ಇಸ್ರೇಲ್ & ಪ್ಯಾಲೆಸ್ಟೀನ್ ಸಂಘರ್ಷದ ಬಗ್ಗೆ ಕಾಂಗ್ರೆಸ್ ಹೇಳಿದ್ದೇನು?
ಇನ್ನೇನು ಶೀಘ್ರದಲ್ಲಿ 5 ರಾಜ್ಯಗಳ ಚುನಾವಣೆ ನಡೆಯಲಿದ್ದು ಈ ಸಂದರ್ಭದಲ್ಲೇ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆ ಕುತೂಹಲ ಕೆರಳಿಸಿದೆ. ಬಿಹಾರ ರಾಜ್ಯದ ಜಾತಿ ಗಣತಿ ವಿಚಾರ ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನ ಕಾಂಗ್ರೆಸ್ ನಾಯಕರು ಪ್ರಸ್ತಾಪ ಮಾಡಿದ್ದಾರೆ. ಹಾಗೇ ಇಸ್ರೇಲ್ ಹಿಂಸಾಚಾರದ ಬಗ್ಗೆಯೂ ಕಾಂಗ್ರೆಸ್ ಸಭೆಯಲ್ಲಿ ಚರ್ಚೆ ಆಗಿದೆ. ಹಾಗಾದ್ರೆ ಸಿಡಬ್ಲ್ಯುಸಿ ಸಭೆಯ ನಿರ್ಣಯಗಳು ಏನು?
ಸಿಕ್ಕಿಂ, ಡಾರ್ಜಿಲಿಂಗ್, ಕಾಲಿಂಪಾಂಗ್ ಮತ್ತು ಕುರ್ಸಿಯೊಂಗ್ ಬೆಟ್ಟ ಪ್ರದೇಶದಲ್ಲಿ ಸಂಭವಿಸಿದ ತೀವ್ರ ಪ್ರವಾಹ ಹಾಗೂ ಭಾರತೀಯ ಸೇನಾಪಡೆಗಳ ಸಿಬ್ಬಂದಿ ಸೇರಿ ಜೀವಹಾನಿಗೆ ಸಿಡಬ್ಲ್ಯುಸಿ ಸಭೆಯಲ್ಲಿ ಸಂತಾಪ ವ್ಯಕ್ತಪಡಿಸಲಾಗಿದೆ. ಹವಾಮಾನ ಬದಲಾವಣೆ ಹಿನ್ನೆಲೆಯಲ್ಲಿ ಇಂತಹ ದುರ್ಘಟನೆ ಮರುಕಳಿಸದಂತೆ ಸಾಮೂಹಿಕ ಹಾಗೂ ವಿಶ್ವಾಸಾರ್ಹ ಪರಿಸರ ಪರಿಣಾಮ ಮೌಲ್ಯ ಮಾಪನವನ್ನು ಸೂಕ್ಷ್ಮವಾದ ಹಿಮಾಲಯನ್ ಪ್ರದೇಶಗಳಲ್ಲಿ ಕೈಗೊಳ್ಳುವುದರ ಅಗತ್ಯತೆಯನ್ನು ಸಿಡಬ್ಲ್ಯುಸಿ ಒತ್ತಾಯಿಸಿದೆ. ಹಾಗೇ ಕೇಂದ್ರ ಸರ್ಕಾರ ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಉತ್ತರ ಭಾಗದ ಪರ್ವತ ಶ್ರೇಣಿಗಳ ಪ್ರದೇಶದಲ್ಲಿ ಎಲ್ಲ ಅಗತ್ಯ ನೆರವು ಒದಗಿಸಲು ಸಿಡಬ್ಲ್ಯುಸಿ ಹೇಳಿದೆ.

ಜಾತಿ ಗಣತಿ ವಿಚಾರವೂ ಚರ್ಚೆಗೆ
ಹಾಗೇ ಮತ್ತೊಂದು ಕಡೆ ಬಿಹಾರ ಸರ್ಕಾರ ಜಾತಿ ಗಣತಿ ವರದಿ ಬಿಡುಗಡೆ ಮಾಡಿರುವುದನ್ನು ಸಿಡಬ್ಲ್ಯುಸಿ. ಸ್ವಾಗತಿಸಿದೆ. ಸಮೀಕ್ಷೆ ಅಂಕಿ ಅಂಶಗಳಿಂದ ವಿವಿಧ ಜಾತಿ ಜನಸಂಖ್ಯೆ ಪ್ರಮಾಣ ಹಾಗೂ ಪ್ರಾತಿನಿಧ್ಯದ ನಡುವೆ ಭಾರಿ ಅಂತರ ಇರುವುದು ಬಹಿರಂಗಗೊಂಡಿದ್ದು, ಸಾಮಾಜಿಕ ನ್ಯಾಯ ಖಾತರಿಪಡಿಸುವ ಕ್ರಮ ಕೈಗೊಳ್ಳುವ ತುರ್ತು ಅಗತ್ಯವಿದೆ ಎನ್ನುವುದನ್ನ ತೋರಿಸುತ್ತದೆ ಎಂದು ಇದೇ ವೇಳೆ ಸಿಡಬ್ಲ್ಯುಸಿ ಹೇಳಿದೆ. ಹಾಗೇ ಹಿಂದುಳಿದ ವರ್ಗಗಳ ಉಪ-ವರ್ಗೀಕರಣ ಕುರಿತಂತೆ ನ್ಯಾಯಮೂರ್ತಿ ರೋಹಿಣಿ ಆಯೋಗದ ಧ್ಯೇಯೋದ್ದೇಶ ಸಿಡಬ್ಲ್ಯುಸಿ ಸ್ವಾಗತಿಸುತ್ತದೆ ಎಂದು ತಿಳಿಸಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ
ಇದಲ್ಲದೆ ಭಾರತ್ ಜೋಡೋ ಯಾತ್ರೆ ಸಂದರ್ಭದಲ್ಲಿ ಪ್ರತಿ ರಾಜ್ಯದಲ್ಲಿಯೂ ಜಾತಿ ಸಮೀಕ್ಷೆಯ ಅಗತ್ಯದ ಕುರಿತು ಹಲವಾರು ನಿಯೋಗಗಳು ತಮ್ಮ ಅಭಿಪ್ರಾಯ ತಿಳಿಸಿದ್ದು, 85ನೇ ಕಾಂಗ್ರೆಸ್ ಅಧಿವೇಶನದ ರಾಯ್‌ಪುರ್ ಘೋಷಣೆಯಲ್ಲಿ ಸ್ಥಾನ ಪಡೆದಿದೆ ಎಂದಿದೆ. ಅಲ್ಲದೆ ಮೋದಿ ಸರ್ಕಾರ ಕೆಲ ಪತ್ರಕರ್ತರು ಮತ್ತು ಬರಹಗಾರರ ಮೇಲೆ ನಡೆಸಿದ ದಾಳಿ & ಭಯೋತ್ಪಾದನಾ ವಿರೋಧಿ ಕಾಯ್ದೆಗಳಡಿ ಪ್ರಕರಣ ದಾಖಲಿಸಿರುವುದನ್ನು ಸಿಡಬ್ಲ್ಯುಸಿ ಖಂಡಿಸುತ್ತದೆ ಎಂದು ತಿಳಿಸಲಾಗಿದೆ.
ಸಿಡಬ್ಲ್ಯುಸಿ ಸಭೆಯಲ್ಲಿ ಮಣಿಪುರ ಚರ್ಚೆ
ಮಣಿಪುರ ಹಿಂಸಾಚಾರದ ಬಗ್ಗೆಯೂ ಸಿಡಬ್ಲ್ಯುಸಿ ನಿರ್ಣಯ ಕೈಗೊಂಡಿದ್ದು, ಮಣಿಪುರದ ರಾಜ್ಯದಲ್ಲಿ ಸಾಂವಿಧಾನಿಕ ಸರ್ಕಾರದ ವ್ಯವಸ್ಥೆ ಕುಸಿದು ಬಿದ್ದಿರುವುದು ಮತ್ತು ಅಮಾನವೀಯ ದುರಂತ ಮುಂದುವರೆದಿರುವ ಕುರಿತು ಸಿಡಬ್ಲ್ಯುಸಿ ತೀವ್ರ ಅತಂಕ ವ್ಯಕ್ತಪಡಿಸುತ್ತದೆ ಎಂದು ಇದೇ ವೇಳೆ ತಿಳಸಿದೆ ಸಿಡಬ್ಲ್ಯುಸಿ. ಐದು ತಿಂಗಳ ನಂತರವೂ ಪ್ರಧಾನಮಂತ್ರಿಗಳು ಮಣಿಪುರದ ಜನರನ್ನು ಹಾಗೂ ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ಸಿಡಬ್ಲ್ಯುಸಿ ಆರೋಪಿಸಿದೆ.

ಕೇಂದ್ರ ಸರ್ಕಾರವು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಹಾಗೂ ಸಮುದಾಯಗಳ ನಡುವೆ ಸಾಮರಸ್ಯ ಬೆಸೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಮಣಿಪುರದಲ್ಲಿ ಸಾಂವಿಧಾನಿಕ ವ್ಯವಸ್ಥೆಯು ಕುಸಿದು ಬಿದ್ದಿದೆ. ಮಣಿಪುರ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಮುಖ್ಯಮಂತ್ರಿಯವರನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕೆಂಬ ತನ್ನ ಬೇಡಿಕೆಯನ್ನು ಸಿಡಬ್ಲ್ಯುಸಿ ಪುನರುಚ್ಛರಿಸುತ್ತದೆ, ಎಂದು ತಿಳಿಸಲಾಗಿದೆ.
ಸಿಡಬ್ಲ್ಯುಸಿ ಸಭೆಯಲ್ಲಿ ಭಾರತೀಯ ಕುಟುಂಬಗಳ ಆರ್ಥಿಕ ವಿಚಾರದ ಬಗ್ಗೆ ನಿರ್ಣಯವನ್ನ ಕೈಗೊಳ್ಳಲಾಗಿದ್ದು, ಭಾರತೀಯ ಕುಟುಂಬಗಳ ಒಟ್ಟಾರೆ ಹಣಕಾಸಿನ ಸಂಪತ್ತು 2022-23ರಲ್ಲಿ ಕಳೆದ 5 ದಶಕಗಳಲ್ಲೇ ಅತಿ ಕಡಿಮೆ ಅಂದರೆ ಶೇ. 5.1ಕ್ಕೆ ಇಳಿಕೆಯಾಗಿರುವುದಾಗಿ ರಿಸರ್ವ್ ಬ್ಯಾಂಕಿನ ದತ್ತಾಂಶವನ್ನು ಅತ್ಯಂತ ಕಳವಳಕಾರಿ ಎಂದು ಸಿಡಬ್ಲ್ಯುಸಿ ಗುರುತಿಸಿದೆ. ಅಂತೆ ಕಳೆದ 4 ದಶಕಗಳಲ್ಲಿಯೇ ಅತಿ ಕಡಿಮೆ ಆದಾಯ ಬೆಳವಣಿ ದಾಖಲಿಸಲಾಗಿದೆ. ಏರಿಕೆಯಾಗದ ವೇತನ, ಹೆಚ್ಚಿನ ಹಣದುಬ್ಬರ & ವ್ಯಾಪಕವಾದ ನಿರುದ್ಯೋಗ ಸಮಸ್ಯೆಯ ಪರಿಣಾಮವಾಗಿ ಭಾರತದ ಲಕ್ಷಾಂತರ ಕುಟುಂಬಗಳು ತಮ್ಮ ದೈನಂದಿನ ಅಗತ್ಯಗಳಿಗೆ ಸಾಲ ಮಾಡಿಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಎಂದಿದೆ ಸಿಡಬ್ಲ್ಯುಸಿ.
ಜನ ವಿರೋಧಿ ನಿಲುವು ಎಂದ ಸಿಡಬ್ಲ್ಯುಸಿ
ಮೋದಿ ಸರ್ಕಾರದ ಜನ ವಿರೋಧಿ ಹಾಗೂ ಉಳ್ಳವರ ಪರವಾದ ಆರ್ಥಿಕ ನೀತಿಗಳ ಫಲವಾಗಿ ಈ ಪರಿಸ್ಥಿತಿ ಉದ್ಭವಿಸಿದ್ದು, ಆರ್ಥಿಕತೆ ಪ್ರತಿ ವಲಯದಲ್ಲೂ ಸಂಪತ್ತು ಹಾಗೂ ಅಧಿಕಾರ ಕೆಲವೇ ಜನರ ಕೈಯಲ್ಲಿ ಕ್ರೋಢೀಕರಣವಾಗಿದೆ ಎಂದು ಸಿಡಬ್ಯುಸಿ ಹೇಳಿದೆ. ಮತ್ತೊಂದು ಆರೋಪ ಕೂಡ ಮಾಡಿರುವ ಸಿಡಬ್ಲ್ಯುಸಿ, ಮೋದಿ ಸರ್ಕಾರದ ಕೊಡುಗೆ ನಿರುದ್ಯೋಗ ಸಮಸ್ಯೆ ಹಾಗೂ ಹೆಚ್ಚುತ್ತಿರುವ ಅಸಮಾನತೆ ನಿವಾರಣೆಗೆ ದೇಶದ ಆರ್ಥಿಕ ನೀತಿ ಸಮಗ್ರವಾಗಿ ಪುನರ್ ರಚಿಸುವ ಅಗತ್ಯವಿದೆ ಎಂದು ರಾಯ್‌ಪುರ ಎಐಸಿಸಿ ಅಧಿವೇಶನದಲ್ಲಿ ಮಾಡಿದ ನಿರ್ಣಯವನ್ನು ಇದೀಗ ಮತ್ತೆ ಸಿಡಬ್ಲ್ಯುಸಿ ಎತ್ತಿ ಹಿಡಿಯುತ್ತದೆ, ಎಂದು ತಿಳಿಸಲಾಗಿದೆ.
ಯುದ್ಧದ ಬಗ್ಗೆಯೂ ಸಿಡಬ್ಲ್ಯುಸಿ ಪ್ರಸ್ತಾಪ
ಕೊನೆಯದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಶುರುವಾಗಿರುವ ಬಗ್ಗೆ ಮತ್ತು ಸಾವಿರಾರು ಜನ ಸಾವನ್ನಪ್ಪಿರುವ ಕುರಿತು ಸಿಡಬ್ಲ್ಯುಸಿ ಅಸಮಾಧಾನ ಮತ್ತು ಆತಂಕ ವ್ಯಕ್ತಪಡಿಸುತ್ತದೆ, ಎಂದು ಇದೇ ವೇಳೆ ನಿರ್ಣಯ ಕೈಗೊಳ್ಳಲಾಗಿದೆ. ಸಿಡಬ್ಲ್ಯುಸಿ ಪ್ಯಾಲೆಸ್ಟೀನ್ ಜನರ ಭೂಮಿ, ಸ್ವಯಂ ಆಡಳಿತ ಹಾಗೂ ಸ್ವಾಭಿಮಾನ ಮತ್ತು ಗೌರವಯುತ ಬದುಕು ನಡೆಸುವ ಹಕ್ಕುಗಳಿಗೆ ಸದಾ ಬೆಂಬಲ ನೀಡುತ್ತಾ ಬಂದಿದೆ. ಸಿಡಬ್ಲ್ಯುಸಿಯು ಕೂಡಲೇ ಯುದ್ಧ ವಿರಾಮ ಘೋಷಿಸಿ ಮಾತುಕತೆ ಮೂಲಕ ಎಲ್ಲ ಸಮಸ್ಯೆ ಬಗೆಹರಿಸುವಂತೆ ಕರೆ ನೀಡುತ್ತದೆ, ಎಂದು ತಿಳಿಸಿದೆ.












Click it and Unblock the Notifications