Breaking: ಫೆಬ್ರವರಿ 11ರವರೆಗೆ ಪಂಚರಾಜ್ಯಗಳಲ್ಲಿ ರೋಡ್ ಶೋ ಮೇಲಿನ ನಿರ್ಬಂಧ ವಿಸ್ತರಣೆ
ನವದೆಹಲಿ, ಜನವರಿ 31: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಿನ್ನೆಲೆ ಐದು ರಾಜ್ಯಗಳಲ್ಲಿ ಸಾರ್ವಜನಿಕ ಸಭೆ, ಚುನಾವಣಾ ಮೆರವಣಿಗೆ ಮತ್ತು ರೋಡ್ ಶೋ ಮೇಲಿನ ನಿರ್ಬಂಧವನ್ನು ಫೆಬ್ರವರಿ 11ರವರೆಗೂ ವಿಸ್ತರಿಸಲಾಗಿದೆ.
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ ನೇತೃತ್ವದಲ್ಲಿ ಸಭೆ ನಡೆಸಿದ್ದು, ಸಾರ್ವಜನಿಕ ಪ್ರಚಾರಕ್ಕೆ ನಿರ್ಬಂಧವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಆದಾಗ್ಯೂ, ಚುನಾವಣಾ ಆಯೋಗವು ಗರಿಷ್ಠ 1000 ಜನರ ಸಾಮರ್ಥ್ಯದ ಭೌತಿಕ ರ್ಯಾಲಿಗಳು, ಒಳಾಂಗಣ ಸಭೆಗಳಲ್ಲಿ ಗರಿಷ್ಠ 500 ಜನರಿಗೆ ಅನುಮತಿ ನೀಡಲಾಗಿದೆ. ಮನೆ ಮನೆ ಪ್ರಚಾರದ ವೇಳೆ 20 ಜನರನ್ನು ಜೊತೆಗೆ ಕರೆದುಕೊಂಡು ಹೋಗುವುದಕ್ಕೆ ಅವಕಾಶ ನೀಡಲಾಗಿದೆ.
ಕೊವಿಡ್ -19 ಪ್ರಕರಣಗಳ ಹೆಚ್ಚುತ್ತಿರುವ ಓಮಿಕ್ರಾನ್ ರೂಪಾಂತರವನ್ನು ಗಮನದಲ್ಲಿಟ್ಟುಕೊಂಡು, ಕಳೆದ ಜನವರಿ 8 ರಿಂದ ಜನವರಿ 15 ರವರೆಗೆ ಭೌತಿಕ ರ್ಯಾಲಿ ಮತ್ತು ರೋಡ್‌ಶೋಗಳ ಮೇಲೆ ಚುನಾವಣಾ ಆಯೋಗ ನಿಷೇಧ ಹೇರಿತ್ತು, ನಂತರ ಅದನ್ನು ಜನವರಿ 22 ರವರೆಗೆ ವಿಸ್ತರಿಸಲಾಗಿತ್ತು.

ಎರಡನೇ ಬಾರಿ ನಿಷೇಧ ವಿಸ್ತರಣೆ:
ಕಳೆದ ಜನವರಿ 22ರಂದು ಎರಡನೇ ಬಾರಿ ಸಭೆ ನಡೆಸಿದ ಚುನಾವಣಾ ಆಯೋಗವು ರೋಡ್ ಶೋ ಮತ್ತು ಬಹಿರಂಗ ಸಭೆ ಮತ್ತು ಮೆರವಣಿಗೆ ಮೇಲಿನ ನಿಷೇಧವನ್ನು ಜನವರಿ 31ರವರೆಗೆ ವಿಸ್ತರಿಸಿತು. ಆದಾಗ್ಯೂ ಮೊದಲ ಎರಡು ಹಂತಗಳಲ್ಲಿ ಮತದಾನ ನಡೆಯಲಿರುವ ಕ್ಷೇತ್ರಗಳಲ್ಲಿ ಗರಿಷ್ಠ 500 ಜನರೊಂದಿಗೆ ಸಾರ್ವಜನಿಕ ಸಭೆಗಳಿಗೆ ಅವಕಾಶ ನೀಡಲಾಗಿತ್ತು. ಕೊರೊನಾವೈರಸ್ ಶಿಷ್ಟಾಚಾರಗಳನ್ನು ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲು ವಿಫಲರಾದ ಅಧಿಕಾರಿಗಳ ವಿರುದ್ಧ ಚುನಾವಣಾ ಸಂಸ್ಥೆಯು ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಕೆ ನೀಡಲಾಗಿತ್ತು.
ಮನೆ ಮನೆ ಪ್ರಚಾರಕ್ಕೆ ನಿಯಮಗಳು ಅನ್ವಯ:
ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಾರ್ವಜನಿಕ ಸಭೆ, ಸಮಾರಂಭ, ಕಾರ್ಯಕ್ರಮಗಳ ಜೊತೆ ಪ್ರಚಾರ ಮೆರವಣಿಗೆಗಳಿಗೆ ಈಗಾಗಲೇ ಎರಡು ಬಾರಿ ನಿರ್ಬಂಧವನ್ನು ವಿಸ್ತರಿಸಲಾಗಿದೆ. ಇದರ ಜೊತೆಗೆ ಚುನಾವಣಾ ಆಯೋಗವು ಕಟ್ಟುನಿಟ್ಟಾದ ಕೊವಿಡ್ ಮಾರ್ಗಸೂಚಿಗಳನ್ನು ರೂಪಿಸಿದೆ. ಮನೆ-ಮನೆಗೆ ಪ್ರಚಾರದ ಸಂದರ್ಭದಲ್ಲಿ ಐದರ ಬದಲಿಗೆ 10 ಜನರು ಭಾಗವಹಿಸುವುದಕ್ಕೆ ಈ ಹಿಂದೆ ಅನುಮತಿ ನೀಡಲಾಗಿತ್ತು. ಈಗ ಅದರ ಪ್ರಮಾಣವನ್ನು 10 ರಿಂದ 20 ಜನರಿಗೆ ಹೆಚ್ಚಿಸಲಾಗಿದೆ.
ಐದು ರಾಜ್ಯಗಳಿಗೆ ಏಳು ಹಂತಗಳಲ್ಲಿ ಮತದಾನ:
ಕಳೆದ ಜನವರಿ 8ರಂದು ಐದು ರಾಜ್ಯಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ಫೆಬ್ರವರಿ 14 ರಂದು ಒಂದೇ ಹಂತದಲ್ಲಿ ಮತದಾನ ನಡೆದರೆ, ಪಂಜಾಬ್ ನಲ್ಲಿ ಫೆಬ್ರವರಿ 20ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.












Click it and Unblock the Notifications