Breaking: ದ್ವಾರಕಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ವಿಧಿವಶ
ಭೋಪಾಲ್, ಸೆ. 11: ದ್ವಾರಕಾನಾಥ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ವಿಧಿವಶರಾಗಿದ್ದಾರೆ. ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಭಾನುವಾರ ಮಧ್ಯಪ್ರದೇಶದಲ್ಲಿ 99ನೇ ವಯಸ್ಸಿನಲ್ಲಿ ನಿಧನರಾದರು. ಮಧ್ಯಪ್ರದೇಶದ ನರಸಿಂಗ್‌ಪುರದ ಶ್ರೀಧಾಮ ಜೋತೇಶ್ವರ ಆಶ್ರಮದಲ್ಲಿ ಮಧ್ಯಾಹ್ನ 3.30ಕ್ಕೆ ಹಿಂದೂ ಧಾರ್ಮಿಕ ಮುಖಂಡ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಅದಿಗುರು ಶಂಕರಾಚಾರ್ಯ ಸ್ಥಾಪಿತ ನಾಲ್ಕು ಪೀಠಗಳ ಪೈಕಿ ದ್ವಾರಕ ಪೀಠದ ಜಗದ್ಗುರುಗಳಾಗಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಕಾರ್ಯ ನಿರ್ವಹಿಸುತ್ತಿದ್ದರು. ಇದಲ್ಲದೆ ಜ್ಯೋತಿರ್ ಮಠದ ಹೊಣೆಯು ಸ್ವರೂಪಾನಂದ ಸರಸ್ವತಿ ಅವರ ಮೇಲಿತ್ತು.
ಹರಿಯಾಲಿ ತೀಜ್ ಶುಭದಿನದಂದು ತಮ್ಮ 99ನೇ ಜನ್ಮದಿನವನ್ನು ಆಚರಿಸಿಕೊಂಡಿದ್ದ ಸ್ವರೂಪನಂದ ಸರಸ್ವತಿ ಅವರು ತಮ್ಮ ಪೂರ್ವಾಶ್ರಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದವರಾಗಿದ್ದಾರೆ. ಸಿಯೋನಿ ಜಿಲ್ಲೆಯ ಜಬಲ್ ಪುರ್ ಸಮೀಪದ ದಿಘೋರಿ ಗ್ರಾಮದಲ್ಲಿಜನಿಸಿದ ಸ್ವಾಮೀಜಿಗಳು ತಮ್ಮ 9ನೇ ವಯಸ್ಸಿನಲ್ಲಿ ಮನೆ ತೊರೆದು ಸನ್ಯಾಸ ಜೀವನ ಪಥದತ್ತ ತೆರಳಿದರು. ವಾರಣಾಸಿಯ ಸ್ವಾಮಿ ಕರ್ಪತ್ರಿ ಮಹಾರಾಜ್ ಬಳಿ ವೇದ ಅಧ್ಯಯನ ಮಾಡಿದರು.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕ್ರಾಂತಿಕಾರಿ ಸಾಧುಗಳ ಜೊತೆಗೂಡಿ ಹೋರಾಟ ನಡೆಸಿ ಜೈಲುವಾಸವನ್ನು ಅನುಭವಿಸಿದ್ದರು. ನಂತರದಲ್ಲಿ ಅಯೋಧ್ಯಾದ ರಾಮ ಮಂದಿರ ಹಾಗೂ ಅದರ ಸುತ್ತ ನಡೆದ ಧಾರ್ಮಿಕ ಸಭೆಗಳ ಮೂಲಕ ಸ್ವರೂಪನಂದ ಸರಸ್ವತಿ ಎಂದರೆ ಹಿಂದುಗಳಿಗೆ ಚಿರಪರಿಚಿತರಾದರು.
ವಿವಾದಿತ ಹೇಳಿಕೆಗಳನ್ನು ನೀಡಿದ್ದ ಸ್ವಾಮೀಜಿ
2013ರಲ್ಲಿ ಐದು ಸಾವಿರ ಯಾತ್ರಾರ್ಥಿಗಳನ್ನು ಬಲಿತೆಗೆದುಕೊಂಡ ಕೇದಾರನಾಥದ ಮೇಘ ಸ್ಫೋಟಕ್ಕೆ ಸ್ವಾಮೀಜಿ ತಿಳಿಸಿದ್ದ ಕಾರಣ ಚರ್ಚೆಗೀಡಾಗಿತ್ತು.
"ಮಧುಚಂದ್ರಕ್ಕೆ ತೆರಳಿದ್ದ ಜೋಡಿಗಳು, ಪಿಕ್‌ನಿಕ್ ಪ್ರಿಯರು "ದೇವಭೂಮಿ'ಯಲ್ಲಿ ಮಜಾ ಮಾಡಿದ್ದೆ ನಿಸರ್ಗದ ಮುನಿಸಿಗೆ ಕಾರಣ" ಎಂದು ಹೇಳಿಕೆ ನೀಡಿದ್ದರು.
ಹಿಂದೂ ಪುಣ್ಯಕ್ಷೇತ್ರಗಳ ಪರಿಸರವನ್ನು ಹಾಳು ಮಾಡುತ್ತಿರುವುದ್ನು ತಡೆಯದೇ ಹೋದಲ್ಲಿ ಕೇದಾರನಾಥದಲ್ಲಿ ಮಾತ್ರವಲ್ಲದೇ ಇನ್ನೂ ಅನೇಕ ಪವಿತ್ರ ಕ್ಷೇತ್ರಗಳಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸಿ ಸಾವು-ನೋವು ಸಂಭವಿಸುತ್ತದೆ ಎಂದು ಹೇಳಿದ್ದರು. ಸ್ವಾಮೀಜಿ ಇಂಥ ಹೇಳಿಕೆ ನೀಡುತ್ತಿರುವುದು ಇದು ಮೋದಲೇನೂ ಅಲ್ಲ.
''ಪೂಜೆಗೆ ಅರ್ಹರಲ್ಲದ ಶಿರಡಿ ಸಾಯಿ ಬಾಬಾರನ್ನು ಪೂಜೆ ಮಾಡಿದ್ದೆ ಮಹಾರಾಷ್ಟ್ರಕ್ಕೆ ಬರ ಪರಿಸ್ಥಿತಿ ಬರಲು ಕಾರಣ, ಬಾಬಾಗೆ ದೇವಾಲಯ ಕಟ್ಟುವುದರಲ್ಲಿ ಅರ್ಥವಿಲ್ಲ" ಎಂದು ಸ್ವಾಮೀಜಿ ಮಾತು ಹರಿಯಬಿಟ್ಟಿದ್ದರು.
ಶನಿ ಸಿಂಗಣಾಪುರ ದೇಗುಲಕ್ಕೆ ಮಹಿಳೆಯರಿಂದ ಪೂಜೆ ಬಗ್ಗೆ ಮಾತನಾಡಿದ್ದ ಸ್ವಾಮೀಜಿ, ಅತ್ಯಾಚಾರ ಹೆಚ್ಚಲು, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಲು ಇಂಥ ಘಟನಾವಳಿಗಳು ಕಾರಣವಾಗುತ್ತವೆ ಎಂಬ ಹೇಳಿಕೆ ನೀಡಿದ್ದರು.












Click it and Unblock the Notifications