Earthquake: ಬೆಳ್ಳಂಬೆಳಗ್ಗೆ ಅಂಡಮಾನ್ & ನಿಕೋಬಾರ್ ದ್ವೀಪಗಳಲ್ಲಿ ಭಾರೀ ಭೂಕಂಪ!
ದೆಹಲಿ, ಜುಲೈ 29: ಇಂದು ಮಂಗಳವಾರ (ಜುಲೈ 29) ಬೆಳ್ಳಂಬೆಳಗ್ಗೆ ಅಂದರೆ ತಡರಾತ್ರಿ 12:11 ಗಂಟೆಗೆ ಬಂಗಾಳಕೊಲ್ಲಿಯ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪದ ಮಧ್ಯ 6.3 ತೀವ್ರತೆಯ ಭೂಕಂಪನ ಸಂಭವಿಸಿದೆ. ಈ ಬಗ್ಗೆ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಅಧಿಕೃತಿ ಮಾಹಿತಿ ನೀಡಿದೆ.
ಈ ಭೂಕಂಪವು 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂಬುದು ಗೊತ್ತಾಗಿದೆ. ಭೂಕಂಪನದ ಕೇಂದ್ರಬಿಂದು 6.82° ಉತ್ತರ ಅಕ್ಷಾಂಶ ಮತ್ತು 93.37° ಪೂರ್ವ ರೇಖಾಂಶದಲ್ಲಿದೆ. ಅದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕ್ಯಾಂಪ್ಬೆಲ್ ಕೊಲ್ಲಿಯ ಪಶ್ಚಿಮಕ್ಕೆ 62 ಕಿಲೋಮೀಟರ್ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಜ್ಞರು ಮಾಹಿತಿ ನೀಡಿದ್ದಾರೆ.

ಇಂದಿನ ಈ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಹಾನಿ ಆದ ಬಗ್ಗೆ ವರದಿ ಆಗಿಲ್ಲ ಎಂದು ಜರ್ಮನ್ ರಿಸರ್ಚ್ ಸೆಂಟರ್ ಫಾರ್ ಜಿಯೋಸೈನ್ಸ್ (GFZ) ಅನ್ನು ಉಲ್ಲೇಖಿಸಿ ರಾಯಿಟರ್ಸ್‌ನ ವರದಿಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಮೊನ್ನೆಯಷ್ಟೇ ಶುಕ್ರವಾರ ಅಂಡಮಾನ್ ಸಮುದ್ರದಲ್ಲಿ 4.9 ತೀವ್ರತೆಯ ಭೂಕಂಪ ಉಂಟಾಗಿತ್ತು. ಅದರ ಬೆನ್ನಲ್ಲೆ ಇಂದು ಮತ್ತೆ ಭೂಕಂಪವಾಗಿದೆ. ಮೊನ್ನೆಯ ಭೂಕಂಪನವು ಅಂಡಮಾನ್ ಸಮುದ್ರದ ಮಧ್ಯದಲ್ಲಿ 10 ಕಿಲೋಮೀಟರ್ ಆಳದಲ್ಲಿ ಭೂಕಂಪ ದಾಖಲಾಗಿದೆ. ಸಂಜೆ 6.44 ಗಂಟೆಗೆ ಈ ಘಟನೆ ನಡೆದಿತ್ತು ಎಂದು ತಿಳಿಸಲಾಗಿದೆ.
ಅದೇ ರೀತಿ ನೆನ್ನೆ ಸೋಮವಾರ ರಾತ್ರಿ ಉತ್ತರ ಭಾರತದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಅರುಣಾಚಲ ಪ್ರದೇಶದ ತಿರಪ್ ಜಿಲ್ಲೆಯಲ್ಲಿ ಸಂಜೆ 6.36 ಕ್ಕೆ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ. ಇತ್ತೀಚೆಗೆ ದೆಹಲಿ ಎನ್‌ಸಿಆರ್‌ನಲ್ಲಿ ಸರಣಿ ಭೂಮಿ ಕಂಪಿಸಿದ್ದವು. ಅದರ ಬೆನ್ನಲ್ಲೆ ದೇಶದ ಬೇರೆ ಬೇರೆ ಕಡೆಗಳಲ್ಲಿ ಭೂಕಂಪನಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ.












Click it and Unblock the Notifications