Caste Census: ಜಾತಿ ಗಣತಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚಿಂತಿಸುತ್ತಿದೆಯಾ?
ಬಿಹಾರದ ಸರ್ಕಾರ ಜಾತಿ ಗಣತಿ ಬಿಡುಗಡೆ ಮಾಡಿದ್ದು ಸಂಚಲನ ಸೃಷ್ಟಿಸಿದೆ. ದೇಶಾದ್ಯಂತ ಈ ಬಗ್ಗೆ ಚರ್ಚೆ ಜೋರಾಗಿದ್ದು ಕರ್ನಾಟಕ ಸರ್ಕಾರ ಕೂಡ ಜಾತಿ ಗಣತಿ ಸ್ವೀಕಾರಕ್ಕೆ ಸಿದ್ಧತೆಯ ನಡೆಸಿದೆ. ಆದರೆ ಇದೇ ಸಮಯದಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವೂ 'ಮಾಸ್ಟರ್ ಸ್ಟ್ರೋಕ್' ಕೊಡಲು ಸಜ್ಜಾಗಿದೆ. ಹಾಗಾದರೆ ಏನದು ರಣತಂತ್ರ? ದೇಶಾದ್ಯಂತ ಕೇಂದ್ರ ಸರ್ಕಾರವೇ ಜಾತಿ ಗಣತಿ ನಡೆಸುತ್ತಾ?
ಹೌದು, ಇಂತಹ ಅನುಮಾನ ಮೂಡಲು ಬಲವಾದ ಕಾರಣ ಕೂಡ ಇದೆ. ಯಾಕಂದ್ರೆ ಈ ಅನುಮಾನಕ್ಕೆ ಬಿಜೆಪಿ ವರಿಷ್ಠರು ನಡೆಸಿದ ಮಹತ್ವದ ಮೀಟಿಂಗ್ ಪ್ರಮುಖ ಕಾರಣವಾಗಿದೆ. ಅಷ್ಟಕ್ಕೂ ಪ್ರತಿಪಕ್ಷಗಳ ನಾಯಕರು, 'ಜಾತಿ ಗಣತಿ' ನಡೆಸುವಂತೆ ಕೇಂದ್ರದ ಮೇಲೆ ಒತ್ತಡ ಹೆಚ್ಚಿಸುತ್ತಿರುವ ಬೆನ್ನಲ್ಲೇ ಮೊನ್ನೆ ಮೊನ್ನೆ ಮಹತ್ವದ ಬೆಳವಣಿಗೆ ನಡೆದಿದೆ. ಮೊನ್ನೆಯಷ್ಟೆ ಬಿಜೆಪಿ ಕೇಂದ್ರ ನಾಯಕರು, ಅಂದರೆ ಗೃಹ ಸಚಿವರಾದ ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಈ ಸಭೆಯಲ್ಲೇ, 'ಜಾತಿ ಗಣತಿ' ಬಗ್ಗೆ ಕೂಡ ಮಹತ್ವದ ಮಾತುಕತೆ ಮುನ್ನೆಲೆಗೆ ಬಂದಿದೆಯಂತೆ.

ಜಾತಿ ಗಣತಿ ನಡೆಸುತ್ತಾ ಮೋದಿ ಸರ್ಕಾರ?
ದೇಶದಲ್ಲಿ ಸಾಮಾನ್ಯ ವರ್ಗಗಳ ಬಲದಿಂದ ಅಧಿಕಾರ ಹಿಡಿಯಲು ಆಗಲ್ಲ. ಈ ವಿಚಾರವೂ ಲೋಕಸಭೆ ಚುನಾವಣೆ ಮೇಲೆ ಭಾರಿ ಪ್ರಭಾವ ಬೀರುವ ಸಾಧ್ಯತೆ ಇದೆ. ಅದರಲ್ಲೂ ಇದೇ ವಿಚಾರವನ್ನು ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ (I.N.D.I.A) ತನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಹೀಗಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೂಡ ಈ ವಿಚಾರವಾಗಿ ಅರ್ಲಟ್ ಆಗಿರುವಂತೆ ಕಾಣುತ್ತಿದೆ. ಹೀಗಾಗಿಯೇ ದೇಶದಲ್ಲಿ ಜಾತಿ ಗಣತಿ ನಡೆಸುವ ಕುರಿತು ಮತ್ತು ಅದರಿಂದ ಪಕ್ಷಕ್ಕೆ ಆಗುವ ಲಾಭ & ನಷ್ಟದ ಬಗ್ಗೆ ಬಿಜೆಪಿ ಕೇಂದ್ರ ನಾಯಕರ ಮಧ್ಯೆ ಮಹತ್ವದ ಮಾತುಕತೆ ನಡೆದಿದೆ ಎನ್ನಲಾಗಿದೆ.
ರಾಜ್ಯದ ನಾಯಕರ ಜೊತೆಗೂ ಚರ್ಚೆ
2024ರ ಲೋಕಸಭಾ ಚುನಾವಣೆ ಬಿಜೆಪಿಗೆ ಸುಲಭದ ತುತ್ತು ಅಲ್ಲ. ಅದರಲ್ಲೂ ಈಗಾಗಲೇ ಸತತ ಎರಡು ಬಾರಿ ಗೆದ್ದು ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ ನೇತೃತ್ವದ ಎನ್‌ಡಿಎಗೆ ಈಗ ದೊಡ್ಡ ಸವಾಲು ಇದೆ. ಒಂದು ಕಡೆ ಸರ್ಕಾರ ಉಳಿಸಿಕೊಳ್ಳಬೇಕು, ಹಾಗೇ ಮತದಾರ ಪ್ರಭುವಿನ ಮನವೊಲಿಕೆಗೆ ಮುಂದಾಗಬೇಕು. ಹೀಗಾಗಿ ವಿರೋಧ ಪಕ್ಷಗಳ ಅಸ್ತ್ರಕ್ಕೆ ಪ್ರತ್ಯಸ್ತ್ರ ಎನ್ನುವಂತೆ ಜಾತಿ ಗಣತಿ ವಿಚಾರ ಬಗ್ಗೆ ಬಿಜೆಪಿ ವರಿಷ್ಠರು ಚರ್ಚೆ ಆರಂಭಿಸಿದ್ದಾರೆ ಅಂತಾ ಹೇಳಲಾಗುತ್ತಿದೆ. ಅದರ ಭಾಗವಾಗಿ ಇದೀಗ ಗೃಹ ಸಚಿವರಾದ ಅಮಿತ್ ಶಾ, ಜೆ.ಪಿ.ನಡ್ಡಾ ಸೇರಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಹಲವು ರಾಜ್ಯಗಳ ಬಿಜೆಪಿ ಹಿರಿಯ ಮುಖಂಡರ ಜತೆ ಮಾತುಕತೆ ನಡೆದಿದೆಯಂತೆ.

ಯಾರೆಲ್ಲಾ ಬಂದಿದ್ದರು ಗೊತ್ತಾ?
ಬಿಜೆಪಿ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸಿಎಂಗಳು, ಡಿಸಿಎಂಗಳು, ರಾಜ್ಯ ಘಟಕಗಳ ಅಧ್ಯಕ್ಷರು & ವಿವಿಧ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು ಭಾಗವಹಿಸಿದ್ರು. ಅಲ್ಲದೆ ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ & ಮಹಾರಾಷ್ಟ್ರ ಡಿಸಿಎಂ ಆಗಿರುವ ದೇವೇಂದ್ರ ಫಡ್ನವಿಸ್ ಈ ಸಭೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಹಾಗಾದರೆ, ಬಿಜೆಪಿಗೆ ಈಗ ಜಾತಿ ಗಣತಿ ಏಕೆ ಮುಖ್ಯ?
ಉತ್ತರ ಪ್ರದೇಶದಲ್ಲಿ ಸಂಚಲನ ಸೃಷ್ಟಿ!
ಹೌದು, ಬಿಜೆಪಿಗೆ ಜಾತಿ ಗಣತಿ ಏಕೆ ಮುಖ್ಯ? ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ. ಯಾಕಂದ್ರೆ ಮೊದಲಿನಿಂದಲೂ ಬಿಜೆಪಿ ಜಾತಿ ಗಣತಿ ವಿರೋಧಿಸುತ್ತಿದೆ. ಆದರೆ ಈ ಬಾರಿಯ ಲೋಕಸಭೆ ಚುನಾವಣೆಗಾಗಿ ಬಿಜೆಪಿ ಜಾತಿ ಗಣತಿ ಪರ ಹೆಜ್ಜೆ ಇಡುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾದ್ರೆ ಬಿಜೆಪಿಯ ನಾಯಕರು ದಿಢೀರ್ ಈ ರೀತಿಯ ಚಿಂತನೆ ನಡೆಸುತ್ತಿರುವುದು ಏಕೆ? ಈ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಜಾತಿ ಗಣತಿ ವಿರುದ್ಧ ನಿಂತರೆ...
ಇಲ್ಲಿ ಒಂದು ಉದಾಹರಣೆ ಕೊಟ್ಟು ಹೇಳುವುದಾದ್ರೆ ಉತ್ತರ ಪ್ರದೇಶದಲ್ಲಿ ಒಟ್ಟು 80 ಸ್ಥಾನ ಅಂದರೆ ಲೋಕಸಭಾ ಸ್ಥಾನಗಳು ಇವೆ. ಹೀಗೆ 80 ಲೋಕಸಭಾ ಸ್ಥಾನಗಳ ಪೈಕಿ, ಬಿಜೆಪಿಗೆ ಈ ರಾಜ್ಯದಲ್ಲಿ 62 ಸ್ಥಾನ ಬಂದಿವೆ. ಹೀಗೆ 2019 ರಲ್ಲಿ ಬಿಜೆಪಿ ಉತ್ತರ ಪ್ರದೇಶ ಒಂದರಲ್ಲೇ 62 ಸ್ಥಾನ ಗೆದ್ದಿದೆ. ಆದ್ರೆ ಈ ಗೆಲುವಿನಲ್ಲಿ ಹಿಂದುಳಿದ ವರ್ಗಗಳ ಮತ ಬಹುಮುಖ್ಯ ಪಾತ್ರ ವಹಿಸಿತ್ತು. ಹೀಗಿದ್ದಾಗ ಜಾತಿ ಗಣತಿ ವಿರುದ್ಧ ನಿಂತರೆ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಕೆಲವೇ ದಿನದಲ್ಲಿ ಸಿಗುತ್ತಾ ಉತ್ತರ?
ಈ ಎಲ್ಲಾ ವಿಚಾರವನ್ನೂ ಇದೀಗ ಅಳೆದು ತೂಗಿ ಲೆಕ್ಕ ಹಾಕುತ್ತಿದೆ ಬಿಜೆಪಿ ವರಿಷ್ಠರ ಪಡೆ. ಆದರೆ ಯಾವ ನಿರ್ಧಾರವೂ ಇನ್ನೂ ಅಧಿಕೃತವಾಗಿಲ್ಲ, ಹೀಗಾಗಿ ಬಿಜೆಪಿ ನಿರ್ಧಾರದ ಬಗ್ಗೆ ಭಾರಿ ಕುತೂಹಲ ಕೆರಳಿದೆ. ಅಕಸ್ಮಾತ್ ಜಾತಿ ಗಣತಿಗೆ ಎನ್‌ಡಿಎ ನಾಯಕರು ಒಪ್ಪಿಗೆಯನ್ನ ಸೂಚಿಸಿದರೆ ಅದರಿಂದ ಆಗುವ ಲಾಭ & ನಷ್ಟದ ಬಗ್ಗೆ ಚರ್ಚೆ ಸಾಗಿದೆ. ಇಷ್ಟೆಲ್ಲಾ ಪ್ರಶ್ನೆ & ಗೊಂದಲಗಳಿಗೆ ಶೀಘ್ರದಲ್ಲೇ ಉತ್ತರ ಸಿಗುವ ನಿರೀಕ್ಷೆ ಇದೆ. ಮತ್ತೊಂದ್ಕಡೆ ವಿರೋಧ ಪಕ್ಷದ ನಾಯಕರು ಕೂಡ ಕೇಂದ್ರದ ನಡೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎನ್ನಲಾಗಿದೆ.

ಬಿಹಾರದ ಜಾತಿಗಣತಿ ವರದಿ ಹೇಳಿದ್ದೇನು?
ಅಷ್ಟಕ್ಕೂ ಬಿಹಾರದಲ್ಲಿ ಬಿಡುಗಡೆ ಆಗಿದ್ದ ಜಾತಿ ಗಣತಿ ಪ್ರಕಾರ, ಬಿಹಾರದ ಒಟ್ಟು ಜನಸಂಖ್ಯೆ ಪೈಕಿ ಶೇ. 36 ರಷ್ಟು ಅತ್ಯಂತ ಹಿಂದುಳಿದ ಸಮುದಾಯದ ಜನರಿದ್ದಾರೆ ಎನ್ನಲಾಗಿದೆ. ಇನ್ನು ಶೇ. 27ರಷ್ಟು ಹಿಂದುಳಿದ ವರ್ಗದ ಸಮುದಾಯ ಇದೆ. ಶೇ. 19.7 ರಷ್ಟು ಜನರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದು, ಶೇಕಡಾ 1.7ರಷ್ಟು ಮಂದಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು ಇದ್ದಾರೆ. ಬಿಹಾರದ ಒಟ್ಟು ಜನಸಂಖ್ಯೆ 13.1 ಕೋಟಿಯಾಗಿದ್ದು, ಶೇಕಡಾ 15.5 ರಷ್ಟು ಜನ ಸಾಮಾನ್ಯ ವರ್ಗಕ್ಕೆ ಸೇರಿದವರಿದ್ದಾರೆ. ಹೀಗಾಗಿಯೇ ಈಗ ರಾಷ್ಟ್ರ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ.
ಕರ್ನಾಟಕದಲ್ಲೂ ಜಾತಿ ಗಣತಿ ವರದಿ ರಿಲೀಸ್?
ಬಿಹಾರದ ಕಥೆ ಬಿಡಿ, ಈಗಿನ ಲೆಕ್ಕಾಚಾರದಂತೆ ಕರ್ನಾಟಕ ಸರ್ಕಾರ ಕೂಡ ಲೋಕಸಭೆಯ ಮೊದಲು ಜಾತಿ ಗಣತಿ ರಿಲೀಸ್‌ಗೆ ಸಿದ್ಧತೆ ನಡೆಸಿರುವ ಮಾತುಗಳು ಕೇಳಿಬಂದಿವೆ. ಮುಂದೆ, ಇದು ಕರ್ನಾಟಕದಲ್ಲಿ ಸಂಚಲನ ಸೃಷ್ಟಿಸುವ ಸೂಚನೆ ನೀಡುತ್ತಿರುವ ಕಾರಣಕ್ಕೆ ಈಗಾಗಲೇ ಪರ ಮತ್ತು ವಿರೋಧದ ಚರ್ಚೆಯೂ ಜೋರಾಗಿದೆ. ಈ ಸಮಯದಲ್ಲಿ ಕೇಂದ್ರ ಸರ್ಕಾರವೂ ಮಹತ್ವದ ಸಭೆ ನಡೆಸಿರುವುದು ವಿಶೇಷ. ಆದರೆ ಈ ಬಗ್ಗೆ ಇನ್ನೂ ಬಿಜೆಪಿ ಆಗಲಿ ಅಥವಾ ಎನ್‌ಡಿಎ ಪಕ್ಷಗಳ ನಾಯಕರೇ ಆಗಲಿ ಅಧಿಕೃತವಾಗಿ ಮಾತನಾಡಿಲ್ಲ.












Click it and Unblock the Notifications