Lok Sabha Election: ಭಾರತದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 543ರಿಂದ 753ಕ್ಕೆ ಏರಿಕೆ?
ಕೇಂದ್ರ ಸರ್ಕಾರವು ಡಿಲಿಮಿಟೇಶನ್ ಅಂದರೆ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆಗೆ ತಯಾರಿ ಆರಂಭಿಸಿರುವ ಸುದ್ದಿ ಸಂಚಲನ ಸೃಷ್ಟಿಸಿದೆ. ಅದ್ರಲ್ಲೂ ದಕ್ಷಿಣ ಭಾರತಕ್ಕೆ ಇದು ದೊಡ್ಡ ಆಘಾತ ಎಂಬ ಆರೋಪ ಕೇಳಿಬರುತ್ತಿದೆ. ಏಕೆಂದರೆ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ ಕರ್ನಾಟಕ, ತಮಿಳುನಾಡು, ಕೇರಳ ಸೇರಿದಂತೆ ಆಂಧ್ರ & ತೆಲಂಗಾಣ ಸಂಕಷ್ಟಕ್ಕೆ ಸಿಲುಕಲಿವೆ.
ಈಗಿನ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ ಈಗ ಇರುವ ಜನಸಂಖ್ಯೆ ಆಧಾರದಲ್ಲಿ ಕೇಂದ್ರ ಸರ್ಕಾರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ 753 ಸ್ಥಾನಗಳು ಅತ್ಯಗತ್ಯ. ಅಂದರೆ ಭಾರತದಲ್ಲಿ ಈಗ ಇರುವ 543 ಲೋಕಸಭಾ ಕ್ಷೇತ್ರಗಳನ್ನು 753ಕ್ಕೆ ಏರಿಸಬೇಕಿದೆ. ಹಾಗಾದರೆ 753ಕ್ಕೆ ಲೋಕಸಭಾ ಕ್ಷೇತ್ರಗಳು ಏರಿಕೆ ಕಂಡರೆ ಕರ್ನಾಟಕಕ್ಕೆ ಎಷ್ಟು ಸ್ಥಾನಗಳು ಸಿಗಲಿದೆ? ತಮಿಳುನಾಡಿಗೆ ಎಷ್ಟು? ಕೇರಳಕ್ಕೆ ಎಷ್ಟು ಲೋಕಸಭಾ ಸ್ಥಾನ ಸಿಗಬಹುದು? ಈ ಸ್ಥಾನ ಹಂಚಿಕೆ ನಂತರ ಆಂಧ್ರಪ್ರದೇಶ ಮತ್ತು ತೆಲಂಗಾಣ ಸ್ಥಿತಿ ಏನಾಗಬಹುದು?

ಕನ್ನಡಿಗರಿಗೂ ಅನ್ಯಾಯ ಗ್ಯಾರಂಟಿ!
ಭಾರತ ಸ್ವಾತಂತ್ರ್ಯ ಪಡೆದ ತಕ್ಷಣ ಭಾರತದ ಒಕ್ಕೂಟಕ್ಕೆ ಸೇರಲು ಮುಂದಾದ ಮೊದಲನೇ ಸಂಸ್ಥಾನ ಮೈಸೂರು ಅಂದರೆ ಈಗಿನ ಕರ್ನಾಟಕ. ಆದರೆ ಕನ್ನಡಿಗರಿಗೆ ಪ್ರತಿಬಾರಿ ಕೇಂದ್ರ ಅನ್ಯಾಯ ಮಾಡುತ್ತಿದೆ ಎಂಬ ಆರೋಪವೂ ಇದೆ. ಏಕೆಂದರೆ ಕನ್ನಡಿಗರ ಬಳಿ ಇರುವುದು ಕೇವಲ 28 ಲೋಕಸಭಾ ಕ್ಷೇತ್ರಗಳು. ಆದ್ರೆ ಇದೀಗ ಕೇಂದ್ರ ಲೋಕಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಿದರೆ, 2026ರಲ್ಲಿ 28ರಿಂದ 36ಕ್ಕೆ ಏರಿಕೆಯಾಗಲಿದೆ. ಅರೆ ಇದು ಕನ್ನಡ ನಾಡಿಗೆ ಲಾಭ ಅಲ್ವಾ? ಅನ್ನಬೇಡಿ, ಯಾಕಂದ್ರೆ ಸಂಪೂರ್ಣ ಮಾಹಿತಿ ತಿಳಿಯಿರಿ.
ಲೋಕಸಭೆಯಲ್ಲಿ ಕನ್ನಡಿಗರ ಸಮಸ್ಯೆ ಏನು?
ಅಂದಹಾಗೆ ಭಾರತದಲ್ಲಿ ಈಗ ಇರುವ 543 ಲೋಕಸಭಾ ಕ್ಷೇತ್ರಗಳನ್ನು 753ಕ್ಕೆ ಏರಿಸಿದರೆ ಇದು ಕರ್ನಾಟಕಕ್ಕೆ ದೊಡ್ಡ ಅನ್ಯಾಯ. ಏಕೆಂದರೆ ಕನ್ನಡಿಗರು ಜನಸಂಖ್ಯೆ ವಿಚಾರದಲ್ಲಿ ಶಿಸ್ತು ಪಾಲಿಸಿಕೊಂಡು ಬಂದಿದ್ದಾರೆ. ಹೀಗಿದ್ದಾಗ ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ಏರಿಕೆ ವಿಚಾರದಲ್ಲಿ ಮುಂದೆ ಇವೆ. 2026ರ ಡಿಲಿಮಿಟೇಶನ್ ಬಳಿಕ ಕರ್ನಾಟಕ ರಾಜ್ಯದ ಲೋಕಸಭೆ ಬಲ 28 ಸ್ಥಾನಗಳಿಂದ 36ಕ್ಕೆ ಏರಿಕೆ ಕಂಡರೆ, ಅದೇ ಉತ್ತರ ಪ್ರದೇಶದಲ್ಲಿ 80 ಸ್ಥಾನದಿಂದ ಬರೋಬ್ಬರಿ 128 ಸ್ಥಾನಕ್ಕೆ ಏರಿಕೆ ಕಾಣಲಿದೆ. ಹಾಗಾದರೆ ಈಗ ನೀವೆ ಇದರ ಎಫೆಕ್ಟ್ ಬಗ್ಗೆ ಲೆಕ್ಕ ಹಾಕಿ. ಹೀಗೆ ದಕ್ಷಿಣ ಭಾರತದ ಬೇರೆ ಯಾವೆಲ್ಲಾ ರಾಜ್ಯಕ್ಕೆ ಇದೇ ರೀತಿ ಅನ್ಯಾಯ ಆಗಬಹುದು? ಮುಂದೆ ಓದಿ.
ಮಧ್ಯಪ್ರದೇಶ ರಾಜ್ಯಕ್ಕೆ ಜಾಕ್‌ಪಾಟ್
ಕರ್ನಾಟಕದ ರೀತಿಯಲ್ಲೇ ದಕ್ಷಿಣ ಭಾರತದ ತೆಲಂಗಾಣಕ್ಕೂ ಪುಡಿಗಾಸು ಸಿಗಲಿದೆ. ಹೀಗಾಗಿ ತೆಲಂಗಾಣದಲ್ಲಿ ಈಗ ಇರುವ ಲೋಕಸಭೆ ಕ್ಷೇತ್ರಗಳ ಪೈಕಿ 17ರಿಂದ 20ಕ್ಕೆ ಏರಿಕೆಯಾಗುತ್ತೆ. ಹಾಗೇ ಆಂಧ್ರ ಪ್ರದೇಶದ 25 ಸ್ಥಾನಗಳು 28ಕ್ಕೆ ಏರಿಕೆ ಕಾಣಲಿವೆ. ಇನ್ನು ತಮಿಳುನಾಡಿನ ಈಗಿನ 39 ಲೋಕಸಭೆ ಸ್ಥಾನಗಳು ಕೇವಲ 41ಕ್ಕೆ ಏರಿಕೆ ಕಾಣಬಹುದು. ಅದ್ರಲ್ಲೂ ನೆರೆಯ ರಾಜ್ಯ ಕೇರಳ ಪರಿಸ್ಥಿತಿ ಇನ್ನೂ ಭೀಕರವಾಗಲಿದ್ದು, ಇಡೀ ದೇಶದಲ್ಲಿ ಜನಸಂಖ್ಯೆ ಕಡಿಮೆ ಮಾಡಿದ ಕೀರ್ತಿ ಪಡೆದಿರುವ ಕೇರಳ ರಾಜ್ಯದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆ 20ರಿಂದ 19ಕ್ಕೆ ಕುಸಿದು ಬೀಳಲಿದೆ.

ಹಾಗೇ ಇದೀಗ ಕೇವಲ 29 ಸ್ಥಾನ ಹೊಂದಿರುವ ಮಧ್ಯಪ್ರದೇಶಕ್ಕೆ ಜಾಕ್‌ಪಾಟ್ ಸಿಗಲಿದ್ದು, 47 ಸ್ಥಾನಕ್ಕೆ ಮಧ್ಯಪ್ರದೇಶದ ಲೋಕಸಭಾ ಬಲ ಏರಿಕೆ ಕಾಣಲಿದೆ. ಇನ್ನು ಮಹಾರಾಷ್ಟ್ರದ ಲೋಕಸಭಾ ಸ್ಥಾನಗಳು 48ರಿಂದ 68ಕ್ಕೆ ಏರಿಕೆ ಕಾಣಬಹುದು. ರಾಜಸ್ಥಾನದಲ್ಲಿ ಒಟ್ಟಾರೆ 25 ಲೋಕಸಭಾ ಸ್ಥಾನಗಳು ಈಗ ಇದ್ದು ಈ ಸಂಖ್ಯೆ 44ಕ್ಕೆ ಏರಿಕೆ ಕಾಣುವ ಸಾಧ್ಯತೆ ಇದೆ. ಹಾಗಾದರೆ ಇದು ದಕ್ಷಿಣ ಭಾರತದ ರಾಜ್ಯಗಳಿಗೆ ದೊಡ್ಡ ಕಂಟಕ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೇಂದ್ರ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳುತ್ತೆ? ಅಂತಾ ಕಾದು ನೋಡಬೇಕು.












Click it and Unblock the Notifications