G20 Summit: ಭಾರತದ ವಿರುದ್ಧ ಜಿ20 ಶೃಂಗಸಭೆ ಬಳಿಕ ಜಾಗತಿಕ ಕುತಂತ್ರ?
ಭಾರತ ಜಾಗತಿಕವಾಗಿ ಬೆಳೆಯುತ್ತಿದೆ, ಅದ್ರಲ್ಲೂ ಜಿ20 ಶೃಂಗಸಭೆ ಬಳಿಕ ಭಾರತದ ತಾಕತ್ ಏನು ಎಂಬುದು ಇಡೀ ಜಗತ್ತಿಗೇ ಗೊತ್ತಾಗಿದೆ. ಅಮೆರಿಕ, ಬ್ರಿಟನ್, ಕೆನಡಾ ದೇಶಗಳಿಗೆ ಈ ಸತ್ಯ ಅರಿವಾಗಿದೆ. ಇದೇ ಕಾರಣಕ್ಕೆ ಭಾರತದ ವಿರುದ್ಧ ಈಗ ಜಾಗತಿಕ ಮಟ್ಟದಲ್ಲಿ ಕುತಂತ್ರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾದರೆ ಭಾರತದ ವಿರುದ್ಧ ಇಂತಹ ಕುತಂತ್ರ ಮಾಡಿದ್ದು ಯಾರು? ಇಂಚಿಂಚು ಮಾಹಿತಿ ತಿಳಿಯೋಣ ಬನ್ನಿ.
ಕೆನಡಾ ಪ್ರಧಾನಿ ಆಧಾರ ರಹಿತವಾಗಿ ಭಾರತದ ವಿರುದ್ಧ ಮಾಡಿರುವ ಆರೋಪಕ್ಕೆ ಇದೀಗ ಅಮೆರಿಕ ಮತ್ತು ಬ್ರಿಟನ್ ಕೂಡ ಬೆಂಬಲ ನೀಡುತ್ತಿವೆ. ಅದ್ರಲ್ಲೂ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂಬ ವಾದವನ್ನೂ ಬೇರೆ ಮುಂದಿಟ್ಟಿದ್ದಾರೆ. ಜಿ20 ಶೃಂಗಸಭೆ ಸಂದರ್ಭದಲ್ಲಿ ಭಾರತದ ಬಗ್ಗೆ ಹೊಗಳಿ ಅಟ್ಟಕ್ಕೆ ಏರಿಸಿದ್ದ ಅಮೆರಿಕ ಕೂಡ ದಿಢೀರ್ ಕೆನಡಾ ಪರ ನಿಂತು ಮಾತನಾಡಿದೆ. ಅಲ್ಲದೆ ಬ್ರಿಟನ್ ಕೂಡ ಕೆಡನಾ ಪರವಾಗಿ ಬ್ಯಾಟ್ ಬೀಸಿದೆ. ಹಾಗಾದ್ರೆ ಈ ಎಲ್ಲಾ ಬೆಳವಣಿಗೆ ಭಾರತವನ್ನು ಟಾರ್ಗೆಟ್ ಮಾಡುವುದಕ್ಕಾ?

ಪಾಶ್ಚಿಮಾತ್ಯ ದೇಶಗಳ ಟಾರ್ಗೆಟ್ ಭಾರತ?
ಹೌದು ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಭಾರತ ತಟಸ್ಥವಾಗಿ ಉಳಿದಿದೆ. ಇದರ ಬಗ್ಗೆ ಅಮೆರಿಕ & ಅದರ ಪಟಾಲಂಗೆ ಸಾಕಷ್ಟು ಉರಿ ಇದೆ. ಅದರಲ್ಲೂ ನ್ಯಾಟೋ ಬೆಂಬಲಿತ ರಾಷ್ಟ್ರಗಳು ಈ ಯುದ್ಧದಲ್ಲಿ ಉಕ್ರೇನ್ ಪರ ನಿಂತಿರುವಾಗ ಭಾರತಕ್ಕೂ ನ್ಯಾಟೋ ಸೇರಲು ಆಫರ್ ಬಂದಿದೆ ಎನ್ನಲಾಗಿತ್ತು. ಈ ವಿಚಾರದಲ್ಲಿ ಭಾರತ ಅತ್ಯಂತ ಜಾಣ ನಡೆ ಇಟ್ಟಿದ್ದು ಯಾವುದೇ ಕಾರಣಕ್ಕೂ ನ್ಯಾಟೋ ಮತ್ತು ಯುದ್ಧದ ಸಹವಾಸ ಮಾಡಿಲ್ಲ.
ನ್ಯಾಟೋ ಸೇರದೆ ಹಾಗೂ ಉಕ್ರೇನ್‌ಗೆ ಬೆಂಬಲ ನೀಡದೆ ಭಾರತ ಜಾಣ ನಡೆ ಇಟ್ಟಿದೆ. ಈ ಮೂಲಕ ರಷ್ಯಾ ಸಂಬಂಧ ಉಳಿಸಿಕೊಂಡು ಅಮೆರಿಕ ಜೊತೆಗೆ ಸ್ನೇಹ ಕಾಪಾಡಿಕೊಂಡಿದೆ. ಆದರೆ ಇದೇ ಕಾರಣಕ್ಕೆ ನ್ಯಾಟೋ ಬೆಂಬಲಿತ ರಾಷ್ಟ್ರಗಳು ಭಾರತವನ್ನ ಟಾರ್ಗೆಟ್ ಮಾಡಿ, ಆರೋಪ ಮಾಡುತ್ತಿವೆಯಾ? ಎಂಬ ಆರೋಪ ಕೇಳಿಬಂದಿದೆ. ಭಾರತಕ್ಕೆ ಮಗ್ಗಲ ಮುಳ್ಳಾಗಿ ಕಾಡುತ್ತಿರುವ ಖಲಿಸ್ತಾನಿಗಳ ವಿರುದ್ಧ ಕ್ರಮ ಕೈಗೊಳ್ಳದ ಕೆನಡಾ ಸರ್ಕಾರ ಈಗ ದಿಢೀರ್ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದೆ.
ಕಿರಿಕ್ ಶುರುವಾಗಿದ್ದು ಯಾವ ಕಾರಣಕ್ಕೆ?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ರು ಕೆಲ ದುಷ್ಕರ್ಮಿಗಳು. ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪವು ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದ್ರೆ ಈ ಕೊಲೆಯನ್ನ ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಹೀಗಾಗಿ ಸೂಕ್ತ ಸಾಕ್ಷ್ಯ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದೆ. ಹೀಗೆ ಭಾರತದಿಂದ ಉತ್ತರ ಬಂದರೂ ಬೇರೆ ಬೇರೆ ದೇಶಗಳಿಗೆ ಕೆನಡಾ ಫಿಟ್ಟಿಂಗ್ ಇಡುತ್ತಿದೆ.

ಜಿ20 ಶೃಂಗಸಭೆ ಕಾರಣಕ್ಕೆ ಟಾರ್ಗೆಟ್?
ಅಂದಹಾಗೆ ಈ ಬಾರಿ ಭಾರತದ ನೇತೃತ್ವದಲ್ಲಿ ನಡೆದಿದ್ದ ಜಿ20 ಶೃಂಗಸಭೆಯಲ್ಲಿ ಜಗತ್ತಿಗೇ ಭಾರತದ ಶಕ್ತಿ ಅರಿವಾಗಿತ್ತು. ಅದ್ರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳ ಗ್ಯಾಂಗ್‌ಗೆ ಈ ಬೆಳವಣಿಗೆ ಸಹಜವಾಗಿ ಹೊಟ್ಟೆ ಕಿಚ್ಚು ತರಿಸಿದೆ. ಈ ಕಾರಣಕ್ಕೆ ಭಾರತವನ್ನು ಈಗ ಕೆನಡಾ ಟಾರ್ಗೆಟ್ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಕೆನಡಾಗೆ ಬೆಂಬಲ ನೀಡುವ ಮೂಲಕ ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಗುಂಪು ಭಾರತವನ್ನ ಟಾರ್ಗೆಟ್ ಮಾಡುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಭಾರತ ಕೂಡ ಮುಳ್ಳನ್ನ ಮುಳ್ಳಿಂದಲೇ ತೆಗೆಯಲು ಸಜ್ಜಾಗಿದೆ.












Click it and Unblock the Notifications