Heavy Rain: ಕರ್ನಾಟಕದ ಕಾವೇರಿ ನೀರಿನ ಸಮಸ್ಯೆ ಬಗೆಹರಿಯಿತಾ?
ಮಳೆ ಕೊರತೆ & ಭೀಕರ ಬರ ಹಿನ್ನೆಲೆ ಕನ್ನಡಿಗರು ನರಳಾಡಿ ಹೋಗಿದ್ದಾರೆ. ಇದು ಬೆಳೆದ ಬೆಳೆಗೆ ಮಾತ್ರವಲ್ಲ, ಕುಡಿಯುವ ನೀರಿಗೂ ಅನ್ವಯಿಸಿದೆ. ಕಾವೇರಿ ಕೊಳ್ಳದಲ್ಲಂತೂ ಭಾರಿ ಮಳೆ ಕೊರತೆ ಎದುರಾದ ಪರಿಣಾಮ, ರಾಜಧಾನಿ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗೆ ನೀರಿನ ಸಮಸ್ಯೆ ಪಕ್ಕಾ ಎನ್ನಲಾಗಿತ್ತು. ಆದ್ರೆ ಈಗ ಸುರಿಯುತ್ತಿರುವ ಮಳೆ ಕಾವೇರಿ ನೀರಿನ ಸಮಸ್ಯೆ ಸರಿ ಮಾಡುತ್ತಾ? ಅನ್ನೋ ಕುತೂಹಲ ಮೂಡಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕರ್ನಾಟಕದಲ್ಲಿ ಮುಂಗಾರು ಮಳೆ ಕೈಕೊಟ್ಟು, ಭೀಕರ ಬರದ ಛಾಯೆ ಆವರಿಸಿದೆ. ಆದರೆ ಇದೇ ಸಮಯದಲ್ಲಿ ಹಿಂಗಾರು ಮಳೆ ಕೈಹಿಡಿದಿದೆ. ಅದರಲ್ಲೂ ಕಾವೇರಿ ನೀರಿಗಾಗಿ ನೆರೆಯ ತಮಿಳುನಾಡು ಕಿರಿಕ್ ತೆಗೆದು ಜಗಳಕ್ಕೆ ನಿಂತಿರುವ ಸಮಯದಲ್ಲೇ ಮಳೆರಾಯ ಕೃಪೆಯನ್ನು ತೋರಿಸಿದ್ದಾನೆ. ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಅದ್ರಲ್ಲೂ ಪ್ರಮುಖವಾಗಿ ಕಾವೇರಿ ನದಿ ಕೊಳ್ಳದಲ್ಲಿ ತುಸು ನೆಮ್ಮದಿ ನೀಡುವಷ್ಟು ಮಳೆ ಬೀಳುತ್ತಿದೆ. ಹಾಗಾದರೆ ಈಗ ಕಾವೇರಿ ನೀರಿನ ಸಮಸ್ಯೆ ಕೊನೆಯಾಗುತ್ತಾ?

ನೀರಿನ ಸಮಸ್ಯೆಗೆ ಸಿಗುತ್ತಾ ಮುಕ್ತಿ?
ಬೆಂಗಳೂರು ನಗರವು ಸೇರಿ ಮೈಸೂರು, ಮಂಡ್ಯ ಅವಲಂಬಿಸಿರುವುದೇ ಕಾವೇರಿ ನೀರನ್ನ. ಆದರೆ ಈ ಬಾರಿ ಭಾರಿ ಮಳೆ ಕೊರತೆ ಉಂಟಾಗಿ, ಕನಿಷ್ಠ ಕುಡಿಯುವುದಕ್ಕೂ ನೀರು ಇಲ್ಲ ಎನ್ನುವ ಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದಾಗಲೇ ಕೇರಳದಲ್ಲಿ ಕಾವೇರಿ ನದಿಗೆ ಅತಿಹೆಚ್ಚಾಗಿ ನೀರು ಹರಿದು ಬರುವ ವಯನಾಡ್ ಸೇರಿದಂತೆ ಕರ್ನಾಟಕದ ಕಾವೇರಿ ಕೊಳ್ಳದಲ್ಲಿ ಕೂಡ ಉತ್ತಮವಾಗಿ ಹಿಂಗಾರು ಮಳೆ ಬೀಳುತ್ತಿದೆ. ಹೀಗೆ, ಮೆಲ್ಲಗೆ ಜಲಾಶಯಗಳು ತುಂಬುತ್ತಿರುವ ಲಕ್ಷಣ ಕಾಣುತ್ತಿದೆ. ಅದರಲ್ಲೂ ಪದೇ ಪದೆ ದೇಶದ ಗಮನ ಸೆಳೆಯುವ ತಮಿಳುನಾಡಿನಲ್ಲಿ ಕಾವೇರಿಗೆ ಅಡ್ಡಲಾಗಿ ಕಟ್ಟಿರುವ ಮೆಟ್ಟೂರು ಡ್ಯಾಂ ವೇಗವಾಗಿ ತುಂಬಿಕೊಳ್ಳುತ್ತಿದೆ.
ಮೆಟ್ಟೂರು ಜಲಾಶಯದ ನೀರಿನ ಮಟ್ಟ?
ಅಂದಹಾಗೆ ಕಳೆದ ಕೆಲವು ತಿಂಗಳಿಂದ ಕಾವೇರಿ ನೀರಿನ ವಿಚಾರಕ್ಕೆ ದೊಡ್ಡ ಕಿರಿಕ್ ಆಗಿದೆ. ಮೆಟ್ಟೂರು ಡ್ಯಾಂ ಭಾಗಶಃ ಖಾಲಿಯಾಗಿ ಆತಂಕ ಸೃಷ್ಟಿಯಾಗಿತ್ತು. ಈಗ ವೇಗವಾಗಿ ಮೆಟ್ಟೂರು ಡ್ಯಾಂ ತುಂಬುತ್ತಿದೆ. ಮಳೆ ಅಬ್ಬರ ಹೆಚ್ಚಿದ ಕಾರಣ, ಮೆಟ್ಟೂರು ಡ್ಯಾಂಗೆ ಉತ್ತಮವಾಗಿ ನೀರು ಹರಿದು ಬರುತ್ತಿದೆ. ಈಗಿನ ಮಾಹಿತಿ ಪ್ರಕಾರ 120 ಅಡಿ ಎತ್ತರ ಇರುವ ಮೆಟ್ಟೂರು ಡ್ಯಾಂನಲ್ಲಿ 53.80 ಅಡಿ ನೀರು ಸಂಗ್ರಹವಾಗಿದೆ. ಹಾಗೇ ಸುಮಾರು 2 ಸಾವಿರ ಕ್ಯುಸೆಕ್ ಆಸುಪಾಸಿನಲ್ಲಿ ನೀರು ಹರಿದುಬರುತ್ತಿದ್ದು, ಭಾಗಶಃ ಅಷ್ಟೇ ಪ್ರಮಾಣದ ನೀರು ಹೊರಗೆ ಬಿಡಲಾಗುತ್ತಿದೆ.
ಬೆಂಗಳೂರು ಮಳೆಯಿಂದಲೂ ಲಾಭ ಆಗುತ್ತಾ?
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಮಳೆ ಬಿದ್ದರೆ ಅದು ಕೂಡ ತಮಿಳುನಾಡಿಗೆ ಹರಿಯುತ್ತೆ. ಯಾಕಂದ್ರೆ ಬೆಂಗಳೂರು ನಗರವು ತಮಿಳುನಾಡಿನ ಜೊತೆಗೆ ಗಡಿ ಹಂಚಿಕೊಂಡಿದೆ. ಹೀಗೆ, ಬೆಂಗಳೂರಲ್ಲಿ ಉತ್ತಮವಾಗಿ ಮಳೆ ಬೀಳುತ್ತಿರುವ ಕಾರಣ ತಮಿಳುನಾಡಿಗೆ ಇಲ್ಲಿ ಬಿದ್ದಿರುವ ಮಳೆ ನೀರು ಕೂಡ ಹರಿದಿದೆ. ಆದರೆ ಈ ನೀರು ಕಾವೇರಿ ನದಿಗೆ ಸೇರುವುದಿಲ್ಲ ಎಂಬುದು ಬೇಸರದ ಸಂಗತಿ.

ಬದಲಾಗಿ ಬೆಂಗಳೂರಿನಲ್ಲಿ ಮಳೆ ಬಿದ್ದರೆ ಅದು, ದಕ್ಷಿಣ ಪಿನಾಕಿನಿ ನದಿ ಮೂಲಕ ಹರಿದು ಹೋಗುತ್ತದೆ. ಈ ಕಾರಣಕ್ಕೆ ಬೆಂಗಳೂರು ಮಳೆ ಕಾವೇರಿ ಸಮಸ್ಯೆಗೆ ಮುಕ್ತಿ ನೀಡುವುದಿಲ್ಲ. ಬದಲಾಗಿ ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗಬೇಕು. ಅದರಲ್ಲೂ ಕೇರಳ ರಾಜ್ಯದಲ್ಲಿ ಇರುವ ವಯನಾಡ್ ಭಾಗದಲ್ಲಿ ಮಳೆ ಬೀಳಬೇಕು. ಈಗಲೂ ಅದೇ ಆಗುತ್ತಿದ್ದು, ಕಾವೇರಿ ಕೊಳ್ಳಕ್ಕೆ ಜೀವಕಳೆ ಬರುತ್ತಿದೆ. ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ವಯನಾಡ್‌ನ ಭಾಗದಲ್ಲಿ ಭಾರಿ ಮಳೆ ಬೀಳುವ ನಿರೀಕ್ಷೆ ಇದೆ. ಹೀಗಾದರೆ ಕರ್ನಾಟಕದ ಕೆಆರ್‌ಎಸ್ ಸೇರಿ ಕಾವೇರಿ ಕೊಳ್ಳದ ಜಲಾಶಯಗಳು ತುಂಬಿಕೊಳ್ಳುವ ನಿರೀಕ್ಷೆ ಇದೆ.












Click it and Unblock the Notifications