Maharashtra Election 2024: ಅಧಿಕಾರ ಹಂಚಿಕೆ ಸೂತ್ರ, ಹೊಸ ಬೇಡಿಕೆ ಮುಂದಿಟ್ಟ ಏಕನಾಥ್ ಶಿಂಧೆ

ಮುಂಬೈ, ಡಿಸೆಂಬರ್ 02: ಎರಡು ದಿನದ ವಿಶ್ರಾಂತಿ ಬಳಿಕ ಮಹಾರಾಷ್ಟ್ರದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮುಂಬೈಗೆ ಮರಳಿದ್ದಾರೆ. ರಾಜ್ಯದಲ್ಲಿ 'ಮಹಾಯತಿ' ಮೈತ್ರಿಕೂಟದ ಹೊಸ ಸರ್ಕಾರ ರಚನೆಯ ಮಾತುಕತೆ ಆರಂಭವಾಗಿದೆ. ಬಿಜೆಪಿಯಿಂದ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಡಿಸೆಂಬರ್ 5ರಂದು ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ನಾಯಕರು ಈಗಾಗಲೇ ಘೋಷಣೆ ಮಾಡಿದ್ದಾರೆ.

ಮಹಾರಾಷ್ಟ್ರ ರಾಜ್ಯದ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿ 9 ದಿನ ಕಳೆದಿದೆ. ಆದರೆ ಹೊಸ ಸರ್ಕಾರ ರಚನೆ, ಮುಖ್ಯಮಂತ್ರಿ ಯಾರು? ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಇದ್ದರೂ ಸಹ 'ಮಹಾಯತಿ' ಮೈತ್ರಿಕೂಟದ ಸರ್ಕಾರ ರಚನೆಯಾಗಿಲ್ಲ. ಚುನಾವಣೆಯಲ್ಲಿ 132 ಸೀಟು ಗೆದ್ದು ದೊಡ್ಡ ಪಕ್ಷವಾದ ಬಿಜೆಪಿ ಮುಖ್ಯಮಂತ್ರಿ ಘೋಷಣೆ ಮಾಡಿಲ್ಲ.

Eknath Shinde Power Sharing Talks Son Shrikant Shinde To Be Deputy Chief Minister

ಶುಕ್ರವಾರ ಸರ್ಕಾರ ರಚನೆ ಕುರಿತು ನಡೆಯಬೇಕಿದ್ದ 'ಮಹಾಯತಿ' ಮೈತ್ರಿಕೂಟದ ಸಭೆ ರದ್ದುಗೊಳಿಸಿ ಶಿವಸೇನೆ ನಾಯಕ ಏಕನಾಥ್ ಶಿಂಧೆ ತವರು ಜಿಲ್ಲೆ ಸತಾರಾಕ್ಕೆ ಹೋಗಿದ್ದರು. ಜ್ವರ, ಶೀತದಿಂದ ಬಳಲುತ್ತಿದ್ದ ಅವರು ಎರಡು ದಿನದ ವಿಶ್ರಾಂತಿ ಬಳಿಕ ಮುಂಬೈಗೆ ವಾಪಸ್ ಆಗಿದ್ದು, ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗಿದೆ.

ಬಿಜೆಪಿ ಮುಂದೆ ಹೊಸ ಬೇಡಿಕೆ: ನೂತನ 'ಮಹಾಯತಿ' ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಏಕನಾಥ್ ಶಿಂಧೆ ಸ್ಪಷ್ಟಪಡಿಸಿದ್ದರು. ಆದರೆ ಗೃಹ ಸಚಿವರನ್ನಾಗಿ ಮಾಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದರು. ಆದರೆ ಈಗ ಅವರು ತಮ್ಮ ಪುತ್ರ ಶ್ರೀಕಾಂತ್ ಶಿಂಧೆಯನ್ನು ಉಪ ಮುಖ್ಯಮಂತ್ರಿ ಮಾಡಬೇಕು ಎಂದು ಹೊಸ ಬೇಡಿಕೆ ಇಟ್ಟಿದ್ದಾರೆ.

ಗೃಹ ಖಾತೆಗೆ ಬೇಡಿಕೆ ಇಟ್ಟಿರುವ ವರದಿಗಳನ್ನು ಏಕನಾಥ್ ಶಿಂಧೆ ತಳ್ಳಿ ಹಾಕಿಲ್ಲ. ಆದರೆ ಈ ಕುರಿತು ಮೈತ್ರಿಕೂಟದ ಮೂರು ಪಕ್ಷಗಳ ಪ್ರಮುಖ ನಾಯಕರ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ ಭೇಟಿಯಾದಾಗ ಬಿಜೆಪಿಯವರು ಮುಖ್ಯಮಂತ್ರಿ ಆಗುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಬಿಜೆಪಿ ಪ್ರಮುಖ ಖಾತೆಗಳ ಹಂಚಿಕೆ ವಿಚಾರದಲ್ಲಿ ಅಂತಿಮ ತೀರ್ಮಾನ ಮಾಡಿಲ್ಲ ಎಂಬುದು ಏಕನಾಥ್ ಶಿಂಧೆ ಅಸಮಾಧಾನಕ್ಕೆ ಕಾರಣವಾಗಿದೆ.

ಭಾನುವಾರ ಸಂಜೆ ಮುಂಬೈಗೆ ಆಗಮಿಸಿದ ಏಕನಾಥ್ ಶಿಂಧೆ ಪಕ್ಷದ ಪ್ರಮುಖ ನಾಯಕರ ಜೊತೆ ಸರ್ಕಾರ ರಚನೆಯಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) ನಿಲುವು ಕುರಿತು ವಿವರವಾದ ಚರ್ಚೆಯನ್ನು ನಡೆಸಿದರು. ಅಧಿಕಾರ ಹಂಚಿಕೆ ಕುರಿತು ಪಕ್ಷ ಶೀಘ್ರವೇ ತೀರ್ಮಾನ ಮಾಡಲಿದೆ ಎಂದು ಶಿಂಧೆ ಹೇಳಿದರು.

ಪುತ್ರನಿಗೆ ಡಿಸಿಎಂ ಪಟ್ಟ, ತಮಗೆ ಗೃಹ ಖಾತೆಗೆ ಏಕನಾಥ್ ಶಿಂಧೆ ಬೇಡಿಕೆ ಇಟ್ಟಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರ ನೀಡಲು ಅವರು ನಿರಾಕರಿಸಿದರು. "ನಾವು ಈಗಾಗಲೇ ಅಮಿತ್‌ ಶಾ ಜೊತೆ ಮಾತುಕತೆ ನಡೆಸಿದ್ದೇವೆ. ಮಹಾಯತಿ ಮೈತ್ರಿಕೂಟದ ನಾಯಕರ ಜೊತೆ ನಾವು ಇನ್ನೊಂದು ಸುತ್ತಿನ ಮಾತುಕತೆ ನಡೆಸುತ್ತೇವೆ" ಎಂದು ಹೇಳಿದರು.

"ನಾವು ರಾಜ್ಯದ ಜನರಿಗೆ ಉತ್ತಮ ಆಡಳಿತ ಕೊಡಲು ಬದ್ಧರಾಗಿದ್ದೇವೆ. ಮಹಾಯತಿ ಮೈತ್ರಿಕೂಟದ ಪಕ್ಷಗಳ ಉನ್ನತ ಮಟ್ಟದ ನಾಯಕರ ಸಭೆಯಲ್ಲಿ ಅಧಿಕಾರ ಹಂಚಿಕೆ ಅಂತಿಮಗೊಳಿಸಲಾಗುತ್ತದೆ. ಮುಖ್ಯಮಂತ್ರಿ ಹುದ್ದೆ ಬಗ್ಗೆ ಬಿಜೆಪಿ ಅಂತಿಮ ತೀರ್ಮಾನ ಕೈಗೊಳ್ಳಬೇಕು. ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ನಾವು ಈಗಾಗಲೇ ಹೇಳಿದ್ದೇವೆ" ಎಂದರು.

ಗುರುವಾರ ದೆಹಲಿಯಲ್ಲಿ ದೇವೇಂದ್ರ ಫಡ್ನವೀಸ್, ಏಕನಾಥ್ ಶಿಂಧೆ, ಅಜಿತ್ ಪವಾರ್ ಅಮಿತ್ ಶಾ ಭೇಟಿಯಾಗಿದ್ದರು. ಬಳಿಕ ಶುಕ್ರವಾರ ಮುಂಬೈನಲ್ಲಿ ಮಹಾಯತಿ ಮೈತ್ರಿಕೂಟದ ಸಭೆ ನಡೆಯಬೇಕಿತ್ತು. ಆದರೆ ಸಭೆ ರದ್ದುಗೊಳಿಸಿ ಏಕನಾಥ್ ಶಿಂಧೆ ಸತಾರಾಕ್ಕೆ ತೆರಳಿದ್ದರು. ಅಮಿತ್ ಶಾ ಏಕನಾಥ್ ಶಿಂಧೆ ಬಳಿ ಪ್ರತ್ಯೇಕವಾಗಿ ಮಾತುಕತೆ ನಡೆಸಿ, ಗೃಹ ಖಾತೆಯನ್ನು ಬಿಜೆಪಿಯೇ ಇಟ್ಟುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂಬ ಮಾಹಿತಿ ಇದೆ.

ಬಿಜೆಪಿ, ಶಿವಸೇನೆ ನಡುವೆ ಖಾತೆ ಹಂಚಿಕೆ ಮಾತ್ರವಲ್ಲ ಸ್ಪೀಕರ್ ಹುದ್ದೆಯ ಕುರಿತು ಸಹ ಹೊಂದಾಣಿಕೆ ಆಗಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಸ್ಪೀಕರ್ ಹುದ್ದೆ ಬಹಳ ಮಹತ್ವ ಪಡೆಯುತ್ತದೆ. ಈ ಹುದ್ದೆಯನ್ನು ತಮಗೆ ನೀಡಬೇಕು ಎಂದು ಶಿವಸೇನೆ ಪಟ್ಟು ಹಿಡಿದಿದೆ. ಗೃಹ ಖಾತೆ ಅಥವ ಪುತ್ರನಿಗೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿ ಎಂದು ಏಕನಾಥ್ ಶಿಂಧೆ ಪಟ್ಟು ಹಿಡಿದಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 145. 'ಮಹಾಯತಿ' ಮೈತ್ರಿಕೂಟ 230 ಶಾಸಕರ ಬಲ ಹೊಂದಿದೆ. ಚುನಾವಣೆಯಲ್ಲಿ 132 ಸೀಟುಗಳನ್ನು ಗೆದ್ದಿರುವ ಬಿಜೆಪಿ 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಸರ್ಕಾರ ರಚಿಸಲಿದೆ. ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟು ಹೊಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+