ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ದರ ಪಟ್ಟಿ ನಿಗದಿ

ಅಭ್ಯರ್ಥಿಗಳು ಮತದಾರರಿಗೆ ನೀಡಬಹುದಾದ 2 ಬಿಸ್ಕತ್ತು ಮತ್ತು ಒಂದು ಚಹಾಕ್ಕೆ 9 ರೂ. ಹೂಹಾರಕ್ಕೆ 90 ರೂ, ಕುರ್ಚಿಗೆ 36, ಧ್ವನಿವರ್ಧಕಕ್ಕೆ 1725 ರೂ. ದರದಲ್ಲಿ ಆಯೋಗವು ಲೆಕ್ಕ ಹಾಕಲಿದೆ. ಆದರೆ ಸಹಜವಾಗಿಯೇ, ಚುನಾವಣಾ ಆಯೋಗದ ಈ ದರಪಟ್ಟಿಗೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.
ಮಾರುಕಟ್ಟೆಯಲ್ಲಿ ಈ ವಸ್ತುಗಳು ಇನ್ನೂ ಇನ್ನೂ ಕಡಿಮೆ ಬೆಲೆಗೆ ದೊರೆಯುತ್ತವೆ. ಆದರೆ ಆಯೋಗವು ದರವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಗದಿ ಮಾಡಿದೆ ಎಂದು ದೂರಲಾಗಿದೆ. ಹಾಗಾಗಿ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.
ಈ ಲೆಕ್ಕಾಚಾರ ಪಟ್ಟಿಯಿಂದಾಗಿ ಅಭ್ಯರ್ಥಿಗಳು ಇನ್ನು ಅಳೆದೂ ತೂಗಿಯೇ ಖರ್ಚು ಮಾಡಬೇಕು. ಇಷ್ಟಾನುಸಾರ ವೇದಿಕೆ ಹಾಕಿ ಪ್ರಚಾರ ಸಭೆ ಮಾಡೋದು, ಸಿಕ್ಕ ಸಿಕ್ಕವರಿಗೆ ಚಹಾ ಕೊಡಿಸೋದು, ಊಟ ಕೊಡಿಸೋದು, ಹಾರ ಹಾಕಿಸಿಕೊಳ್ಳುವುದು ಮಾಡುವಂತಿಲ್ಲ. ಒಂದು ವೇಳೆ ಹೆಚ್ಚು ಖರ್ಚು ಮಾಡಿದರೆ, ವೆಚ್ಚ ಮಿತಿ ದಾಟಿದರೆ ಅಭ್ಯರ್ಥಿಗಳ ವೆಚ್ಚದ ಲಿಮಿಟ್ ಜಾಸ್ತಿಯಾಗಿ ಆಯೋಗದ ಕೆಂಗಣ್ಣಿಗೆ ಬೀಳಬೇಕಾಗುತ್ತದೆ.
ಈ ಖರ್ಚು ವೆಚ್ಚಗಳ ಪಟ್ಟಿ ಕೊಟ್ಟಿರುವ ಆಯೋಗವು, ಚುನಾವಣಾ ಪ್ರಚಾರ ಸಭೆಗಳ ಮೇಲೆ ನಿಗಾಯಿಡಲಿದೆ. ಪ್ರತಿ ಅಭ್ಯರ್ಥಿ ಕೇವಲ 14 ಲಕ್ಷ ರೂ.ಗಳನ್ನಷ್ಟೇ ವೆಚ್ಚ ಮಾಡಬೇಕಿರುವುದರಿಂದ, ಮಿತಿ ಮೀರುತ್ತಾರೆಯೇ ಎಂದು ಆಯೋಗವು ಅಳತೆ ಮಾಡಲಿದೆ.
ಕೇಂದ್ರ ಚುನಾವಣಾ ಆಯೋಗವು ವೆಚ್ಚದ ಮಿತಿಯನ್ನು ಈ ಹಿಂದೆ 14 ಲಕ್ಷ ರೂ. ಗೆ ನಿಗದಿ ಮಾಡಿದೆ. ಇದೀಗ ಅಭ್ಯರ್ಥಿಗಳಿಗೆ ಪ್ರತ್ಯೇಕ ಅಕೌಂಟ್ ಸೃಷ್ಟಿಸಿಕೊಳ್ಳಲು ಹೇಳಿರುವ ಆಯೋಗ, ಈ ಸಂಬಂಧ ಲೆಕ್ಕ ಪತ್ರಗಳನ್ನು ಚುನಾವಣೆ ಮುಗಿದ ನಂತರ ತನಗೆ ಸಲ್ಲಿಸಲು ಹೇಳಿದೆ. ಅದಾದ ನಂತರ ಆಯೋಗವು ತಾನು ಬರೆದಿಟ್ಟುಕೊಂಡಿರುವ ಲೆಕ್ಕ (shadow register) ಮತ್ತು ಅಭ್ಯರ್ಥಿಗಳು ನೀಡಿರುವ ಲೆಕ್ಕ ಪತ್ರಗಳನ್ನು ತಾಳೆ ಹಾಕಲಿದೆ.
ಚುನಾವಣಾ ಪ್ರಚಾರಕ್ಕಾಗಿ ಸ್ಟಾರ್ ಕ್ಯಾಂಪೇನರ್ ಗಳನ್ನು ಕರೆತಂದಲ್ಲಿ ಅವರ ಖರ್ಚು ವೆಚ್ಚವನ್ನು ಆಯಾ ರಾಜಕೀಯ ಪಕ್ಷಗಳೇ ಭರಿಸಬೇಕು ಎಂದು ಚುನಾವಣಾ ಆಯೋಗವು (Election Commission of India) ಕಟ್ಟು ನಿಟ್ಟಾಗಿ ಹೇಳಿದೆ. ಸ್ಟಾರ್ ಗಳ ಫೋಟೋಗಳನ್ನು ಬಳಸಿಕೊಂಡರೂ ಸಹ ಈ ವೆಚ್ಚವನ್ನೂ ಅಭ್ಯರ್ಥಿಗಳ ಲೆಕ್ಕಕ್ಕೇ ಹಾಕಲಾಗುವುದು ಎಂದೂ ಹೇಳಿದೆ.
ದರ ಪಟ್ಟಿ ಇಂತಿದೆ (ಒಂದು ದಿನಕ್ಕೆ)
* ಧ್ವನಿವರ್ಧಕ - 1600 ರೂ.
* ವೇದಿಕೆ - 400 ರೂ.
* ಇನ್ನೋವಾ/ಸುಮೋ ಗಾಡಿ - 1825 ರೂ.
* ಚಾಲಕನ ವೇತನ - 400 ರೂ.
* ಕುಶನ್ ಇರುವ ಕುರ್ಚಿ - 27 ರೂ.
* ಕವರ್ ಇರುವ ಕುರ್ಚಿ - 36 ರೂ.
* ಕೂಲರ್ - 240 ರೂ.
* ಫ್ಯಾನ್ಸಿ ಪರದೆ - 300 ರೂ.
* ಮಾಂಸಾಹಾರಿ ಉಪಾಹಾರ - 39 ರೂ.
(2 ಆಮ್ಲೆಟ್/ಕಟ್ಲೆಟ್/ನಾಲ್ಕು ಬ್ರೆಡ್ ತುಂಡು)
* ಮಾಂಸಾಹಾರಿ ಊಟ - 190 ರೂ.
(ಚಿಕನ್/ಮಟನ್, ರಾಯ್ತ, ಅನ್ನ, ರೋಟಿ, ಸಲಾಡ್, ಸ್ವೀಟ್)












Click it and Unblock the Notifications