ಉಪಗ್ರಹ ಉಡಾವಣೆ ಮಾಡಲು ‘ಇಸ್ರೋ’ ಅಮೆರಿಕದ ಮೊರೆ ಹೋಯ್ತಾ?
ಭಾರತೀಯರ ಹೆಮ್ಮೆ 'ಇಸ್ರೋ' ಸಂಸ್ಥೆ ಜಗತ್ತಿನಾದ್ಯಂತ ದೊಡ್ಡ ಹೆಸರು ಗಳಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೇರೆ ಬೇರೆ ದೇಶಗಳು ಕೂಡ ಭಾರತದ 'ಇಸ್ರೋ' ಸಂಸ್ಥೆ ಮೂಲಕ ತಮ್ಮ ತಮ್ಮ ಉಪಗ್ರಹ ಉಡಾವಣೆ ಮಾಡುತ್ತಿವೆ. ಆದರೆ ಈಗ ಬೇರೆಯದ್ದೇ ಸುದ್ದಿ ಹೊರಬಿದ್ದಿದೆ, ಅದೇನೆಂದರೆ 'ಇಸ್ರೋ' ಸಂಸ್ಥೆ ತನ್ನ ಅತಿ ಭಾರವಾದ ಉಪಗ್ರಹ ಉಡಾವಣೆ ಮಾಡೋಕೆ ಅಮೆರಿಕದ ಸಹಾಯ ಕೇಳಲಿದೆಯಂತೆ.
ಹೌದು, ಈ ಸುದ್ದಿ ಕೇಳಿ ಆಶ್ಚರ್ಯ ಆಗಿದ್ರೂ ಇದು ನಿಜ. ಯಾಕಂದ್ರೆ ಭಾರತದ ಹೆಮ್ಮೆ ಇಸ್ರೋ ಸಂಸ್ಥೆ ತನ್ನ ಅತಿ ತೂಕದ ಸ್ಯಾಟಲೈಟ್ ಅಂದರೆ ಉಪಗ್ರಹ ಉಡಾವಣೆಗೆ, ಅಮೆರಿಕದಲ್ಲಿನ ಖಾಸಗಿ ಬಾಹ್ಯಾಕಾಶ ಉಡಾವಣಾ ಸಂಸ್ಥೆ 'ಸ್ಪೇಸ್ ಎಕ್ಸ್' ಮೊರೆ ಹೋಗುತ್ತಿದೆ. ಇದಕ್ಕೆಲ್ಲಾ ಕಾರಣ ಅತಿ ಭಾರವಾದ ಉಪಗ್ರಹದ ಉಡಾವಣೆ. ಜಿಸ್ಯಾಟ್-20 (GSAT-20) ಉಡಾವಣೆಗೆ ಈಗ ಎಲಾನ್ ಮಸ್ಕ್ ಅವರ 'ಸ್ಪೇಸ್ ಎಕ್ಸ್' ಸಂಸ್ಥೆಯ ಸಹಾಯವನ್ನ ಇಸ್ರೋ ಪಡೆಯಲಿದೆ ಎನ್ನಲಾಗಿದೆ. ಹಾಗಾದ್ರೆ ಎಲಾನ್ ಮಸ್ಕ್ ಅವರ ಬಳಿ ಇರುವ ಶಕ್ತಿಶಾಲಿ ರಾಕೆಟ್ ಯಾವುದು? ಮುಂದೆ ಓದಿ.

ಇಸ್ರೋ ಪ್ಲ್ಯಾನ್ ಏನು ಗೊತ್ತೆ?
ಅಂದಹಾಗೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಇಸ್ರೋ' ಈ ಹಿಂದೆ ಭಾರವಾದ ಉಪಗ್ರಹಗಳ ಉಡಾವಣೆಗೆ, ರಷ್ಯಾ & ಯುರೋಪಿಯನ್ ಸ್ಪೇಸ್ ಏಜೆನ್ಸಿಗಳ ರಾಕೆಟ್‌ಗಳನ್ನ ಬಳಸುತ್ತಿತ್ತು. ಆದರೆ ಈಗ ಇದೇ ಮೊದಲ ಬಾರಿಗೆ ಎಲಾನ್ ಮಸ್ಕ್ ಅವರ 'ಸ್ಪೇಸ್ ಎಕ್ಸ್' ಸಂಸ್ಥೆಯ ಸಹಾಯವನ್ನ ಇಸ್ರೋ ಪಡೆಯಲಿದೆ. ಅದು ಹೇಗೆಂದರೆ ಅತ್ಯಂತ ಶಕ್ತಿಶಾಲಿ ಎಂಬ ಹೆಸರು ಪಡೆದಿರುವ ಫಾಲ್ಕನ್-9 (Falcon-9) ಮೂಲಕ ತನ್ನ ಉಪಗ್ರಹ ಉಡಾವಣೆಯನ್ನ ಮಾಡಲಿದೆ ಇಸ್ರೋ.
ಮತ್ತೊಂದ್ಕಡೆ ಇಸ್ರೋ ಬಳಿ ಈಗ ಗರಿಷ್ಠ 4000 ಕೆಜಿ ತೂಕವನ್ನ ಹೊತ್ತೊಯ್ಯುವ ರಾಕೆಟ್ ಲಭ್ಯವಿದೆ. ಆದರೆ ಅತಿ ಭಾರದ ಉಪಗ್ರಹ ಹೊತ್ತೊಯ್ಯುವ ರಾಕೆಟ್ ತಯಾರಿ ಇನ್ನೂ ಪೂರ್ತಿ ಆಗಿಲ್ಲ. ಇದೇ ಕಾರಣಕ್ಕೆ 2024ರಲ್ಲಿ ಎಲಾನ್ ಮಸ್ಕ್ ಅವರ 'ಸ್ಪೇಸ್ ಎಕ್ಸ್' ರಾಕೆಟ್‌ನಿಂದ ತನ್ನ ಜಿಸ್ಯಾಟ್-20 (GSAT-20) ಉಡಾವಣೆ ಮಾಡಲಿದೆಯಂತೆ ಇಸ್ರೋ ಸಂಸ್ಥೆ. ಹೀಗಾಗಿ, ಭಾರಿ ಕುತೂಹಲ ಕೆರಳಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಈ ಉಪಗ್ರಹ ಉಡಾವಣೆಯನ್ನು ಮಾಡಲಾಗುವುದು ಎನ್ನಲಾಗಿದೆ.

ಇಸ್ರೋಗೆ ಹೊಸ ವರ್ಷದ ಸಿಹಿ!
ಮತ್ತೊಂದು ಕಡೆ ಇಸ್ರೋ ಸಂಸ್ಥೆ 2024ರ ಆರಂಭದ ದಿನವೇ ಬಹುದೊಡ್ಡ ಗುರಿ ತಲುಪಿತ್ತು. 'ಎಕ್ಸ್-ರೇ ಪೊಲರಿಮೀಟರ್ ಉಪಗ್ರಹ' ಅಂದ್ರೆ 'ಎಕ್ಸ್‌ಪೊಸ್ಯಾಟ್' ಉಪಗ್ರಹ ಉಡಾವಣೆಯ, ಯಶಸ್ವಿಯಾಗಿ ನೆರವೇರಿಸಿತ್ತು. ಇಸ್ರೋ ಸಂಸ್ಥೆ ಹೀಗೆ, ಕಪ್ಪುರಂಧ್ರದ ನಿಗೂಢ ಜಗತ್ತಿನ ಕುರಿತು ಆಳ ಅಧ್ಯಯನ ನಡೆಸಲು ಯೋಜನೆ ಆರಂಭಿಸಿತ್ತು. ಜೊತೆಗೆ ಎಕ್ಸ್ ರೇ ಮೂಲದ ನಿಗೂಢತೆ ಅರಿಯುವ ಪ್ರಯತ್ನ ಕೂಡ ಸಾಗಲಿದೆ. ಇದರ ಜೊತೆಗೆ ಅಮೆರಿಕ ಮೂಲದ ಎಲಾನ್ ಮಸ್ಕ್ ಅವರ ಸಂಸ್ಥೆ ಜೊತೆಗೂ, ಉಪಗ್ರಹ ಉಡಾವಣೆಗೆ ಕೈಜೋಡಿಸಲು ಇಸ್ರೋ ಮುಂದಾಗಿರುವುದು ಈ ವರ್ಷದ ವಿಶೇಷ.












Click it and Unblock the Notifications