ಉರಿಯಲ್ಲಿ ಎನ್‌ಕೌಂಟರ್, ಉಗ್ರ ಅಬ್ದುಲ್ ಖಯೂಮ್ ಹತ್ಯೆ
ಶ್ರೀನಗರ, ಸೆಪ್ಟೆಂಬರ್ 26 : ಜಮ್ಮು ಮತ್ತು ಕಾಶ್ಮೀರದ ಮೋಸ್ಟ್ ವಾಟೆಂಡ್ ಉಗ್ರ ಅಬ್ದುಲ್ ಖಯೂಮ್‌ನನ್ನು ಹತ್ಯೆ ಮಾಡಲಾಗಿದೆ. ಪಾಕಿಸ್ತಾನದಿಂದ ವಾಪಸ್ ಬರುವಾಗ ಉರಿ ಪ್ರದೇಶದಲ್ಲಿ ಖಯೂಮ್‌ನನ್ನು ಭಾರತೀಯ ಸೇನೆ ಕೊಂದು ಹಾಕಿದೆ.
ಎರಡು ವರ್ಷಗಳಿಂದ ಖಯೂಮ್ ಜಮ್ಮು ಮತ್ತು ಕಾಶ್ಮೀರದ ಮೋಸ್ಟ್ ವಾಡೆಂಟ್ ಉಗ್ರರ ಪಟ್ಟಿಯಲ್ಲಿದ್ದ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಹೊರಬಂದಿದ್ದ ಖಯೂಮ್, ಲಷ್ಕರ್-ಇ-ಇಸ್ಲಾಂ ಎಂಬ ಸಂಘಟನೆ ಹುಟ್ಟುಹಾಕಿದ್ದ. ಹಲವು ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ.

ಖಯೂಮ್‌ನನ್ನು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯಿಂದ ಉಚ್ಛಾಟಿಸಲಾಗಿತ್ತು. ಖಯೂಮ್ ಮುಗ್ಧ ಜನರನ್ನು ಹತ್ಯೆ ಮಾಡುತ್ತಿದ್ದಾನೆ ಮತ್ತು ಹುರಿಯತ್ ಮುಖಂಡರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎಂಬ ಆರೋಪದ ಹಿನ್ನಲೆಯಲ್ಲಿ ಉಚ್ಛಾಟನೆ ಮಾಡಲಾಗಿತ್ತು.
ಮೊದಲು ಖಯೂಮ್ ಉತ್ತರ ಕಾಶ್ಮೀರದ ಉಗ್ರರ ಪಟ್ಟಿಯಲ್ಲಿದ್ದ. ಮೊಬೈಲ್ ಟವರ್ ಮೇಲೆ ನಡೆದ ದಾಳಿ, 6 ಜನರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಖಯೂಮ್ ಪ್ರಮುಖನಾಗಿದ್ದ. ಪೊಲೀಸರು ಈತನ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು.
ಬಾರಮುಲ್ಲಾ ಜಿಲ್ಲೆಯ ಸುಪೋರ್ ಪ್ರದೇಶದ ನಿವಾಸಿಯಾದ ಖಯೂಮ್ 16ನೇ ವಯಸ್ಸಿನಲ್ಲಿ ಉಗ್ರ ಸಂಘಟನೆ ಸೇರಿದ್ದ. 1992ರಲ್ಲಿ ಈತನನ್ನು ಬಂಧಿಸಲಾಗಿತ್ತು. ನಂತರ ಬಿಡುಗಡೆಗೊಂಡಿದ್ದ ಈತ 1995ರಲ್ಲಿ ಮತ್ತೆ ಸಂಘಟನೆ ಸೇರಿಕೊಂಡಿದ್ದ. ಕಮಾಂಡರ್ ಆಗಬೇಕು ಎಂಬುದು ಈತನ ಕನಸಾಗಿತ್ತು.












Click it and Unblock the Notifications