ತ್ರೈಮಾಸಿಕ ಜಿಡಿಪಿ ನಂಬಬೇಡಿ, ಇದೆಲ್ಲಾ ಸುಳ್ಳು: ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಡಿಸೆಂಬರ್ 24: ಜಿಡಿಪಿಗೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ ಸರಕಾರವನ್ನು ಅದೇ ಪಕ್ಷದ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟೀಕಿಸಿದ್ದಾರೆ.
ಅಪನಗದೀಕರಣ ಜಿಡಿಪಿ ಮತ್ತು ಆರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ತೋರಿಸುವಂತೆ ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆಯ (ಸಿಎಸ್ಒ) ಹಿರಿಯ ಅಧಿಕಾರಿಗಳ ಮೇಲೆ ನರೇಂದ್ರ ಮೋದಿ ಸರಕಾರ ಒತ್ತಡ ಹೇರಿದೆ ಎಂದು ಅವರು ಆರೋಪಿಸಿದ್ದಾರೆ.

ಅಹಮದಾಬಾದ್ ನಲ್ಲಿ ಶನಿವಾರ ಚಾರ್ಟೆಡ್ ಅಕೌಂಟೆಂಟ್ ಗಳನ್ನು ಉದ್ದೇಶಿಸಿ ಮಾತನಾಡಿದ ಸುಬ್ರಮಣಿಯನ್ ಸ್ವಾಮಿ , "ತ್ರೈಮಾಸಿಕ ಜಿಡಿಪಿ ಹಿಂದೆ ಹೋಗಬೇಡಿ. ಇದೆಲ್ಲಾ ಬೋಗಸ್. ಕೇಂದ್ರ ಸಂಖ್ಯಾಶಾಸ್ತ್ರ ಸಂಸ್ಥೆಯನ್ನು ಹುಟ್ಟುಹಾಕಿದವರು ನನ್ನ ತಂದೆ. ಹಾಗಾಗಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಸದಾನಂದ ಗೌಡರ ಜತೆ ನಾನು ಅಲ್ಲಿಗೆ ಹೋಗಿದ್ದೆ. ಆಗ ಅವರು ಸಿಎಸ್ಒ ವ್ಯಕ್ತಿಗೆ ಕರೆ ಮಾಡಿದರು. ಅಪನಗದೀಕರಣದಿಂದ ಜಿಡಿಪಿಗೆ ಯಾವುದೇ ಹೊಡೆತ ಬಿದ್ದಿಲ್ಲ ಎಂದು ತೋರಿಸಲು ಒತ್ತಡ ಇತ್ತು. ಹಾಗಾಗಿ ಅಪನಗದೀಕರಣದಿಂದ ಜಿಡಿಪಿಗೆ ಏನೂ ಹಾನಿಯಾಗಲಿಲ್ಲ ಎಂದು ಅವರು ಮಾಹಿತಿ ನೀಡಿದರು," ಎಂದು ಹೇಳಿದ್ದಾರೆ.
ನನಗೆ ಗೊತ್ತಿತ್ತು ಪರಿಣಾಮ ಆಗಿದೆ ಎಂದು. ಇದರಿಂದ ನಾನು ನರ್ವಸ್ ಆದೆ. ಆಗ ನಾನು ಸಿಎಸ್ಒ ನಿರ್ದೇಶಕರ ಬಳಿ ಕೇಳಿದೆ,' ನೀವು ಹೇಗೆ ಜಿಡಿಪಿ ಲೆಕ್ಕ ಹಾಕಿದ್ರಿ' ಎಂದು.
"'ಕಳೆದ ವರ್ಷ ಔಪಚಾರಿಕ ವಲಯದ ಉತ್ಪಾದನೆಯ ಅನುಪಾತವಾಗಿ ಅನೌಪಚಾರಿಕ ಕ್ಷೇತ್ರದ ಉತ್ಪಾದನೆಯ ಜತೆ ಅನ್ವಯಿಸಲಾಗಿತ್ತು. ಜನವರಿಯಲ್ಲಿ ಇದನ್ನು ಸಂಘಟಿತ ವಲಯಕ್ಕೆ ಅನ್ವಯಿಸಲ್ಪಟ್ಟಿದೆ' ಎಂದು ಅವರು ನನಗೆ ಹೇಳಿದ್ದಾರೆ. ಸಂಬಂಧವು ಬದಲಾಗಿದೆ ಎಂದು ನಾನು ಅವರಿಗೆ ಹೇಳಿದೆ. ಆಗ ಅವರು, 'ನಾನು ಏನು ಮಾಡುವುದು? ನಾನು ಒತ್ತಡದಿಂದ ಈ ಮಾಹಿತಿ ನೀಡಿದ್ದೇನೆ,' ಎಂದರು. ಹಾಗಾಗಿ ಯಾವುದೇ ತ್ರೈಮಾಸಿಕ ಡೇಟಾವನ್ನು ನಂಬಬೇಡಿ "ಎಂದು ಸ್ವಾಮಿ ಹೇಳಿದ್ದಾರೆ. ಮತ್ತು ವಾರ್ಷಿಕ ಜಿಡಿಪಿ ಅಂಕಿಅಂಶಗಳನ್ನು ಮಾತ್ರ ನಂಬಿ ಎಂದು ಸ್ವಾಮಿ ಕಿವಿ ಮಾತು ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಸೆಪ್ಟೆಂಬರ್ 2017ರ ತ್ರೈಮಾಸಿಕದಲ್ಲಿ ಜಿಡಿಪಿ 6.3ಕ್ಕೆ ಏರಿಕೆಯಾಗಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದರು. ಈ ಹಿಂದೆ ಜೂನ್ ತ್ರೈಮಾಸಿಕದಲ್ಲಿ ಕೇವಲ 5.7 ಜಿಡಿಪಿ ಇದ್ದು ಇದೀಗ ಜಿಡಿಪಿ ಏರಿಕೆಯಾಗಿದೆ ಎಂದು ಜೇಟ್ಲಿ ಹೇಳಿದ್ದರು. ಇದೀಗ ಈ ಡೇಟಾವನ್ನು ಸ್ವಾಮಿ ತಳ್ಳಿ ಹಾಕಿದ್ದಾರೆ. "ಜತೆಗೆ ಮೂಡೀಸ್ ಮತ್ತು ಫಿಟ್ಚೆಸ್ ನ್ನು ನಂಬಬೇಡಿ. ನೀವು ಅವರಿಗೆ ಹಣ ನೀಡಿ ನಿಮಗೆ ಬೇಕಾದ ಡೇಟಾ ಪಡೆಯಬಹುದು," ಎಂದು ಸ್ವಾಮಿ ಹಗರುವಾಗಿ ಮಾತನಾಡಿದ್ದಾರೆ.












Click it and Unblock the Notifications