ಕರ್ನಾಟಕದಲ್ಲಿ ಕಾವೇರಿ ನೀರು ಖಾಲಿ, ತಮಿಳುನಾಡು ಸರ್ಕಾರಕ್ಕೆ ಫುಲ್ ಜಾಲಿ!
ಮಳೆ ಕೈಕೊಟ್ಟು ಕನ್ನಡಿಗರ ಪರಿಸ್ಥಿತಿ ಭೀಕರವಾಗಿದೆ. ಕನಿಷ್ಠ ಕುಡಿಯುವ ನೀರಿಗೂ ಈಗ, ಕನ್ನಡಿಗರು ಪರದಾಡುವ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲೂ ಒಂದು ಹನಿ ಮಳೆ ಕೂಡ ಬಂದಿಲ್ಲ. ಹೀಗಾಗಿ ಕನ್ನಡಿಗರು ಹನಿ ಹನಿ ನೀರಿಗೂ ಹಪಹಪಿಸುತ್ತಿದ್ದಾರೆ. ಹೀಗಿದ್ರೂ ತಮಿಳುನಾಡು ರಾಜ್ಯದಲ್ಲಿ ಮಾತ್ರ ಕಾವೇರಿ ನದಿಗೆ ಕಟ್ಟಿರುವ ಡ್ಯಾಂ ತುಂಬಿ ತುಳುಕುತ್ತಿದೆ!
ಹೌದು, ಮಳೆಯೇ ಇಲ್ಲ ಮಳೆ ಬಂದಿಲ್ಲ ಬೆಳೆ ಒಣಗಿ ಹೋಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ, ಎಲ್ಲೇ ಹೋದರೂ ರೈತರ ಬಾಯಲ್ಲಿ ಕೇಳಿಬರುವ ನೋವಿನ ಮಾತು ಇದು. 5-6 ವರ್ಷದಿಂದ ಕನ್ನಡಿಗರ ಮೇಲೆ ಕರುಣೆ ತೋರಿದ್ದ ವರುಣ ದೇವ, 2023ರಲ್ಲಿ ಮುನಿಸಿಕೊಂಡಿದ್ದ. ಇದಕ್ಕೆಲ್ಲ 'ಎಲ್ ನಿನೋ' ಎಂಬ ಪ್ರಾಕೃತಿಕ ವಿದ್ಯಮಾನ ಕಾರಣ ಅಂತಾ, ಭೂ ವಿಜ್ಞಾನಿಗಳು ಹೇಳಿದ್ರು. ಹೀಗಾಗಿ ಕಾವೇರಿ ನದಿ ಬೇಸಿಗೆ ಆರಂಭದಲ್ಲೇ ಬತ್ತಿ ಹೋಗುತ್ತಿದೆ. ಹೀಗಿದ್ದರೂ ತಮಿಳುನಾಡಲ್ಲಿ, ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಡ್ಯಾಂ ಮಾತ್ರ ತುಂಬಿ ತುಳುಕುತ್ತಿದೆ! ಕಾರಣ ಏನು ಗೊತ್ತಾ? ಮುಂದೆ ಓದಿ.

ತುಂಬಿ ತುಳುಕುತ್ತಿದೆ ಡ್ಯಾಂ!
ತಮಿಳುನಾಡಿನ ಬಹುದೊಡ್ಡ & ಅತಿಮುಖ್ಯ ಜಲಾಶಯ ಎಂಬ ಕೀರ್ತಿ ಪಡೆದಿರುವ ಮೆಟ್ಟೂರು ಡ್ಯಾಂ ಸಾಕಷ್ಟು ನೀರನ್ನು ಹೊಂದಿದೆ. 30 ಅಡಿಗೆ ಕುಸಿತ ಕಾಣುತ್ತಿದ್ದ ಮೆಟ್ಟೂರು ಡ್ಯಾಂಗೆ, ವರ್ಷದ ಕೊನೆಯಲ್ಲಿ ಭಾರಿ ಪ್ರಮಾಣದ ನೀರು ಬಂದಿತ್ತು. ಹೀಗಾಗಿ ಮೆಟ್ಟೂರು ಡ್ಯಾಂ ಖಾಲಿ ಆಗುವ ಆತಂಕ ದೂರ ಆಗಿತ್ತು. ವೇಗವಾಗಿ ಮೆಟ್ಟೂರು ಡ್ಯಾಂ ತುಂಬಿದ್ದು, ಬೇಸಿಗೆಯಲ್ಲೂ ಈ ಜಲಾಶಯದಲ್ಲಿ ಈಗ ಬರೋಬ್ಬರಿ 63.36 ಅಡಿ ನೀರು ಇದೆ. ಅಂದ್ರೆ 120 ಅಡಿ ಎತ್ತರ ಇರುವ ಮೆಟ್ಟೂರು ಡ್ಯಾಂನಲ್ಲಿ 63.36 ಅಡಿ ನೀರು ಸಂಗ್ರಹವಾಗಿದೆ. ಹಾಗೇ 1,000 ಕ್ಯುಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ.
ಕರ್ನಾಟಕದ ನೀರು ತಮಿಳುನಾಡು ಪಾಲು?
ತಮಿಳುನಾಡಿನ 24 ಜಿಲ್ಲೆಗಳು ಅವಲಂಬಿಸಿರುವುದು ಮೆಟ್ಟೂರು ಡ್ಯಾಂನ ನೀರನ್ನು. ಹೀಗಾಗಿ ಕಾವೇರಿ ವಿಚಾರಕ್ಕೆ ತಮಿಳುನಾಡು ದೊಡ್ಡ ಕಿರಿಕ್ ತೆಗೆಯುತ್ತದೆ. ಆದರೆ, ಕುಡಿಯುವ ನೀರನ್ನ ಮೊದಲು ರಕ್ಷಣೆ ಮಾಡುವ ಬದಲಾಗಿ, ತಮಿಳುನಾಡು ಸರ್ಕಾರ ಕೃಷಿಗೆ ಆದ್ಯತೆ ನೀಡಿದೆ ಎಂಬ ಆರೋಪ ಕೇಳಿಬಂದಿತ್ತು. ಎಲ್ಲಾ ಕಿರಿಕಿರಿ ನಡುವೆ ಮೆಟ್ಟೂರು ಡ್ಯಾಂ ನೀರಿನ ಮಟ್ಟ ಕುಸಿದಿದ್ದು ಭಯ ಮೂಡಿಸಿತ್ತು. ಆದ್ರೆ ವರ್ಷದ ಕೊನೆಯಲ್ಲಿ ಮೆಟ್ಟೂರು ಡ್ಯಾಂ ನೀರಿನ ಮಟ್ಟ ಸುಧಾರಿಸಿ, ರೈತರು ಹಾಗೂ ಜನರಲ್ಲಿ ಹೊಸ ನಿರೀಕ್ಷೆ ಮೂಡಿಸಿತ್ತು. ಈಗ ನೋಡಿದರೆ ಬೇಸಿಗೆಯಲ್ಲಿಯು ಇದೇ ನೀರು ಅಲ್ಲಿನ ರೈತರಿಗೆ ಆಧಾರವಾಗಿದೆ.

ಕರ್ನಾಟಕದಲ್ಲೂ ಮಳೆ ಆಗುತ್ತಾ?
ಪ್ರಾಕೃತಿಕವಾಗಿ ಕರ್ನಾಟಕಕ್ಕೆ ಮುಂಗಾರು ಮಳೆಯೆ ಆಧಾರ ಯಾಕಂದ್ರೆ ಹಿಂಗಾರು ಮಳೆ ಬಿದ್ದು ಡ್ಯಾಂ ತುಂಬುವುದು ಕಷ್ಟ. ಅಕಸ್ಮಾತ್ ಸೈಕ್ಲೋನ್ ಅಥವಾ ಇನ್ಯಾವುದೋ ಪ್ರಾಕೃತಿಕ ವಿಕೋಪ ಎದುರಾಗಿ ಮಳೆ ಬಿದ್ದರೆ ಡ್ಯಾಂಗಳು ತುಂಬ ಬಹುದು ಅಷ್ಟೇ. ಹೀಗಾಗಿ ನಮ್ಮ ರೈತರು, ಚಿಂತೆ ಮಾಡುವಂತಾಗಿದೆ. ಅದರಲ್ಲೂ ಕಾವೇರಿ ಕೊಳ್ಳದ ಪರಿಸ್ಥಿತಿ ಆತಂಕ ಹುಟ್ಟಿಸುವ ರೀತಿ ಇದ್ದು, ಮುಂದಿನ ದಿನದಲ್ಲಿ ಏನು ಮಾಡುವುದು? ಎಂಬ ಚಿಂತೆಯಲ್ಲಿ ರೈತ ಸಮುದಾಯ ಮುಳುಗಿದೆ. ಕೆ.ಆರ್.ಎಸ್ ಸೇರಿ ಕಾವೇರಿ ಕೊಳ್ಳದ ಬಹುತೇಕ ಡ್ಯಾಂಗಳು ಈಗಾಗಲೇ ಒಣಗಿ ಹೋಗುತ್ತಿವೆ. ಹೀಗಾಗಿ ಇನ್ನು ಕೆಲವು ದಿನದಲ್ಲಿ ಮಳೆ ಬರದೇ ಇದ್ದರೆ ಸಮಸ್ಯೆ ಕಟ್ಟಿಟ್ಟಬುತ್ತಿ.












Click it and Unblock the Notifications