E100: ವಾಹನಗಳಿಗೆ ನೂರರಷ್ಟು ಎಥೆನಾಲ್ ಇಂಧನ ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ: ವಾಹನ ಸವಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಕೇಂದ್ರ ಬಿಜೆಪಿ ಸರ್ಕಾರವು ಎಥೆನಾಲ್ ವಿಚಾರದಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ನಿರ್ಧಾರವು ವಾಹನ ಸವಾರರಿಗೆ ತುಸು ಆತಂಕ ಮೂಡಿಸಿರುವುದರೊಂದಿಗೆ ದೇಶದಾದ್ಯಂತ ಭಾರೀ ಚರ್ಚೆಗೂ ಕಾರಣವಾಗಿದೆ. ದೇಶದಾದ್ಯಂತ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಕೆಗೆ ತೀವ್ರ ಆಕ್ಷೇಪ ಹಾಗೂ ವಿರೋಧ ವ್ಯಕ್ತವಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಪೆಟ್ರೋಲ್ನೊಂದಿಗೆ ಶೇ 20ರಷ್ಟು ಎಥೆನಾಲ್ ಮಿಶ್ರಣ ಮಾಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ರೀತಿ ಇರುವ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಶೇ 100ರಷ್ಟು ಎಥೆನಾಲ್ ಇಂಧನ ಬಳಕೆಗೆ ಅನುಮೋದನೆ ನೀಡಿದೆ. ಇದೀಗ ಈ ವಿಚಾರವು ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ದೇಶಾದ್ಯಂತ ಎಥೆನಾಲ್ ಬಗ್ಗೆ ವಾಹನ ಸವಾರರು ಹಾಗೂ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗಳಿದ್ದರೂ ಕೇಂದ್ರ ಬಿಜೆಪಿ ಸರ್ಕಾರವು E100 ಇಂಧನ ಬಳಕೆಗೆ ಅನುಮೋದನೆ ನೀಡಿದೆ: E20 ಪೆಟ್ರೋಲ್ ಅಥವಾ ಸಾಮಾನ್ಯ ಇಂಧನದಿಂದ ಚಲಿಸುವ ಕಾರುಗಳು E85 ಅಥವಾ E100 ಇಂಧನವನ್ನು ಬಳಸುವಂತಿಲ್ಲ ಎಂದೂ ಕೇಂದ್ರ ಸರ್ಕಾರವು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.

ದೇಶದಲ್ಲಿ 100% ಎಥೆನಾಲ್ನಿಂದ ಚಲಿಸುವ ಫ್ಲೆಕ್ಸ್-ಇಂಧನ ವಾಹನಗಳಿಗೆ (E100) ಕೇಂದ್ರ ಸರ್ಕಾರ ನಿಯಮಗಳನ್ನು ಹೊರಡಿಸಿದೆ. ಕೇಂದ್ರ ಮೋಟಾರು ವಾಹನ ನಿಯಮಗಳನ್ನು ತಿದ್ದುಪಡಿ ಮಾಡುವ ಮೂಲಕ ಅದು E100 ಇಂಧನವನ್ನು ಅನುಮೋದಿಸಿದೆ. ಕೆಲವು ಕಾರು ಕಂಪನಿಗಳು ತಮ್ಮ E100 ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಿದ್ಧವಾಗುವ ಮುನ್ನ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೋಟಾರು ವಾಹನ ನಿಯಮಗಳಲ್ಲಿನ ಇತ್ತೀಚಿನ ಬದಲಾವಣೆಗಳು ಹೊರಸೂಸುವಿಕೆ ನಿಬಂಧನೆಗಳಲ್ಲಿ E85 ಇಂಧನದೊಂದಿಗೆ E100 ಇಂಧನವನ್ನು ಸೇರಿಸಿವೆ ಎಂದು ಹೇಳಲಾಗಿದೆ.
E85 ಮತ್ತು E100 ಇಂಧನಗಳನ್ನು ಅವುಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಮತ್ತು ಪ್ರಮಾಣೀಕರಿಸಿದ ವಿಶೇಷ ವಾಹನಗಳಲ್ಲಿ ಮಾತ್ರ ಬಳಸಬಹುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅವುಗಳನ್ನು ಸಾಮಾನ್ಯ ವಾಹನಗಳಲ್ಲಿ ಬಳಸಲಾಗುವುದಿಲ್ಲ ಎಂದೂ ಹೇಳಲಾಗಿದೆ.
ಅಲ್ಲದೆ ಈಗಾಗಲೇ ಅಸ್ತಿತ್ವದಲ್ಲಿರುವ ಕಾರು ಮಾಲೀಕರ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ ಅಂತಲೂ ಹೇಳಲಾಗಿದೆ. E20 ಪೆಟ್ರೋಲ್ ಅಥವಾ ಸಾಮಾನ್ಯ ಇಂಧನದಿಂದ ಚಲಿಸುವ ವಾಹನಗಳು E85 ಅಥವಾ E100 ಇಂಧನದಿಂದ ಚಲಾಯಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ. ಮುಂದುವರಿದು ಈ ಹೊಸ ಅಧಿಸೂಚನೆಯ ಪ್ರಕಾರ, ಅಸ್ತಿತ್ವದಲ್ಲಿರುವ ವಾಹನ ಮಾಲೀಕರು ತಮ್ಮ ಕಾರುಗಳನ್ನು E85 ಅಥವಾ E100 ಇಂಧನಕ್ಕೆ ಬದಲಾಯಿಸುವ ಅಗತ್ಯವಿಲ್ಲ ಅಥವಾ ಯಾವುದೇ ರೀತಿಯ ಮಾರ್ಪಾಡುಗಳನ್ನು ಮಾಡುವ ಅಗತ್ಯವಿಲ್ಲ. ಇದು ಪ್ರಸ್ತುತ ಮತ್ತು ಭವಿಷ್ಯ ಎರಡಕ್ಕೂ ಸಂಪೂರ್ಣವಾಗಿ ಪರ್ಯಾಯ ವ್ಯವಸ್ಥೆಯಾಗಿದೆ.
ತಂತ್ರಜ್ಞಾನವು ಒಂದೇ ಟ್ಯಾಂಕ್ನೊಂದಿಗೆ ಕಾರ್ಯನಿರ್ವಹಿಸುತ್ತದೆ.
ಅಮೆರಿಕ ಮತ್ತು ಬ್ರೆಜಿಲ್ನಂತಹ ದೇಶಗಳಲ್ಲಿ ಫ್ಲೆಕ್ಸ್-ಇಂಧನ ತಂತ್ರಜ್ಞಾನವನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಈ ವಾಹನಗಳನ್ನು ಒಂದೇ ಇಂಧನ ಟ್ಯಾಂಕ್ನಲ್ಲಿ ಮಿಶ್ರಣ ಮಾಡಲಾದ ಎಥೆನಾಲ್ ಮತ್ತು ಪೆಟ್ರೋಲ್ನ ವಿಭಿನ್ನ ಅನುಪಾತಗಳಲ್ಲಿ ಸುಲಭವಾಗಿ ಚಲಿಸುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ವಾಹನದ ವಿನ್ಯಾಸ ಮತ್ತು ಪ್ರಮಾಣೀಕರಣವನ್ನು ಅವಲಂಬಿಸಿ, ಎಥೆನಾಲ್ ಶ್ರೇಣಿಯು E85 ರಿಂದ E100 ವರೆಗೆ ಬದಲಾಗಬಹುದು ಎಂದೂ ಹೇಳಲಾಗಿದೆ. ಒಟ್ಟಾರೆ ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಸಾರ್ವಜನಿಕರು ಹಾಗೂ ವಾಹನ ಸವಾರರು ಹೇಗೆ ಸ್ವೀಕರಿಸಲಿದ್ದಾರೆ ಎನ್ನುವ ಕುತೂಹಲ ಈಗ ಹೆಚ್ಚಾಗಿದೆ.
ಈಗಾಗಲೇ ಪೆಟ್ರೋಲ್ನೊಂದಿಗೆ ಶೇ 20ರಷ್ಟು ಎಥೆನಾಲ್ ಮಿಶ್ರಣ ಮಾಡುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ಪೆಟ್ರೋಲ್ನೊಂದಿಗೆ ಎಥೆನಾಲ್ ಮಿಶ್ರಣ ಮಾಡುವುದರಿಂದ ವಾಹನದ ಮೈಲೇಜ್ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವರು ಆರೋಪಿಸಿದ್ದರು.


Click it and Unblock the Notifications
