Aadhaar: ಶೀಘ್ರವೇ ಆಧಾರ್ ಜೊತೆ ವೋಟರ್ ಐಡಿ ಕೂಡ ಲಿಂಕ್, ಮತದಾರರಿಗೆ ಏನೆಲ್ಲ ಅನುಕೂಲ?
ಈಗಾಗಲೇ ಪಾನ್‌ಕಾರ್ಡ್ ಸೇರಿದಂತೆ ಹಲವು ಮಹತ್ವದ ದಾಖಲೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಿರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಮುಂದುವರಿದಂತೆ ಭಾರತೀಯ ಚುನಾವಣಾ ಆಯೋಗವು ಇದೀಗ ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ. ಮುಂಬರುವ ಚುನಾವಣೆಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇಶದ ಎಲ್ಲ ಮತದಾರರ ಗುರುತಿನ ಚೀಟಿ (ಎಪಿಕ್) ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಮುಂದಾಗಿದೆ. ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ಭಾರತೀಯ ಚುನಾವಣಾ ಆಯೋಗವು ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರೊಂದಿಗೆ ಸಭೆ ಕೂಡ ನಡೆಸಿದೆ.
ಮತದಾರರ ಗುರುತಿನ ಚೀಟಿ (ಎಪಿಕ್) ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಬಗ್ಗೆ ಚರ್ಚಿಸಲು ಕರೆದಿದ್ದ ಈ ನಿರ್ಣಾಯಕ ಸಭೆಯಲ್ಲಿ ಚುನಾವಣಾ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ, ಕೇಂದ್ರ ಗೃಹ ಕಾರ್ಯದರ್ಶಿ, ಶಾಸಕಾಂಗ ಇಲಾಖೆಯ ಕಾರ್ಯದರ್ಶಿ, ಯುಐಡಿಎಐ ಕಾರ್ಯದರ್ಶಿ ಮತ್ತು ಸಿಇಒ ಮತ್ತು ಇಸಿಐನ ತಾಂತ್ರಿಕ ತಜ್ಞರು ಭಾಗವಹಿಸಿದ್ದರು.

ಸಂವಿಧಾನದ 326ನೇ ವಿಧಿ ಹಾಗೂ 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸಂಬಂಧಿತ ನಿಬಂಧನೆಗಳನ್ನು ಈ ಪ್ರಕ್ರಿಯೆಯು ಕಟ್ಟುನಿಟ್ಟಾಗಿ ಪಾಲಿಸುತ್ತದೆ ಎಂದು ಆಯೋಗವು ಸ್ಪಷ್ಟವಾಗಿ ಹೇಳಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಆಧಾರ್ ಎನ್ನುವುದು ಪೌರತ್ವವಲ್ಲ, ಅದೊಂದು ಗುರುತಿನ ಪುರಾವೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ. 326ನೇ ವಿಧಿಯ ಪ್ರಕಾರ ಭಾರತದ ನಾಗರಿಕರಿಗೆ ಮಾತ್ರ ಮತದಾನದ ಹಕ್ಕು ನೀಡಬಹುದು. ಆಧಾರ್ ಕಾರ್ಡ್ ವ್ಯಕ್ತಿಯ ಗುರುತನ್ನು ಮಾತ್ರ ಸ್ಥಾಪಿಸುತ್ತದೆ ಎಂದು ಆಯೋಗ ಹೇಳಿದೆ. ಹಾಗಾಗಿ ಈ ವಿಷಯದ ಕುರಿತು ಯುಐಡಿಎಐ ಮತ್ತು ಇಸಿಐ ತಜ್ಞರ ನಡುವೆ ಶೀಘ್ರದಲ್ಲೇ ತಾಂತ್ರಿಕ ಸಮಾಲೋಚನೆ ನಡೆಯಲಿವೆ ಎಂದು ತಿಳಿದುಬಂದಿದೆ.
ಚುನಾವಣಾ ಆಯೋಗವು ಇದೇ ಈ ತಿಂಗಳಾಂತ್ಯದೊಳಗೆ ಚುನಾವಣಾ ನೋಂದಣಿ ಅಧಿಕಾರಿಗಳು, ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಮುಖ್ಯ ಚುನಾವಣಾ ಅಧಿಕಾರಿಗಳ ಮಟ್ಟದಲ್ಲಿ ಸರ್ವಪಕ್ಷ ಸಭೆಗಳನ್ನು ನಡೆಸಲು ಸಜ್ಜಾಗಿದೆ. ಈ ಹೊಸ ನಿರ್ಧಾರವು ಚುನಾವಣಾ ನಿರ್ವಹಣೆಯ ಪ್ರತಿಯೊಂದು ಹಂತದಲ್ಲೂ ರಾಜಕೀಯ ಪಕ್ಷಗಳೊಂದಿಗೆ ನೇರ ಸಂಬಂಧವನ್ನು ಬೆಳೆಸಲು ಪ್ರಯತ್ನಿಸುತ್ತದೆ. ಅಲ್ಲದೆ ಅವರ ಸಲಹೆಗಳನ್ನು ಕೂಡ ಕೇಳಲಾಗುತ್ತದೆ. ಮುಂಬರುವ ಚುನಾವಣೆಗಳಿಗೆ ಮುಂಚಿತವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಒಳಗೊಳ್ಳುವಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯೊಂದಿಗೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ಭಾರತೀಯ ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಚುನಾವಣಾ ಆಯೋಗಕ್ಕೆ ರಾಹುಲ್ ಸಲಹೆ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತ ಚುನಾವಣಾ ಆಯೋಗವು ಆಧಾರ್ ಅನ್ನು ಮತದಾರರ ಗುರುತಿನ ಚೀಟಿಗಳೊಂದಿಗೆ ಲಿಂಕ್ ಮಾಡುವುದಾಗಿ ಘೋಷಿಸಿದೆ. ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಮತದಾರರ ಪಟ್ಟಿಗಳ ಸಮಸ್ಯೆಗಳನ್ನು ಪದೇ ಪದೇ ಹೇಳುತ್ತಲೇ ಇವೆ. ಇದರಲ್ಲಿ ಅಸಹಜವಾಗಿ ಹೆಚ್ಚಿನ ಸೇರ್ಪಡೆಗಳು, ಅನಿರೀಕ್ಷಿತ ಅಳಿಸುವಿಕೆಗಳು ಮತ್ತು ನಕಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗಳು ಸೇರಿವೆ ಎಂದಿದ್ದಾರೆ.
ಆಧಾರ್ ನಕಲಿ ಮತದಾರರ ಗುರುತಿನ ಚೀಟಿ ಸಂಖ್ಯೆಗಳನ್ನು ಪರಿಹರಿಸಬಹುದಾದರೂ, ಬಡವರು ಮತ್ತು ಅತ್ಯಂತ ಅಂಚಿನಲ್ಲಿರುವವರು ಲಿಂಕ್ ಪ್ರಕ್ರಿಯೆಯಲ್ಲಿ ತೊಂದರೆಗಳನ್ನು ಎದುರಿಸುವ ಸಾಧ್ಯತೆ ಹೆಚ್ಚು. ಯಾವುದೇ ಭಾರತೀಯರು ತಮ್ಮ ಮತದಿಂದ ವಂಚಿತರಾಗಬಾರದು. ಹಾಗಾಗಿ ಗೌಪ್ಯತೆಯ ಕಾಳಜಿಗಳನ್ನು ಪರಿಹರಿಸಬೇಕು ಎಂದು ಚುನಾವಣಾ ಆಯೋಗಕ್ಕೆ ರಾಹುಲ್ ಸಲಹೆ ನೀಡಿದ್ದಾರೆ.
ಈಗ ಆಯೋಗವು ಸಮಸ್ಯೆಯನ್ನು ಒಪ್ಪಿಕೊಂಡಿರುವುದರಿಂದ, ಮಹಾರಾಷ್ಟ್ರ 2024ರ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳ ಸಂಪೂರ್ಣ ಮತದಾರರ ಫೋಟೋ ರೋಲ್‌ಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು. ಈ ಹಿಂದೆ ನನ್ನ ಬೇಡಿಕೆಯಾಗಿದ್ದ ಮತದಾರರ ಸೇರ್ಪಡೆ ಮತ್ತು ಅಳಿಸುವಿಕೆಗಳ ಸಮಸ್ಯೆಯನ್ನು ಸಹ ಪರಿಹರಿಸಬೇಕು ಎಂದಿದ್ದಾರೆ.












Click it and Unblock the Notifications