El Nino: ಗೊಬ್ಬರ ಕೊಳ್ಳಲು ರೈತರು ಮುಂದಾಗುತ್ತಿಲ್ಲ, ಎಲ್ ನೀನೋ ಎಫೆಕ್ಟ್ ಇದು, ಹೀಗಾದ್ರೆ ಹೊಟ್ಟೆಗೆ ಏನು ತಿನ್ನೋದು?
El Nino: ದೇಶದಲ್ಲಿ ಎಲ್ ನಿನೊ ಪರಿಣಾಮ ವರುಣನ ಆರ್ಭಟ ಸಂಪೂರ್ಣ ತಗ್ಗಿದ್ದು, ಕೆಲವೆಡೆ ಮಾತ್ರ ಮಳೆ ಮುಂದುವರೆದಿದೆ. ಅದರಲ್ಲೂ ಕೃಷಿ ಕ್ಷೇತ್ರದ ಮೇಲೆ El Nino ಪ್ರಭಾವ ಹೆಚ್ಚಾಗಿದ್ದು, ಯೂರಿಯಾ ಸೇರಿದಂತೆ ಪ್ರಮುಖ ರಸಗೊಬ್ಬರಗಳ ಮಾರಾಟ ಗಣನೀಯವಾಗಿ ಕಡಿಮೆಯಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಕೃಷಿ ಕ್ಷೇತ್ರದ ಮೇಲೆ ಎಲ್ ನಿನೊ ಮತ್ತು ಕ್ಷೀಣಿಸಿದ ಮುಂಗಾರು ಮಳೆಯ ದುಷ್ಪರಿಣಾಮಗಳು ಈಗ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿವೆ. ದೇಶದಲ್ಲಿ ಯೂರಿಯಾ ಸೇರಿದಂತೆ ಎಲ್ಲಾ ಪ್ರಮುಖ ರಸಗೊಬ್ಬರಗಳ ದೇಶೀಯ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯವಾಗಿ ತಗ್ಗಿದೆ. ಮಳೆಯ ಅಭಾವದಿಂದಾಗಿ ಸಾಗುವಳಿ ಪ್ರದೇಶ ಕಡಿಮೆಯಾಗಿದ್ದು, ರೈತರಿಂದ ರಸಗೊಬ್ಬರಕ್ಕೆ ಬೇಡಿಕೆ ತೀವ್ರವಾಗಿ ಕಡಿಮೆಯಾಗಿದೆ.

ರಸಗೊಬ್ಬರಗಳ ಖರೀದಿಯಲ್ಲಿ ಗಮನಾರ್ಹ ಇಳಿಕೆ
ಏಪ್ರಿಲ್-ಸೆಪ್ಟೆಂಬರ್ 2026ರ (ಖಾರೀಫ್ ಅಥವಾ ಮುಂಗಾರು ಹಂಗಾಮು) ಅವಧಿಯಲ್ಲಿ ವಿವಿಧ ಪೋಷಕಾಂಶಗಳನ್ನು ಒಳಗೊಂಡ ರಸಗೊಬ್ಬರಗಳ (Complex Fertilisers) ಮಾರಾಟದಲ್ಲಿ ಶೇಕಡ 22.2ರಷ್ಟು ತೀವ್ರ ಕುಸಿತ ದಾಖಲಾಗಿದೆ. ಇನ್ನು ಪೊಟ್ಯಾಷ್ ಮಾರಾಟ ಶೇಕಡ 11.7ರಷ್ಟು ಹಾಗೂ ಯೂರಿಯಾ ಮಾರಾಟ ಶೇಕಡ 4.1ರಷ್ಟು ಕಡಿಮೆಯಾಗಿದೆ.
ವಿಶೇಷ ಅಂದ್ರೆ ದೇಶದಲ್ಲಿ ಯೂರಿಯಾ ಕೊರತೆಯೇನೂ ಇಲ್ಲ. ಇದೇ ಅವಧಿಯಲ್ಲಿ ಯೂರಿಯಾ ಉತ್ಪಾದನೆ ಶೇಕಡ 4.3ರಷ್ಟು ಮತ್ತು ಆಮದು ಶೇಕಡ 40.5ರಷ್ಟು ಹೆಚ್ಚಾಗಿದೆ. ರಸಗೊಬ್ಬರವು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ರೈತರು ಅದನ್ನು ಖರೀದಿಸುತ್ತಿಲ್ಲ. ಅಂದರೆ ಸಮಸ್ಯೆ ಸರಬರಾಜಿನದ್ದಲ್ಲ, ಬದಲಿಗೆ ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಇಲ್ಲದಿರುವುದರಿಂದ ಉಂಟಾಗಿರುವ ಕ್ಷೀಣಿಸಿದ ಬೇಡಿಕೆಯದ್ದು.
ದಕ್ಷಿಣ ಭಾರತದ ರಾಜ್ಯಗಳು, ಮಹಾರಾಷ್ಟ್ರದ ಮರಾಠವಾಡ ಮತ್ತು ವಿದರ್ಭ, ಗುಜರಾತ್‌ನ ಸೌರಾಷ್ಟ್ರ ಮತ್ತು ಕಚ್, ರಾಜಸ್ಥಾನ, ದಕ್ಷಿಣ ಬಿಹಾರ ಹಾಗೂ ಅಸ್ಸಾಂ ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದೆ. ಜೂನ್-ಸೆಪ್ಟೆಂಬರ್ ನಡುವಿನ ನೈಋತ್ಯ ಮುಂಗಾರು ಮಳೆಯು ದೇಶಾದ್ಯಂತ ಶೇಕಡ 12.6ರಷ್ಟು ಕೊರತೆಯನ್ನು ಎದುರಿಸಿದೆ. ಅಕ್ಟೋಬರ್‌ನಲ್ಲೂ ಮಳೆ ಅಭಾವ ಶೇಕಡ 51.8ಕ್ಕೆ ತಲುಪಿದೆ. ಮಣ್ಣಿನಲ್ಲಿ ತೇವಾಂಶವಿಲ್ಲದೆ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವುದು ಗೊಬ್ಬರದ ಬಳಕೆಯನ್ನು ತಗ್ಗಿಸಿದೆ.
ಕಳೆದ ವರ್ಷ ಯೂರಿಯಾದ ಅಧಿಕೃತ ದರ 266.50 ರೂಪಾಯಿ ಇದ್ದಾಗ, ಅಭಾವದ ಭೀತಿಯಿಂದ ರೈತರು ಕಪ್ಪು ಮಾರುಕಟ್ಟೆಯಲ್ಲಿ 350 ರಿಂದ 450 ರೂಪಾಯಿ ಕೊಟ್ಟು ಖರೀದಿಸಿದ್ದರು. ಆದರೆ ಈ ಬಾರಿ ಗೋದಾಮುಗಳಲ್ಲಿ ಸಾಕಷ್ಟು ದಾಸ್ತಾನು ಇದ್ದರೂ, ರೈತರಲ್ಲಿ ಖರೀದಿಸುವ ಆಸಕ್ತಿ ಇಲ್ಲದಿರುವುದರಿಂದ ಕಪ್ಪು ಮಾರುಕಟ್ಟೆ ಬೆಲೆ 300 ರೂಪಾಯಿಗಿಂತ ಕೆಳಗಿದೆ.
ಹಿಂಗಾರು ಹಂಗಾಮಿಗೂ ಎಲ್ ನಿನೊ ಕಂಟಕ
ಜಾಗತಿಕ ಹವಾಮಾನ ಸಂಸ್ಥೆಗಳ ಪ್ರಕಾರ, ಪ್ರಸ್ತುತ ಎಲ್ ನಿನೊ ಪ್ರಭಾವವು 2027ರ ಜನವರಿ-ಮಾರ್ಚ್‌ವರೆಗೆ ತೀವ್ರವಾಗಿ ಮುಂದುವರೆಯಲಿದ್ದು, ಏಪ್ರಿಲ್-ಮೇ ಹೊತ್ತಿಗೆ ಕ್ಷೀಣಿಸಲಿದೆ. ಇದರಿಂದಾಗಿ ಚಳಿಗಾಲದಲ್ಲಿ ಮಳೆ ಕಡಿಮೆಯಾಗಿ ತಾಪಮಾನ ಹೆಚ್ಚಾಗಬಹುದು. ಇದು ಮುಂಬರುವ ಹಿಂಗಾರು ಹಂಗಾಮಿನ ಬೆಳೆಗಳ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ನಡುವೆಯೇ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ಕೊರತೆಯಾಗದಂತೆ ಯೂರಿಯಾ ಮತ್ತು ಡಿಎಪಿ ಪೂರೈಸಲು ಸರ್ಕಾರ ಆದ್ಯತೆ ನೀಡುತ್ತಿದೆ.
ಟ್ರ್ಯಾಕ್ಟರ್ ಮಾರಾಟದಲ್ಲೂ ಕುಸಿತ
ಕೃಷಿ ಕ್ಷೇತ್ರದ ಈ ಮಂದಗತಿ ಕೇವಲ ರಸಗೊಬ್ಬರಕ್ಕೆ ಸೀಮಿತವಾಗಿಲ್ಲ. ವಾಹನ ವಲಯದಲ್ಲೂ ಇದು ಪ್ರಭಾವ ಬೀರಿದೆ. 2026ರ ಸೆಪ್ಟೆಂಬರ್‌ನಲ್ಲಿ ದೇಶೀಯ ಟ್ರ್ಯಾಕ್ಟರ್ ಮಾರಾಟವು ಶೇ. 18.1ರಷ್ಟು ಕುಸಿದಿದೆ (1,19,667 ಯುನಿಟ್‌ಗಳು). ಒಟ್ಟಿನಲ್ಲಿ ಎಲ್ ನಿನೊ ಸೃಷ್ಟಿಸಿರುವ ಒಣಹವೆ ದೇಶದ ಕೃಷಿ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದ ಪೆಟ್ಟು ನೀಡಿದೆ.


Click it and Unblock the Notifications
