಚಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲವಾದರೂ, ಮುಖ್ಯವಾಗಿ 2024-25ನೇ ಹಣಕಾಸು ವರ್ಷಕ್ಕೆ ಇಪಿಎಫ್ ಠೇವಣಿ ಮೇಲಿನ ಬಡ್ಡಿದರವನ್ನು ನಿರ್ಧರಿಸುವುದಾಗಿದೆ ಎಂದು ವರದಿ ತಿಳಿಸಿದೆ.
2022-23 ರಲ್ಲಿ 8.15 ರಷ್ಟಿದ್ದ ಬಡ್ಡಿದರವನ್ನು, 2024ರ ನವೆಂಬರ್ 30ರಂದು ನಡೆದಿದ್ದ 236ನೇ ಸಭೆಯಲ್ಲಿ 2023-24ರ ಆರ್ಥಿಕ ವರ್ಷಕ್ಕೆ ಇಪಿಎಫ್ ಠೇವಣಿಗಳ ಮೇಲಿನ ಬಡ್ಡಿಯನ್ನು 8.25% ಕ್ಕೆ ನಿಗದಿಪಡಿಸಿತ್ತು. 2024-2025ರ ಆರ್ಥಿಕ ವರ್ಷದಲ್ಲೂ ಇದೇ ಬಡ್ಡಿದರವನ್ನು ಮುಂದುವರೆಸಲು ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆ ಇದೆ.
ಉದ್ಯೋಗಿಗಳಿಗೆ ಇದು ಯಾಕೆ ಮುಖ್ಯ?
ಇಪಿಎಫ್‌ಒ ಕಾಯ್ದೆಯ ಪ್ರಕಾರ, ಉದ್ಯೋಗಿಯ ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಶೇ. 12 ರಷ್ಟು ಹಣವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ಇಪಿಎಫ್ಒ ಬಡ್ಡಿದರ ಹೆಚ್ಚಳವಾದರೆ ಉದ್ಯೋಗಿಗಳ ಉಳಿತಾಯದ ಹಣಕ್ಕೆ ಹೆಚ್ಚಿನ ಬಡ್ಡಿ ಸಿಗಲಿದೆ.
ದೇಶದಲ್ಲಿ ಒಟ್ಟಾರೆ 7.37 ಕೋಟಿ ಇಪಿಎಫ್‌ಒ ಖಾತೆಗಳಿದೆ. ಮಾರ್ಚ್ 2024ರ ವರದಿ ಪ್ರಕಾರ 24.75 ಲಕ್ಷ ಕೋಟಿ ರೂಪಾಯಿ ಹಣ ಇದೆ ಎಂದು ವರದಿಗಳು ತಿಳಿಸಿದೆ. ಅಲ್ಪ ಪ್ರಮಾಣದ ಬಡ್ಡಿದರ ವ್ಯತ್ಯಾಸವು ಕೂಡ ಭಾರಿ ವ್ಯತ್ಯಾಸ ಮಾಡಬಲ್ಲದು. ಇದೇ ಕಾರಣಕ್ಕೆ ಇಪಿಎಫ್‌ಒ ಠೇವಣಿ ಮೇಲಿನ ಬಡ್ಡಿದರ ವ್ಯತ್ಯಾಸ ಪರಿಣಾಮ ಬೀರುತ್ತದೆ. ಫೆಬ್ರವರಿ 28 ರಂದು ನಡೆಯುವ ಸಭೆಯಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ.












Click it and Unblock the Notifications