EPFO WhatsApp Service: ಇನ್ಮುಂದೆ ವಾಟ್ಸಾಪ್‌ನಲ್ಲೇ ಸಿಗಲಿದೆ PF ಬ್ಯಾಲೆನ್ಸ್, ಪಾಸ್‌ಬುಕ್ ಡೀಟೇಲ್ಸ್!
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಕೋಟ್ಯಂತರ ಚಂದಾದಾರರಿಗೆ ಮಹತ್ವದ ಹಾಗೂ ಅನುಕೂಲಕರವಾದ ಹೊಸ ಸೇವೆಯೊಂದನ್ನ ಪರಿಚಯಿಸಿದೆ. ಇನ್ನು ಮುಂದೆ ನಿಮ್ಮ ಪಿಎಫ್ ಖಾತೆಯ ವಿವರಗಳನ್ನ ತಿಳಿಯಲು ಇಪಿಎಫ್‌ಒ ಕಚೇರಿಗೆ ಅಲೆಯುವ ಅಥವಾ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಒದ್ದಾಡುವ ಅಗತ್ಯವಿಲ್ಲ.
ಹೌದು, ಬದಲಿಗಿ, ನಿಮ್ಮ ನೆಚ್ಚಿನ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ (WhatsApp) ಮೂಲಕವೇ ಕ್ಷಣಮಾತ್ರದಲ್ಲಿ ಬ್ಯಾಲೆನ್ಸ್ ಹಾಗೂ ಪಾಸ್‌ಬುಕ್ ವಿವರಗಳನ್ನ ಪಡೆಯಬಹುದು.

ಇಪಿಎಫ್‌ಒದ 74ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಈ ಇಪಿಎಫ್‌ಒ ವಾಟ್ಸಾಪ್ ಸೇವೆಗೆ ಅಧಿಕೃತವಾಗಿ ಚಾಲನೆ ನೀಡಿದರು.
ವಾಟ್ಸಾಪ್‌ನಲ್ಲಿ ಸಿಗುವ ಇಪಿಎಫ್‌ಒ ಸೇವೆಗಳೇನು?
ಈ ಹೊಸ ಸೌಲಭ್ಯದ ಅಡಿಯಲ್ಲಿ, ಚಂದಾದಾರರು ಇಪಿಎಫ್‌ಒದ ವೇರಿಫೈಡ್ ವಾಟ್ಸಾಪ್ ಸೇವೆಯನ್ನ ಬಳಸಿಕೊಂಡು ತಮ್ಮ ಖಾತೆಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನ ಬಹಳ ಸುಲಭವಾಗಿ ಪಡೆಯಬಹುದು. ಅವುಗಳೆಂದರೆ:
1. ಪಿಎಫ್ ಬ್ಯಾಲೆನ್ಸ್: ಚಂದಾದಾರರು ತಮ್ಮ ಭವಿಷ್ಯ ನಿಧಿ ಖಾತೆಯಲ್ಲಿ ಪ್ರಸ್ತುತ ಎಷ್ಟು ಬ್ಯಾಲೆನ್ಸ್ ಇದೆ ಎಂಬುದನ್ನ ತಕ್ಷಣವೇ ಪರಿಶೀಲಿಸಬಹುದು.
2. ಇತ್ತೀಚಿನ ವಹಿವಾಟುಗಳು: ತಮ್ಮ ಪಿಎಫ್ ಖಾತೆಯಲ್ಲಿ ನಡೆದ ಇತ್ತೀಚಿನ ಐದು ವಹಿವಾಟುಗಳ ಸಂಪೂರ್ಣ ವಿವರಗಳನ್ನ ನೋಡಬಹುದು.
3. ಪಾಸ್‌ಬುಕ್ ಮಾಹಿತಿ: ಉದ್ಯೋಗಿಗಳು ತಮ್ಮ ಇಪಿಎಫ್ ಪಾಸ್‌ಬುಕ್ ವಿವರಗಳನ್ನ ನೇರವಾಗಿ ವಾಟ್ಸಾಪ್‌ನಲ್ಲಿಯೇ ಪಡೆಯಲು ಈ ಸೇವೆ ಅನುವು ಮಾಡಿಕೊಡುತ್ತದೆ.
4. PMVBRY ಮಾರ್ಗದರ್ಶನ: ಉದ್ಯೋಗ ಆಧಾರಿತ ಯೋಜನೆಯಾದ ಪ್ರಧಾನ ಮಂತ್ರಿ ವಿಕಸಿತ್ ಭಾರತ್ ರೋಜಗಾರ್ ಯೋಜನೆಗೆ ಸಂಬಂಧಿಸಿದ ಅಗತ್ಯತೆಗಳನ್ನ ಪೂರ್ಣಗೊಳಿಸಲು ಚಂದಾದಾರರಿಗೆ ಈ ಸೇವೆಯ ಮೂಲಕ ವೈಯಕ್ತಿಕ ಮಾರ್ಗದರ್ಶನ ಮತ್ತು ಸಹಾಯವು ದೊರೆಯಲಿದೆ.
ಜನರ ದೈನಂದಿನ ಬಳಕೆಯಲ್ಲಿರುವ ವಾಟ್ಸಾಪ್‌ನಂತಹ ಸುಲಭವಾದ ಮಾಧ್ಯಮದ ಮೂಲಕ ಇಪಿಎಫ್‌ಒ ಸೇವೆಗಳನ್ನ ತಲುಪಿಸುವ ಈ ಪ್ರಯತ್ನದಿಂದಾಗಿ, ಸಣ್ಣಪುಟ್ಟ ಮಾಹಿತಿಗಳಿಗಾಗಿ ಚಂದಾದಾರರು ಕಚೇರಿಗೆ ಭೇಟಿ ನೀಡುವುದು ಗಣನೀಯವಾಗಿ ಕಡಿಮೆಯಾಗಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.
EPFO Services on WhatsApp Launched! 💬Check your EPF Balance, view your last 5 transactions and download your Passbook with just a WhatsApp message.📲 Scan the QR Code or say Hi at +91 8796441800.#EPFO #WhatsAppServices https://t.co/AqxDzFJr6E
— EPFO (@officialepfo) November 1, 2026
ನಿಷ್ಕ್ರಿಯ ಖಾತೆಗಳ ಸ್ವಯಂಚಾಲಿತ ಸೆಟ್ಲ್‌ಮೆಂಟ್!
ವಾಟ್ಸಾಪ್ ಸೇವೆಯ ಜೊತೆಗೆ ಸಚಿವ ಮನ್ಸುಖ್ ಮಾಂಡವಿಯಾ ಅವರು ಅರ್ಹ ನಿಷ್ಕ್ರಿಯ ಇಪಿಎಫ್ ಖಾತೆಗಳ (Inoperative EPF accounts) 'ಆಟೋಮ್ಯಾಟಿಕ್ ಸೆಟ್ಲ್‌ಮೆಂಟ್' ಸೌಲಭ್ಯಕ್ಕೂ ಚಾಲನೆ ನೀಡಿದರು.
ಈ ಹೊಸ ಸೌಲಭ್ಯದ ಪ್ರಕಾರ, ಆಧಾರ್ ದೃಢೀಕರಿಸಲ್ಪಟ್ಟಿರುವ ಹಾಗೂ 1,000 ರೂ. ವರೆಗೆ ಬ್ಯಾಲೆನ್ಸ್ ಹೊಂದಿರುವ ನಿಷ್ಕ್ರಿಯ ಖಾತೆಗಳ ಚಂದಾದಾರರು ತಮ್ಮ ಹಣವನ್ನು ಪಡೆಯಲು ಇನ್ನು ಮುಂದೆ ಪ್ರತ್ಯೇಕವಾಗಿ ಕ್ಲೇಮ್ ಮಾಡುವ ಅಗತ್ಯವಿಲ್ಲ. ಬದಲಾಗಿ, ನಿಗದಿತ ಗುರುತು ಮತ್ತು ಬ್ಯಾಂಕ್ ಖಾತೆಯ ಪರಿಶೀಲನೆಯನ್ನ ಪೂರ್ಣಗೊಳಿಸಿದ ನಂತರ, ಇಪಿಎಫ್‌ಒ ಸ್ವಯಂಚಾಲಿತವಾಗಿ ಸೆಟ್ಲ್‌ಮೆಂಟ್ ಪ್ರಕ್ರಿಯೆಯನ್ನ ಪ್ರಾರಂಭಿಸುತ್ತದೆ. ಬಳಿಕ, ಅರ್ಹ ಮೊತ್ತವನ್ನ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ.
ಈ ಮಹತ್ವದ ಉಪಕ್ರಮದಿಂದಾಗಿ ಸರಿಸುಮಾರು 5 ಕೋಟಿ ರೂ.ಗಳನ್ನ ಒಳಗೊಂಡಿರುವ ಸುಮಾರು ಒಂದು ಲಕ್ಷ ಖಾತೆಗಳಿಗೆ ನೇರ ಪ್ರಯೋಜನವಾಗುವ ನಿರೀಕ್ಷೆಯಿದೆ.
74 ವರ್ಷಗಳ ಸುದೀರ್ಘ ಪಯಣದಲ್ಲಿ ಇಪಿಎಫ್‌ಒ ಭಾರತದ ಕಾರ್ಮಿಕ ಪಡೆಯ ವಿಶ್ವಾಸಾರ್ಹ ಸಂಸ್ಥೆಯಾಗಿ ಬೆಳೆದಿದೆ. 8 ಕೋಟಿಗೂ ಹೆಚ್ಚು ಸದಸ್ಯರ ಕೊಡುಗೆಯಿಂದ ಸಂಗ್ರಹವಾಗಿರುವ 32 ಲಕ್ಷ ಕೋಟಿ ರೂ.ಗಳ ಬೃಹತ್ ಕಾರ್ಪಸ್ ಫಂಡ್, ಸಂಸ್ಥೆಯ ಮೇಲಿನ ನಂಬಿಕೆ ಹಾಗೂ ಕಾರ್ಮಿಕರ ಶ್ರಮವನ್ನ ಪ್ರತಿಬಿಂಬಿಸುತ್ತದೆ ಎಂದು ಸಚಿವರು ಶ್ಲಾಘಿಸಿದರು.
75ನೇ ವರ್ಷದತ್ತ ಹೆಜ್ಜೆ ಹಾಕುತ್ತಿರುವ ಸಂಸ್ಥೆ, ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ, ಕಾರ್ಮಿಕ-ಕೇಂದ್ರಿತ ಆವಿಷ್ಕಾರಗಳತ್ತ ಹೆಚ್ಚು ಗಮನಹರಿಸುವಂತೆ ಅಧಿಕಾರಿಗಳಿಗೆ ಕರೆ ನೀಡಿದರು.


Click it and Unblock the Notifications
