Soap Ganesha: 2,655 ಕೆಜಿ ಸಾಬೂನಿನಿಂದ ತಯಾರಾದ ಪರಿಸರ ಸ್ನೇಹಿ ಗಣೇಶ
ಸೂರತ್ ಸೆಪ್ಟೆಂಬರ್ 19: ದೇಶದೆಲ್ಲೆಡೆ ಗಣೇಶ ಚತುರ್ಥಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಈ ಬಾರಿ ಪರಿಸರ ಸ್ನೇಹಿ ಗಣೇಶಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಈ ನಡುವೆ ಸೂರತ್ ಕಲಾವಿದರೊಬ್ಬರು 2,655 ಕೆಜಿ ಸಾಬೂನಿನಿಂದ ಪರಿಸರ ಸ್ನೇಹಿ ಗಣೇಶನ ವಿಗ್ರಹ ತಯಾರಿಸಿರುವುದು ಗಮನ ಸೆಳೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಸೂರತ್‌ನ ಮಹಿಳಾ ಕಲಾವಿದೆ ಅದಿತಿ ಮಿತ್ತಲ್ ಈ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ತಯಾರಿಸಿದವರು. ಈ ಬಾರಿ ಗಣೇಶ ಚತುರ್ಥಿಗೆ ಅವರು ಸಾಬೂನು ಬಳಸಿ ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ಕೆತ್ತಿದ್ದಾರೆ. ಈ ಬಗ್ಗೆ ಸ್ಥಳೀಯ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಾನು ವಿಗ್ರಹವನ್ನು ಸಾಬೂನು ಬಳಸಿ ಮಾಡಿದ್ದೇನೆ. ಈ ವಿಗ್ರಹದ ತಯಾರಿಕೆಯಲ್ಲಿ ಒಟ್ಟು 2,655 ಕೆಜಿ ಸಾಬೂನು ಬಳಸಲಾಗಿದೆ. ಇದನ್ನು ತಯಾರಿಸಲು ನಮಗೆ ಒಟ್ಟು ಏಳು ದಿನಗಳು ಬೇಕಾಯಿತು,'' ಎಂದು ಅದಿತಿ ಮಿತ್ತಲ್ ಹೇಳಿದ್ದಾರೆ.

''ನಾನು ಕಳೆದ ಆರು ವರ್ಷಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದೇನೆ. ಈ ವರ್ಷ ನಾನು ಪ್ರಧಾನಿ ಮೋದಿಯವರ 'ಸ್ವಚ್ಛ ಅಭಿಯಾನ'ವನ್ನು ಅಳವಡಿಸಿಕೊಂಡು ಗಣೇಶನ ಮೂರ್ತಿಗಳನ್ನು ಕೆತ್ತಲು ಯೋಚಿಸಿದೆ" ಎಂದು ಮಿತ್ತಲ್ ಎಎನ್‌ಐಗೆ ತಿಳಿಸಿದರು.
ಘನ ಮಣ್ಣಿನ ಮೇಲೆ ಸರಸ್ವತಿ ಮತ್ತು ಲಕ್ಷ್ಮಿ ದೇವತೆ
ಭುವನೇಶ್ವರದಲ್ಲೂ ಇಂಥಹದ್ದೇ ಪರಿಸರ ಸ್ನೇಹಿ ಗಣೇಶ ಕಣ್ಮನ ಸೆಳೆದಿದೆ. ಭುವನೇಶ್ವರ ಮೂಲದ ಇನ್ನೊಬ್ಬ ಚಿಕಣಿ ಕಲಾವಿದ ಎಲ್ ಈಶ್ವರ್ ರಾವ್ ಅವರು ಘನ ಮಣ್ಣಿನ ಮೇಲೆ ಸರಸ್ವತಿ ಮತ್ತು ಲಕ್ಷ್ಮಿ ದೇವತೆಗಳ ಜೊತೆಗೆ ಗಣೇಶನ ಪರಿಸರ ಸ್ನೇಹಿ ವಿಗ್ರಹಗಳನ್ನು ರಚಿಸಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಎಲ್ ಈಶ್ವರ್ ರಾವ್, "ಕಳೆದ 22 ವರ್ಷಗಳಿಂದ ನಾನು ನಿಬ್, ಸೀಮೆಸುಣ್ಣ, ಅರಿಶಿನ ಬೀಜಗಳು, ಬಾಟಲಿಯೊಳಗೆ ವಿವಿಧ ಕಲೆಗಳನ್ನು ರಚಿಸುತ್ತಿದ್ದೇನೆ. ನಾನು ಗಣೇಶನ ಜೊತೆಗೆ ಅನೇಕ ಪರಿಸರ ಸ್ನೇಹಿ ಮೂರ್ತಿಗಳನ್ನು ರಚಿಸಿದ್ದೇನೆ. ಇದರಲ್ಲಿ ಒಡಿಶಾದ ಖುರ್ದಾ ಜಿಲ್ಲೆಯ ಜತ್ನಿ ಗ್ರಾಮದಲ್ಲಿ ರಚಿಸಿದ ಗಣೇಶ, ಸರಸ್ವತಿ ಮತ್ತು ಲಕ್ಷ್ಮಿ ದೇವತೆಯ ಮೂರ್ತಿ ಕೂಡ ಒಂದು" ಎಂದು ಅವರು ಹೇಳಿದರು.
ನಾನು ಬೆಂಕಿಕಡ್ಡಿಗಳು ಮತ್ತು ಗಟ್ಟಿಯಾದ ಜೇಡಿಮಣ್ಣನ್ನು ಬಳಸಿ ಪೀಠ ರಚಿಸಿದ್ದೇನೆ, ಅಲ್ಲಿ ನಾನು ಗಣೇಶ ಮತ್ತು ಸರಸ್ವತಿ ಮತ್ತು ಲಕ್ಷ್ಮಿ ದೇವತೆಯ ವಿಗ್ರಹಗಳನ್ನು ಸ್ಥಾಪಿಸಿದ್ದೇನೆ. ವಿಗ್ರಹಗಳು ಮತ್ತು ಅಲಂಕಾರಿಕ ವಸ್ತುಗಳನ್ನು ಪೂರ್ಣಗೊಳಿಸಲು ನನಗೆ ಏಳು ದಿನಗಳು ಬೇಕಾಯಿತು ಎಂದು ರಾವ್ ANIಗೆ ತಿಳಿಸಿದರು.
"ಗಣೇಶನ ವಿಗ್ರಹದ ಎತ್ತರವು 3.5 ಇಂಚುಗಳು. ಸರಸ್ವತಿ ಮತ್ತು ಲಕ್ಷ್ಮಿ ದೇವತೆಗಳ ವಿಗ್ರಹಗಳು ಸುಮಾರು 3 ಇಂಚುಗಳಷ್ಟು ಎತ್ತರವಿದೆ. ದೇವತೆಗಳನ್ನು ಹೊಂದಿರುವ ಪಂಂಡಲ್ ಕೆಳಗಿನಿಂದ ಮೇಲಕ್ಕೆ 9 ಇಂಚು ಎತ್ತರವಿದೆ" ಎಂದು ರಾವ್ ಹೇಳಿದರು.
ಪರಿಸರ ಸಂರಕ್ಷಣೆಯ ಸಂದೇಶವನ್ನು ಹರಡಲು ದೆಹಲಿಯ ಮಹಾನಗರ ಪಾಲಿಕೆ ಸೋಮವಾರ ನಗರದಲ್ಲಿ 'ಪರಿಸರ ಸ್ನೇಹಿ ಗಣೇಶ' ಮೂರ್ತಿಗಳನ್ನು ಬಿಡುಗಡೆ ಮಾಡಿತು. ಮೇಯರ್ ಶೆಲ್ಲಿ ಒಬೆರಾಯ್ ಅವರು ಇಂದು ಸಿವಿಕ್ ಸೆಂಟರ್‌ನಿಂದ 'ಪರಿಸರ ಸ್ನೇಹಿ ಗಣೇಶ' ರಥಕ್ಕೆ ಧ್ವಜಾರೋಹಣ ಮಾಡಿದರು. ಈಗ ರಾಷ್ಟ್ರ ರಾಜಧಾನಿಯ ಎಲ್ಲಾ ಪ್ರದೇಶಗಳಲ್ಲಿ 'ಪರಿಸರ ಸ್ನೇಹಿ ಗಣೇಶ' ಮೂರ್ತಿಗಳು ಲಭ್ಯವಾಗಲಿವೆ.












Click it and Unblock the Notifications