ದೇಶದ ವಿಷಯ ಬಂದಾಗ ನಾವು ಕೇಂದ್ರ ಸರ್ಕಾರದ ಪರ: ಓವೈಸಿ
ಹೈದರಾಬಾದ್, ಜೂನ್ 16: "ದೇಶದ ವಿಷಯ ಬಂದಾಗ ನಾವು ಕೇಂದ್ರ ಸರ್ಕಾರದ ಪರವಾಗಿ ನಿಲ್ಲುತ್ತೇವೆ. ಕಾಶ್ಮೀರದ ವಿಷಯದಲ್ಲಿ ಸುಖಾಸುಮ್ಮನೆ ತಲೆಹಾಕಬೇಡಿ" ಎಂದು ವಿಶ್ವಸಂಸ್ಥೆಗೆ ಎಐಎಂಐಎಂ(All India Majlis-e-Ittehadul Muslimeen) ಅಧ್ಯಕ್ಷ ಅಸಾದುದ್ದಿನ್ ಓವೈಸಿ ತಾಕೀತು ಮಾಡಿದ್ದಾರೆ.
ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂಬ ಕುರಿತಂತೆ ವಿಶ್ವಸಂಸ್ಥೆ ಬಿಡುಗಡೆ ಮಾಡಿದ್ದ ವರದಿಯ ಕುರಿತು ಮಾತನಾಡಿದ ಅವರು, "ಭಾರತದ ಆಂತರಿಕ ವಿಷಯದಲ್ಲಿ ತಲೆಹಾಕುವುದಕ್ಕೆ ವಿಶ್ವಸಂಸ್ಥೆಗೆ ಯಾವುದೇ ಹಕ್ಕಿಲ್ಲ. ಈ ವರದಿ ದೇಶದ ಪರಮಾಧಿಕಾರಕ್ಕೆ ಧಕ್ಕೆ ತರುತ್ತದೆ. ವಿಶ್ವಸಂಸ್ಥೆ ನಡೆಯನ್ನು ಖಂಡಿಸಲು ನಾವು ಭಾರತೀಯ ಸರ್ಕಾರದೊಂದಿಗಿದ್ದೇವೆ" ಎಂದು ಅವರು ಹೇಳಿದ್ದಾರೆ.
"ಕೇಂದ್ರ ಸರ್ಕಾರದೊಂದಿಗೆ ನಮ್ಮ ಸಂಬಂಧ ಚೆನ್ನಾಗಿಲ್ಲದಿರಬಹುದು. ಆದರೆ ದೇಶದ ವಿಷಯ ಬಂದಾಗ ನಾವು ನಿಸ್ಸಂದೇಹವಾಗಿ ಸರ್ಕಾರದ ಪರ ನಿಲ್ಲುತ್ತೇವೆ" ಎಂದು ಅವರು ಹೇಳಿದರು.

"ಜಮ್ಮು-ಕಾಶ್ಮೀರವನ್ನು ಕಳೆದ ನಾಲ್ಕು ವರ್ಷದಿಂದ ಬಿಜೆಪಿ ಮತ್ತು ಪಿಡಿಪಿ ಸರ್ಕಾರಗಳು ಆಳುತ್ತಿವೆ. ಆದರೆ ಯಾವುದೇ ಬದಲಾವಣೆಯಾಗಲೀ, ಸುಧಾರಣೆ, ಅಭಿವೃದ್ಧಿಯಾಗಲೀ ಆಗಿಲ್ಲ" ಎಂದು ಅವರು ಹೇಳಿದರು.
ಕಾಶ್ಮೀರದಲ್ಲಿ ಸೈನಿಕರನ್ನು ಉಗ್ರರು ಹತ್ಯೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ರಜಾನ್ ನಂಥ ಪವಿತ್ರ ಮಾಸದಲ್ಲಿ ಮುಗ್ಧರನ್ನು ಕೊಲ್ಲಲು ಇವರು ಯಾರು? ಇವರೆಲ್ಲ ಮನುಷ್ಯರೇ" ಎಂದು ಖಾರವಾಗಿ ಪ್ರಶ್ನಿಸಿದರು.











Click it and Unblock the Notifications