Earthquake: ದೆಹಲಿ & ರಷ್ಯಾದಲ್ಲಿ ತೀವ್ರ ಭೂಕಂಪ, ಸರಣಿ ಕಂಪನಗಳಿಂದ ಜನರಲ್ಲಿ ಭಯ
ನವದೆಹಲಿ, ಜುಲೈ 22: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೆಲವೇ ದಿನಗಳಲ್ಲಿ ಮೇಲಿಂದ ಮೇಲೆ ಭೂಕಂಪನ ಎದುರಿಸುವಂತಾಗಿದೆ. ಇಂದು ಮಂಗಳವಾರ (ಜುಲೈ 22) ಬೆಳಗ್ಗೆ 6 ಗಂಟೆಗೆ ಭೂಕಂಪ ಸಂಪವಿಸಿದೆ. ಹರಿಯಾಣದ ಫರಿದಾಬಾದ್‌ನಲ್ಲಿ 3.2 ತೀವ್ರತೆಯ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ. ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.
ಭೂಕಂಪದ ತೀವ್ರತೆ ಆಳವು ಅಕ್ಷಾಂಶ, 28.29 ಡಿಗ್ರಿ ಉತ್ತರ ಮತ್ತು 72.21 ಡಿಗ್ರಿ ಪೂರ್ವ ರೇಖಾಂಶದಲ್ಲಿ ಮೇಲ್ಮೈಯಿಂದ 5 ಕಿ.ಮೀ ಆಳದಲ್ಲಿತ್ತು ಎಂದು ವರದಿ ಆಗಿದೆ. ಸದ್ಯ ಈ ಲಘು ಭೂಕಂಪನದಲ್ಲಿ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ.

ದೆಹಲಿ ವ್ಯಾಪ್ತಿಯಲ್ಲಿ ಕಳೆದ ಕೆಲವು ವಾರಗಳಲ್ಲಿ ಸರಣಿ ಭೂಕಂಪಗಳು ಸಂಭವಿಸಿವೆ. ಮನೆಯಿಂದ ಹೊರ ಓಡಿ ಬಂದ ನಿವಾಸಿಗಳಲ್ಲಿ ಭಯ ಮನೆ ಮಾಡಿದೆ. ಇದೇ ತಿಂಗಳ ಜುಲೈ 10 ಮತ್ತು 11 ರಂದು ದೆಹಲಿಯ ಹೊರಗೆ ಹರಿಯಾಣದ ಜಜ್ಜರ್ ನಲ್ಲಿ ಭಾರೀ ಭೂಕಂಪನವಾಗಿದೆ. ತೀವ್ರತೆ ಹೆಚ್ಚಿತ್ತು. ಆಗಲೂ ಜನರು ಭಯಭೀತರಾಗಿದ್ದರು.
ಇನ್ನೂ ರಷ್ಯಾದ ಕಮ್ಚಟ್ಕಾ ಪ್ರದೇಶದ ಪೂರ್ವ ಕರಾವಳಿ ಭಾಗದಲ್ಲಿ ಇಂದು ಬೆಳಗ್ಗೆ 6.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ವರದಿ ಮಾಡಿದೆ. ವಿವಿಧೆಡೆ ಘಟಿಸಿದ ಈ ಭೂಕಂಪ ಘಟನೆಗಳು ಜನರನ್ನು ಬೆಚ್ಚಿ ಬೀಳಿಸಿವೆ.
ನೆನ್ನೆ ಸೋಮವಾರ ಜುಲೈ 21 ರಂದು ಬೆಳಗ್ಗೆ ಕಣಿವೆ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಸಹ ಭೂಕಂಪ ಸಂಭವಿಸಿದೆ. ಇಲ್ಲಿ ಯಾವುದೇ ಜೀವಹಾನಿ ಆಗಿಲ್ಲ. ಆಸ್ತಿಪಾಸ್ತಿಗೆ ನಷ್ಟವಾಗಿಲ್ಲ. ಕೇವಲ ಭೂಮಿ ಕಂಪನಿಸಿದ ಅನುಭವವಾಗಿದೆ. ತಡರಾತ್ರಿ ಕಿಶ್ತ್ವಾರ್ ಸಮೀಪ 3.1 ತೀವ್ರತೆಯ ಭೂಕಂಪ ಆಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ವರದಿ ಮಾಡಿದೆ. ಕಳೆದ ಕೆಲವು ದಿನಗಳ ಅಂತರದಲ್ಲಿ ಹರಿಯಾದ, ದೆಹಲಿ, ಜಮ್ಮು ಕಾಶ್ಮೀರ ಹೀಗೆ ವಿವಿಧೆಡೆ ಘಟಿಸಿದ ಸರಣಿ ಭೂಮಿ ಕಂಪನಗಳಿಂದ ಉತ್ತರ ಭಾರತೀಯರಲ್ಲಿ ಜೀವ ಭಯ ಕಾಡುತ್ತಿದೆ.












Click it and Unblock the Notifications