Delhi Results 2025: ಸೋಲು ಗೆಲುವಿನ ಲೆಕ್ಕಾಚಾರ, ಬಿಜೆಪಿ ತೆಕ್ಕೆಗೆ ದೆಹಲಿ ಅಧಿಕಾರ?
ದೆಹಲಿ ಚುನಾವಣಾ ಫಲಿತಾಂಶಕ್ಕೆ ಇನ್ನೇನು ಕೆಲವೇ ನಿಮಿಷಗಳು ಬಾಕಿ ಉಳಿದಿವೆ. ಹಾಗೇ ಮಧ್ಯಾಹ್ನದ ಒಳಗೆ ದೆಹಲಿ ಗದ್ದುಗೆ ಯಾರಿಗೆ? ಎಂಬ ಪ್ರಶ್ನೆಗೂ ಉತ್ತರ ಸಿಗಲಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಬಿಜೆಪಿ ಈ ಬಾರಿ ಅಧಿಕಾರ ಹಿಡಿಯುವುದು ಪಕ್ಕಾ ಅಂತ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಹಾಗಾದರೆ, ಬಿಜೆಪಿ ಗೆದ್ದರೆ ಏನೆಲ್ಲಾ ದಾಖಲೆ ನಿರ್ಮಾಣ ಆಗಲಿದೆ? ಬನ್ನಿ ತಿಳಿಯೋಣ.
2014ರ ನಂತರ ಇಡೀ ಭಾರತದಲ್ಲಿ ಬಿಜೆಪಿ ಅದ್ಭುತವಾಗಿ ಗೆದ್ದು, ಬಲಿಷ್ಠವಾಗಿ ನಿಲ್ಲುತ್ತಿದೆ. ಅದರಲ್ಲೂ ಬಹುತೇಕ ರಾಜ್ಯಗಳು ಬಿಜೆಪಿ ಪಾಲಿಗೆ ಒಲಿದು ಬಂದವು. ಕೇಂದ್ರದಲ್ಲಿ ಸತತ 3 ಬಾರಿ ಗೆದ್ದು ಹ್ಯಾಟ್ರಿಕ್ ಸಾಧನೆ ಕೂಡ ಮಾಡಿದೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ. ಈ ಸಂದರ್ಭದಲ್ಲಿ ಬಿಜೆಪಿ ನಾಯಕರಿಗೆ ಒಂದು ಕೊರಗು ಕಾಡುತ್ತಿತ್ತು. ದೆಹಲಿ ಅಧಿಕಾರ ತಮ್ಮ ಕೈಗೆ ಸಿಕ್ಕಿಲ್ಲ ಎಂಬ ಚಿಂತೆ ಅವರಲ್ಲಿ ಇತ್ತು, ಆದರೆ ಆ ಚಿಂತೆ ಇಂದಿಗೆ ಮುಗಿದು ಹೋಗುತ್ತಾ?

ಬಿಜೆಪಿಗೆ 45 ರಿಂದ 50 ಸ್ಥಾನ?
ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಹತ್ತಿರ ಹತ್ತಿರ 30 ವರ್ಷ ಕಳೆದು ಹೋಗಿದೆ. 1993 ರಲ್ಲಿ BJP ಮದನ್ ಲಾಲ್ ಖುರಾನ ಅವರ ಸಾರಥ್ಯದಲ್ಲಿ ಬರೋಬ್ಬರಿ 49 ಸ್ಥಾನಗಳನ್ನು ಗೆದ್ದು ಬೀಗಿತ್ತು. ಈ ಮೂಲಕ ಪೂರ್ಣ ಪ್ರಮಾಣದ ಸರ್ಕಾರ ರಚಿಸಿತ್ತು. 1993ರ ನಂತರ ಬಿಜೆಪಿ ಪಕ್ಷ ಮತ್ತೆ ದೆಹಲಿಯಲ್ಲಿ ದೊಡ್ಡ ಗೆಲುವು ಕಂಡಿಲ್ಲ. ಆದರೆ 2025 ರಲ್ಲಿ ಬಿಜೆಪಿ ಇತಿಹಾಸ ನಿರ್ಮಾಣಕ್ಕೆ ಸಜ್ಜಾಗಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ಹೇಳಿರುವ ರೀತಿ ನೋಡಿದರೆ, ಬಿಜೆಪಿ ಪಕ್ಷ ಬರೋಬ್ಬರಿ 45 ರಿಂದ 50 ಸ್ಥಾನ ಗೆಲ್ಲಲಿದೆಯಂತೆ! ಹೀಗಾಗಿ ಇದೀಗ ಅಧಿಕಾರ ನಡೆಸುತ್ತಿರುವ ಆಪ್ ಅಧಿಕಾರ ಕಳೆದುಕೊಳ್ಳುತ್ತಾ?
ಆಪ್ & ಕಾಂಗ್ರೆಸ್ ಪಕ್ಷಗಳಿಗೆ ಸೋಲು?
'ಪೀಪಲ್ಸ್ ಇನ್‌ಸೈಟ್' ನೀಡಿರುವ ದೆಹಲಿ ಚುನಾವಣೆಯ ಎಕ್ಸಿಟ್ ಪೋಲ್ ರಿಸಲ್ಟ್ ಪ್ರಕಾರ ಬಿಜೆಪಿ ಪಕ್ಷ ಬರೋಬ್ಬರಿ 40 ರಿಂದ 44 ಸ್ಥಾನ ಗೆಲ್ಲಲಿದೆಯಂತೆ. ಇದೀಗ ಆಡಳಿತದಲ್ಲಿ ಇರುವ ಆಮ್ ಆದ್ಮಿ ಪಾರ್ಟಿ 2ನೇ ಸ್ಥಾನಕ್ಕೆ ಕುಸಿಯಲಿದ್ದು ಕೇವಲ 25 ರಿಂದ 29 ಸ್ಥಾನ ಗೆಲ್ಲಬಹುದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಸ್ಥಿತಿ ಈ ಚುನಾವಣೆಯಲ್ಲಿ ಕೂಡ ಹೀನಾಯವಾಗಲಿದ್ದು, ಕೈ ಪಡೆ ಈ ಬಾರಿ 0 ಯಿಂದ 1 ಸ್ಥಾನ ಗೆಲ್ಲಬಹುದು ಎಂದು 'ಪೀಪಲ್ಸ್ ಇನ್‌ಸೈಟ್' ನೀಡಿರುವ ದೆಹಲಿ ಚುನಾವಣೆಯ ಎಕ್ಸಿಟ್ ಪೋಲ್ ರಿಸಲ್ಟ್ ಹೇಳುತ್ತಿದೆ. ಇದೇ ರೀತಿ ಹಲವು ಸಮೀಕ್ಷೆ ಬಿಜೆಪಿ ಗೆಲುವನ್ನೇ ಪ್ರತಿಪಾದಿಸಿವೆ.












Click it and Unblock the Notifications