'ಏಕನಾಥ್ ಶಿಂಧೆ ಕನಸಿನಲ್ಲಿಯೂ ರಾಜೀನಾಮೆ ನೀಡುವುದಿಲ್ಲ'- ಅಜಿತ್ ಪವಾರ್
ಮುಂಬೈ ಮೇ 12: ನೈತಿಕ ಹೊಣೆ ಹೊತ್ತು ಹಾಲಿ ಸಿಎಂ ಏಕನಾಥ್ ಶಿಂಧೆ ರಾಜೀನಾಮೆ ನೀಡಬೇಕು ಎಂದು ಶಿವಸೇನಾ (ಯುಟಿಬಿ) ನಾಯಕ ಉದ್ಧವ್ ಠಾಕ್ರೆ ಒತ್ತಾಯಕ್ಕೆ ಎನ್‌ಸಿಪಿ ನಾಯಕ ಅಜಿತ್ ಪವಾರ್ ಪ್ರತಿಕ್ರಿಯಿಸಿದ್ದಾರೆ. ಏಕನಾಥ್ ಶಿಂಧೆ ಅವರು ಕನಸಿನಲ್ಲಿಯೂ ರಾಜೀನಾಮೆ ನೀಡುವುದಿಲ್ಲ ಎಂದು ಅಜಿತ್ ಪವಾರ್ ಹೇಳಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೂ ಮತ್ತು ಪ್ರಸ್ತುತ ಜನ ನಾಯಕರಿಗೂ ಅಗಾಧ ವ್ಯತ್ಯಾಸವಿದೆ ಎಂದು ಎನ್‌ಸಿಪಿ ನಾಯಕ ಹೇಳಿದ್ದಾರೆ.
ರಾಜ್ಯದಲ್ಲಿ 2022ರ ರಾಜಕೀಯ ಬಿಕ್ಕಟ್ಟಿನ ಕುರಿತು ಸುಪ್ರೀಂ ಕೋರ್ಟ್ ಗುರುವಾರ ನೀಡಿದ ತೀರ್ಪಿನ ನಂತರ ನೈತಿಕ ಆಧಾರದ ಮೇಲೆ ಸಿಎಂ ಶಿಂಧೆ ಮತ್ತು ಅವರ ಉಪ ದೇವೇಂದ್ರ ಫಡ್ನವಿಸ್ ಅವರ ರಾಜೀನಾಮೆಯನ್ನು ನೀಡಬೇಕು ಎಂದು ಠಾಕ್ರೆ ಗುರುವಾರ ಒತ್ತಾಯಿಸಿದ್ದರು.

ಉದ್ಧವ್ ಠಾಕ್ರೆ ಹೇಳಿದ್ದೇನು?
ಮಹಾರಾಷ್ಟ್ರ ಮೂಲ ಶಿವಸೇನೆಯಿಂದ ಬಂಡಾಯವೆದ್ದು ಏಕನಾಥ ಶಿಂಧೆ ಹಿಂದೆ ಹೋಗಿದ್ದ 16 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
There is no need of demanding resignation from the current CM Eknath Shinde on moral grounds. We know he will not resign even in his dreams. There is a huge difference between former PM Atal Bihari Vajpayee and the current people: NCP leader Ajit Pawar on Uddhav Thackeray's… pic.twitter.com/MQS7COt08k
— ANI (@ANI) May 12, 2023
ತೀರ್ಪು ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆಗೂಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉದ್ಧವ್ ಠಾಕ್ರೆಯವರು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಿ ಏಕನಾಥ್ ಶಿಂಧೆಯವರು ಗೆದ್ದಿದ್ದಾರೆ. ನನ್ನಂತೆಯೇ ಏಕನಾಥ್ ಶಿಂಧೆ ಕೂಡ ರಾಜೀನಾಮೆ ನೀಡಬೇಕು ಎಂದು ಹೇಳಿದರು.

ಕಳೆದ ವರ್ಷ ಜೂನ್ ತಿಂಗಳಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಈ ರಾಜೀನಾಮೆ ಕಾನೂನು ರೀತಿಯಾಗಿ ತಪ್ಪಾಗಿರಬಹುದು. ಆದರೆ, ನೈತಿಕ ಆಧಾರದ ಮೇಲೆ ನಾನು ರಾಜೀನಾಮೆ ನೀಡಿದ್ದೆ ಎಂದು ತಿಳಿಸಿದರು. ಶಿಂಧೆ ಬಣದ ಶಾಸಕರು ನನ್ನ ಪಕ್ಷಕ್ಕೆ ಮತ್ತು ನನ್ನ ತಂದೆ (ಬಾಳ ಠಾಕ್ರೆ) ಪರಂಪರೆಗೆ ದ್ರೋಹ ಮಾಡಿದ್ದಾರೆ. ನನ್ನಂತೆಯೇ ಅವರೂ ರಾಜೀನಾಮೆ ನೀಡಬೇಕು ಎಂದಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದ್ದೇನೆ?
ಶಿವಸೇನಾ ಮುಖ್ಯಸ್ಥರಾಗಿದ್ದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರ ಕಳೆದ ವರ್ಷ ಬಂಡಾಯದ ಬಳಿಕ ಪತನಗೊಂಡಿತ್ತು. ಅದರ ಬಳಿಕ ಆಗಿನ ರಾಜ್ಯಪಾಲರು ಉದ್ಧವ್ ಠಾಕ್ರೆ ಅವರಿಗೆ ವಿಶ್ವಾಸ ಮತ ಸಾಬೀತುಪಡಿಸಲು ಸೂಚನೆ ನೀಡಿದ್ದು ಅಕ್ರಮ ನಿರ್ಧಾರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗಿದ್ದರೂ ಶಿಂಧೆ ಸರ್ಕಾರ ಮುಂದುವರಿಯಲು ಅವಕಾಶ ನೀಡಿದೆ. ಇದು ಉದ್ಧವ್ ಅವರಿಗೆ ಭಾರಿ ಹಿನ್ನಡೆ ಉಂಟುಮಾಡಿದೆ.
ಕಳೆದ ವರ್ಷದ ಜೂನ್ 30ರಂದು ವಿಧಾನಸಭೆಯಲ್ಲಿ ವಿಶ್ವಾಸ ಮತ ಸಾಬೀತುಪಡಿಸಲು ಆಗಿನ ಸಿಎಂ ಉದ್ಧವ್ ಠಾಕ್ರೆ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸೂಚನೆ ನೀಡಿದ್ದು ಸಮರ್ಥನೀಯವಲ್ಲ. ಆದರೆ ಅವರು ಬಹುಮತ ಪರೀಕ್ಷೆಗೆ ಒಳಪಡದೆ ರಾಜೀನಾಮೆ ನೀಡಿರುವುದರಿಂದ ಅವರ ಸರ್ಕಾರವನ್ನು ಮತ್ತೆ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಏಕನಾಥ್ ಶಿಂಧೆ ಪ್ರತಿಕ್ರಿಯೆ
ಸತ್ಯಕ್ಕೆ ಗೆಲುವಾಗಿದೆ ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ. "ನಾವು ನಮ್ಮ ಸರ್ಕಾರವನ್ನು ಕಾನೂನಾತ್ಮಕ ಹಾಗೂ ಸಾಂವಿಧಾನಿಕ ರೀತಿಯಲ್ಲಿ ರಚಿಸಿದ್ದೇವೆ. ನಮ್ಮ ಸರ್ಕಾರ ಅಸಾಂವಿಧಾನಿಕ ಎಂದು ಅನೇಕ ಜನರು ಹೇಳುತ್ತಾರೆ. ಆದರೆ ಸುಪ್ರೀಂಕೋರ್ಟ್ ಅವರಿಗೆ ಪಾಠ ಕಲಿಸಿದೆ ಎಂದಿದ್ದಾರೆ.
ಕಳೆದ ತಿಂಗಳು ಶಿಂಧೆ ಮತ್ತು ಸುಮಾರು 40 ಶಾಸಕರು ಬಂಡಾಯವೆದ್ದು, ಬಿಜೆಪಿಯ ಬೆಂಬಲದೊಂದಿಗೆ ಹೊಸ ಸರ್ಕಾರವನ್ನು ರಚಿಸಿದೆ. ಈ ವೇಳೆ ಉದ್ಧವ್ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಶಾಸಕರ ನಡೆಯನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.












Click it and Unblock the Notifications