ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಡಿಎಂಕೆ ದೂರು: ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗದ ಸೂಚನೆ
ನವದೆಹಲಿ, ಮಾರ್ಚ್ 21: ಲೋಕಸಭಾ ಚುನಾವಣೆ ಘೋಷಣೆಯಾಗಿ ಮಾದರಿ ನಿತಿ ಸಂಹಿತೆ ಜಾರಿಯಾಗಿದ್ದರೂ ಕೂಡ ಹಲವು ನಾಯಕರು ಬಾಯಿಗೆ ಬೀಗ ಹಾಕುತ್ತಿಲ್ಲ. ಪ್ರಚಾರದ ಭರದಲ್ಲಿ ಇನ್ನೋಬ್ಬರನ್ನು ಟೀಕಿಸುವ ಭರದಲ್ಲಿ ತಪ್ಪು ತಪ್ಪ ಹೇಳಿಕೆ ನೀಡುತ್ತಿದ್ದು, ಇದು ಚುನಾವಣಾ ಆಯೋಗದ ಅಂಗಳ ತಲುಪಿದೆ.
ಹೌದು.. ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಗ್ಗೆ ಮಾತನಾಡುವಾಗ ತಮಿಳುನಾಡಿನ ಬಗ್ಗೆ ಅವಹೇಳನ ಮಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ದೂರು ದಾಖಲಿಸಿದೆ. ದೂರನ್ನು ಪರಿಗಣಿಸಿರುವ ಚುನಾವಣಾ ಆಯೋಗವು 'ಸೂಕ್ತ ಕ್ರಮ' ತೆಗೆದುಕೊಳ್ಳುವಂತೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ಸೂಚಿಸಿದೆ.

ಕೇಂದ್ರ ಸಚಿವರ ಹೇಳಿಕೆಯು ಮಾದರಿ ನೀತಿ ಸಂಹಿತೆಯನ್ನು (ಎಂಸಿಸಿ) ಉಲ್ಲಂಘಿಸಿದೆ ಎಂದು ಡಿಎಂಕೆ ಆರೋಪಿಸಿದೆ. ಹೀಗಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಮಾದರಿ ನೀತಿ ಸಂಹಿತೆ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗೆ ತಿಳಿಸಿದೆ.
"ಬಿಜೆಪಿ ನಾಯಕಿ ಮತ್ತು ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಎಂಸಿಸಿ ಉಲ್ಲಂಘನೆ ಆರೋಪದ ವಿರುದ್ಧ ಡಿಎಂಕೆ ದೂರಿನ ಕುರಿತು ತಕ್ಷಣ ಮತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಇಸಿಐ ಸಿಇಒ ಕರ್ನಾಟಕಕ್ಕೆ ಸೂಚಿಸಿದೆ. 48 ಗಂಟೆಗಳ ಒಳಗೆ ಅನುಸರಣೆ ವರದಿ ನೀಡಬೇಕು" ಎಂದು ಚುನಾವಣಾ ಆಯೋಗ ತಿಳಿಸಿದೆ.

"ಮಾರ್ಚ್ 1 ರಂದು ನಡೆದ ರಾಮೇಶ್ವರಂ ಕೆಫೆ ಸ್ಫೋಟದ ಹಿಂದೆ ತಮಿಳುನಾಡಿನ ಜನರ ಕೈವಾಡವಿದೆ ಎಂದು ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ ಕರಂದ್ಲಾಜೆ ಅವರು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘಿಸಿದ್ದಾರೆ" ಎಂದು ಡಿಎಂಕೆ ದೂರಿನಲ್ಲಿ ಆರೋಪಿಸಿದೆ.
"ಸಚಿವೆ ಶೋಭಾ ಕರಂದ್ಲಾಜೆ ತಮಿಳುನಾಡಿನಿಂದ ಬರುವ ಜನರು ಇಲ್ಲಿ ಬಾಂಬ್ ಇಡುತ್ತಾರೆ. ದೆಹಲಿಯ ಜನರು 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕೂಗುತ್ತಾರೆ ಮತ್ತು ಕೇರಳದಿಂದ ಬರುವ ಜನರು ಆಸಿಡ್ ದಾಳಿಯಲ್ಲಿ ಭಾಗಿಯಾಗಿದ್ದಾರೆ" ಎಂದು ಹೇಳಿದ್ದಾರೆ. ಈ ಹೇಳಿಕೆಯು ಕರ್ನಾಟಕದ ಜನರು ಮತ್ತು ತಮಿಳುನಾಡಿನ ಜನರ ನಡುವೆ ದ್ವೇಷದ ಭಾವನೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ. ಇದು ತಮಿಳುನಾಡಿನ ಜನರನ್ನು ಭಯೋತ್ಪಾದಕರು ಎಂದು ಬಿಂಬಿಸಿದೆ. ಎರಡು ಸಮುದಾಯಗಳ ನಡುವೆ, ಅಂದರೆ ತಮಿಳಿಗರು ಮತ್ತು ಕನ್ನಡಿಗರ ನಡುವೆ ಹಗೆತನ ಮತ್ತು ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ" ಎಂದು ಡಿಎಂಕೆ ದೂರಿನಲ್ಲಿ ಹೇಳಿದೆ.
"ಈ ಹೇಳಿಕೆಯು ಭಿನ್ನಾಭಿಪ್ರಾಯಗಳನ್ನು ಹೆಚ್ಚು ಮಾಡುವ ಜೊತೆಗೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಸಮುದಾಯಗಳ ನಡುವೆ ಪರಸ್ಪರ ದ್ವೇಷವನ್ನು ಸೃಷ್ಟಿಸುತ್ತದೆ ಹೀಗಾಗಿ ಪ್ರಜಾಪ್ರತಿನಿಧಿ ಕಾಯಿದೆ, 1951 ಸೆಕ್ಷನ್‌ನ ಉಲ್ಲಂಘನೆಯಾಗಿದೆ ಎಂದು ಡಿಎಂಕೆ ಪಕ್ಷ ಹೇಳಿದೆ.
ಆದರೆ ಸಚಿವೆ ಶೋಭಾ ಕರಂದ್ಲಾಜೆ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದರು. "ನನ್ನ ಟೀಕೆಗಳು ಕೆಲವರಿಗೆ ನೋವು ತಂದಿದೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ನನ್ನ ಟೀಕೆಗಳು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರ ಬಗ್ಗೆ ಮಾತ್ರ. ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತೇನೆ. ಇದಲ್ಲದೆ, ನಾನು ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ" ಎಂದಿದ್ದರು.












Click it and Unblock the Notifications