ಗೋಲ್ ಮಾಲ್ ಮೆಸೇಜ್ ನಂಬಿ ಉತ್ರ ಕೊಟ್ರೇ...!
ಶುಭಾಶಯಗಳು! ನಿಮ್ಮ ಮೊಬೈಲ್ ನಂಬರ್ 4 ಕೋಟಿ 65 ಲಕ್ಷ ರೂ. ಬಹುಮಾನ ಗೆದ್ದಿದೆ. ಹಣ ಪಡೆಯಲು ನಿಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕಳಿಸಿ...
ಧನ್ಯವಾದಗಳು, ನಾವು ನಡೆಸಿದ ಲಕ್ಕಿ ಡ್ರಾ ನಲ್ಲಿ ನೀವು ವಿಜೇತರಾಗಿದ್ದಿರಿ, ತಕ್ಷಣ ನಿಮ್ಮ ವಿವರಗಳನ್ನು ಮೇಲ್ ಮಾಡಿ, ಇಂದೇ ಕೊನೆ ದಿನ...[ವೈಷ್ಣೋದೇವಿ ಹುಂಡಿಯಲ್ಲಿ ನಕಲಿ ಚಿನ್ನ ಬೆಳ್ಳಿ ಆಭರಣ]

ನಾನೊಬ್ಬ ರೋಗಿಷ್ಠ, ನನ್ನ ಬಳಿ ಅಪಾರ ಆಸ್ತಿಯಿದೆ. ಮಕ್ಕಳು ದೂರವಾದ್ದರಿಂದ ಚರ್ಚ್ ಅಥವಾ ದೇವಾಲಯಕ್ಕೆ ನೀಡಬೇಕೆಂದಿದ್ದೇನೆ. ಕೆಳಗೆ ನನ್ನ ವಕೀಲರ ವಿವರ ನೀಡಿದ್ದೇನೆ. ದಯವಿಟ್ಟು ಸಹಾಯ ಮಾಡಿ, ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಿ.
ನೀವು ಕಪಲ್ ಟಿಕೆಟ್ ವಿನ್ ಆಗಿದ್ದಿರಾ, ಕೂಡಲೇ ಕೆಳಗಿನ ನಂಬರ್ ಗೆ ಕರೆ ಮಾಡಿ ಹೆಚ್ಚಿನ ವಿವರ ಪಡೆಯಿರಿ.....
ಈ ಬಗೆಯ ಮೆಸೆಜ್ ಗಳು ನಿಮ್ಮ ಮೊಬೈಲ್ ನಂಬರ್ ಗೆ ಅಥವಾ ಈ ಮೇಲ್ ಗೊ ಬಂದಿರುವ ಅನುಭವ ಆಗಿರಬಹುದು. ಹೌದೆಂದು ನಂಬಿ ಮೆಸಜ್ ಮಾಡಿದರೆ ಅಥವಾ ವಿವರ ನೀಡಿದರೆ ನೀಡಿದರೆ ನಿಮ್ಮ ಕತೆ ಮುಗಿದಂತೆಯೇ![ಕಿಮ್ಸ್ ವೈದ್ಯರ ಕೆಲಸ ನಿಲ್ಲಿಸಿದ ವಾಟ್ಸಪ್ ಸಂದೇಶ!]
ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಆದಂತೆ ಸೈಬರ್ ಕ್ರೈಂ ಸಹ ಹೆಚ್ಚಿಕೊಂಡಿದೆ. ನಾವು ಚಾಪೆ ಕೆಳಗೆ ನುಸುಳಿದರೆ ಅವರು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಜನರನ್ನು ಮರುಳು ಮಾಡುವ ಕಲೆ ಅವರಿಗೆ ಕರಗತವಾಗಿದೆ.
ಕರೆ ಮಾಡಿದರೆ ಏನಾಗುತ್ತದೆ?
ಈ ಬಗೆಯ ಸಂದೇಶಗಳು ತಿಳಿಸುವಂತೆ ಹಿಂದಕ್ಕೆ ಕರೆ ಮಾಡಿದರೆ ನಿಮ್ಮ ಮೊಬೈಲ್ ಬ್ಯಾಲೆನ್ಸ್ ಖತಂ ಆಗುವುದು ಸಣ್ಣ ಬಗೆಯ ವಂಚನೆ. ತಕ್ಷಣಕ್ಕೆ ಯಾರೂ ಕರೆ ಸ್ವೀಕರಿಸಲ್ಲ. ಬ್ಯುಸಿ ಬರುತ್ತಿರುತ್ತದೆ. ಅದರ ಅರ್ಥ ನಿಜವಾಗಿ ನಂಬರ್ ಬ್ಯುಸಿ ಇರುವುದಿಲ್ಲ. ನಿಮಗೆ ಕುತೂಹಲ ಹೆಚ್ಚಾಗಲು ಈ ರೀತಿ ಮಾಡಲಾಗುತ್ತದೆ. ನಂತರ ಸಿಹಿ ಸ್ವರದಲ್ಲಿ ಮಾತನಾಡುವ ಲೇಡಿ ನಿಮ್ಮ ಬ್ಯಾಂಕ್ ಖಾತೆ ಸೇರಿದಂತೆ ಎಲ್ಲ ವಿವರ ಪಡೆದುಕೊಳ್ಳುತ್ತಾಳೆ. ಅಪ್ಪಿ ತಪ್ಪಿ ನೀಡಿದರೆ ನಿಮ್ಮ ಖಾತೆಯಲ್ಲಿರುವ ಹಣದ ಕತೆ ಮುಗಿದಂತೆ!
ವಾಟ್ಸಪ್ ಸಹ ಹೊರತಾಗಿಲ್ಲ
ವಾಟ್ಸಪ್ ನಲ್ಲಿ ಸಹ ಇಂಥದ್ದೇ ಚಟುವಟಿಕೆಗಳು ನಡೆಯುತ್ತಿವೆ. ಅಮೆಜಾನ್, ಫ್ಲಿಪ್ ಕಾರ್ಟ್ ಕಂಪನಿಗಳ ಹೆಸರು ಹೇಳಿಕೊಂಡು ವಂಚನೆ ಮಾಡಲಾಗುತ್ತದೆ. ಈ ಸಂದೇಶವನ್ನು 10 ಜನರಿಗೆ ಕಳಿಸಿ ಗಿಫ್ಟ್ ವೋಚರ್ ಪಡೆಯಿರಿ ಎಂಬ ಸಂದೇಶ ರವಾನೆಯಾಗಿರುತ್ತದೆ. ಸಂದೇಶ ನಿಮ್ಮ ಸ್ನೇಹಿತರಿಂದಲೇ ಬಂದಿರಬಹುದು ಆದರೆ ಅದರ ಮೂಲ ಎಲ್ಲಿ? ಹುಡುಕಲು ಯಾರೂ ಹೋಗಲ್ಲ. ಹಣ ಕಳೆದುಕೊಂಡು 'ಬಕ್ರಾ'ಗಳಾದ ಮೇಲೆಯೇ ಮಾಡಿದ ತಪ್ಪು ಗೊತ್ತಾಗುತ್ತದೆ.[ವಾಟ್ಸಪ್ ಸಹಾಯವಾಣಿ ತೆರೆದ ರೈಲ್ವೆ ಪೊಲೀಸರು]
ಫೇಸ್ ಬುಕ್ ಕತೆ ಏನು?
ಫೇಸ್ ಬುಕ್ ಮಾತ್ರವಲ್ಲ. ಅನೇಕ ಸೈಟ್ ಗಳನ್ನು ತೆರೆದುಕೊಂಡಿದ್ದಾಗ ಪಾಪ್ ಅಪ್ ವಿಂಡೋಗಳು ನಿಮ್ಮ ಗಮನ ಸೆಳೆಯುತ್ತವೆ. ಸ್ವಲ್ಪ 'ಚಂಚಲ' ಮನಸ್ಸಿನವರಾದರೆಂತೂ ಮುಗಿದೇ ಹೋಯಿತು. ವಿಂಡೋ ಮೇಲೆ ಕ್ಲಿಕ್ ಮಾಡೋದು ಖಂಡಿತ. ಇಲ್ಲಿಯೂ ಅದೇ ಮೆಥೆಡ್. ನಿಮ್ಮ ವಿವರ ನಿಮ್ಮ ಕೈಯಲ್ಲೇ ಪಡೆದುಕೊಂಡು ಸರಿಯಾಗಿಯೇ ಟೋಪಿ ಹಾಕ್ತಾರೆ.
ಹೀಗೂ ಉಂಟು
ಅಂತರ್ಜಾಲ ತಾಣದಲ್ಲಿ, ಅಥವಾ ಸಾಮಾಜಿಕ ಜಾಲತಾಣದಲ್ಲಿ ದೊರೆಯುವ ಹುಡುಗಿಯರ ಫೋಟೋ ಗಳನ್ನು ಬಳಸಿಕೊಂಡು ಜನರನ್ನು ಸೆಳೆಯಲಾಗುತ್ತದೆ. ಅವರದ್ದೇ ಭಾಷೆಯಲ್ಲಿ ಆಫರ್ ತಿಳಿಸಲಾಗುತ್ತದೆ. ಮರುಳಾಗಿ ಕ್ಲಿಕ್ ಮಾಡಿದರೆ ರಜಿಸ್ಟರ್ ಮಾಡಿಕೊಳ್ಳಲು ನಿರ್ದೇಶನ ಬರುತ್ತದೆ. ನಿಮ್ಮ ಇ ಮೇಲ್ ನೀಡುವುದು ಕಡ್ಡಾಯ. ನಂತರ ಇಂಥ ಸ್ಥಳಕ್ಕೆ ಬನ್ನಿ ಎಂಬ ಕರೆ ಅಥವಾ ಮೇಲ್ ಬರಬಹುದು. ಅಲ್ಲಿಗೆ ತೆರಳಿದರೆ ನಿಮ್ಮ ಕೈ ಲಿದ್ದುದ್ದನ್ನು ದೋಚಿ ವಂಚಕರು ಪರಾರಿಯಾಗುತ್ತಾರೆ.
ಗೋಲ್ ಮಾಲ್ ಈ ಮೇಲ್ ಮೂಲ ಎಲ್ಲಿ?
ಸೈಬರ್ ಅಪರಾಧ ದಳದವರಿಗೂ ಈ ಗೋಲ್ ಮಾಲ್ ಈ ಮೇಲ್ ಗಳು ಎಲ್ಲಿಂದ ಜನರೇಟ್ ಆಗುತ್ತವೆ ಅಂಥ ತಕ್ಷಣಕ್ಕೆ ಗೊತ್ತಾಗಲ್ಲ. ಜನ ಮೋಸ ಹೋಗುವವರೆಗೂ ದೂರು ನೀಡಲು ಹೋಗಲ್ಲ. ಆನ್ ಲೈನ್ ಗ್ಯಾಂಬ್ಲಿಂಗ್ ನ್ನು ಸಹ ಇದೆ ಬಗೆಯಲ್ಲಿ ಬಿಂಬಿಸಲಾಗುತ್ತದೆ ಎಂಬುದನ್ನು ನಂಬಲೇ ಬೇಕು. ಜುಗಾರಿ ಆಡಿ ಅಥವಾ ಇನ್ನಿತರ 'ಮೋಹ' ಕ್ಕೆ ಸಿಕ್ಕಿ ಹಣ ಕಳೆದುಕೊಂಡವ ತನ್ನ ಮರ್ಯಾದೆ ತಾನೇ ತೆಗೆದುಕೊಳ್ಳುತ್ತಾನೆಯೇ?
ಹಣ ಕಳೆದುಕೊಂಡ್ರೆ ಏನು ಮಾಡಬೇಕು?
ಒಂದು ವೇಳೆ ತಿಳಿಯದೇ ಕರೆ ಮಾಡಿ ಹಣ ಕಳೆದಿಕೊಂಡರೆ ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗಬಹುದು. ಪ್ರಾಥಮಿಕವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲು ಮಾಡಬೇಕಾಗುತ್ತದೆ. ಕಳೆದುಕೊಂಡ ಹಣದ ಮೌಲ್ಯವನ್ನು ಆಧರಿಸಿ ಅದನ್ನು ಸೈಬರ್ ಅಪರಾಧ ದಳಕ್ಕೆ ಹಸ್ತಾಂತರಿಸಬೇಕೋ? ಅಥವಾ ಇಲ್ಲಿಯೇ ವಿಚಾರಣೆ ಮಾಡಬಹುದೋ? ಎಂಬುದನ್ನು ತೀರ್ಮಾನಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಹಣ ಕಳೆದುಕೊಂಡವ ನೀಡಬೇಕಾಗುತ್ತದೆ.
ಪರಿಹಾರ ಏನು?
ನಿಮ್ಮ ಬ್ಯಾಂಕ್ ಶಾಖೆಗೋ ಅಥವಾ ಮೊಬೈಲ್ ಕಂಪನಿಯ ಕಸ್ಟಮರ್ ಕೇರ್ ಗೋ ಕರೆ ಮಾಡಿ ಹೊಸ ಯೋಜನೆಗಳ ಕುರಿತು ಕರೆ ಮಾಡಬೇಡಿ ಎಂದು ತಿಳಿಸಬಹುದು ಅಥವಾ ಬ್ಲಾಕ್ ಮಾಡಬಹುದು. ಆದರೆ ಈ ಗೋಲ್ ಮಾಲ್ ಸಂದೇಶ ಮತ್ತು ಕರೆಗಳಿಗೆ ಅವುಗಳನ್ನು ನಿರ್ಲಕ್ಷ್ಯಿಸುವುದೇ ಪರಿಹಾರ. ಎಲ್ಲಿಯಾದರೂ ಸಣ್ಣ ಮನಸ್ಸು ಮಾಡಿ ಪ್ರತಿಕ್ರಿಯೆ ನೀಡಿದರೆ ನೀವೇ ಬಲೆಯೊಳಗೆ ಬಿದ್ದಂತೆ ನೆನಪಿರಲಿ.












Click it and Unblock the Notifications