'ಗೋ ಮೂತ್ರ ಎರಚಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯೇ?': ಬಿಜೆಪಿ-ಆರ್‌ಎಸ್‌ಎಸ್‌ಗೆ ಉದ್ಧವ್ ಠಾಕ್ರೆ ಪ್ರಶ್ನೆ
ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಕಿಡಿ ಕಾರಿದ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಗೋಮೂತ್ರದ ಬಗ್ಗೆ ಅವಮಾನಕರವಾಗಿ ವ್ಯಂಗ್ಯವಾಡಿದ್ದಾರೆ.
ರತ್ನಗಿರಿ ಮಾರ್ಚ್ 7: ಶಿವಸೇನೆ ಹಾಗೂ ಚಿಹ್ನೆ ಕಳೆದುಕೊಂಡ ಬಳಿಕ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರು ಆಡಳಿತರೂಢ ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದ್ದು ಗೋಮೂತ್ರದ ಬಗ್ಗೆ ಅವಮಾನಕರವಾಗಿ ವ್ಯಂಗ್ಯವಾಡಿದ್ದಾರೆ.
ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಸೈದ್ಧಾಂತಿಕ ಮೂಲ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟಗಾರರ ಪ್ರತಿಮೆಗಳು ಸ್ವಾಧೀನಪಡಿಸಿಕೊಳ್ಳುವ ವಿಚಾರಕ್ಕೆ ಗುರಿಯಾಗಿಸಿದ್ದಾರೆ.

"ನಮ್ಮ ದೇಶಕ್ಕೆ ಗೋಮೂತ್ರ ಸಿಂಪಡಿಸಿ ಸ್ವಾತಂತ್ರ್ಯ ಸಿಕ್ಕಿತೇ? ಗೋಮೂತ್ರ ಎರಚಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ನಂತರ ನಮಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಠಾಕ್ರೆ ರತ್ನಗಿರಿಯಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಹೇಳಿದರು.
ಉದ್ಧವ್ ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. 2020 ರಲ್ಲಿ ಅವರು ಇಂತಹ ಹೇಳಿಕೆ ನೀಡಿದ್ದರು. "ಬಿಜೆಪಿ ಅವರು ನಮ್ಮ ಮೇಲೆ ಹಸುವಿನ ಸಗಣಿ ಹೊಡೆಯಲು ಪ್ರಯತ್ನಿಸುತ್ತಿದ್ದಾರೆ. ಅದು ಅಂಟಿಕೊಳ್ಳುತ್ತದೆ ಎಂಬ ಹತಾಶ ಭರವಸೆಯಿಂದ ಅವರು ಅದನ್ನು ಎಸೆಯುತ್ತಿದ್ದಾರೆ. ಆದರೆ ನಾವು ಸ್ವಚ್ಛವಾಗಿರುವುದರಿಂದ ಅದು ಅವರಂದುಕೊಂಡಂತೆ ಆಗುವುದಿಲ್ಲ. ಅವರ ಬಾಯಿ ಮತ್ತು ಬಟ್ಟೆಗಳು ಗೋಮೂತ್ರ ಮತ್ತು ಸೆಗಣಿಯಿಂದಾಗಿ ಕೆರಳುತ್ತಿವೆ'' ಎಂದಿದ್ದರು.

ಇದೀಗ ರತ್ನಗಿರಿಯಲ್ಲಿ ಉದ್ಧವ್ ಅವರು, "ಆರ್‌ಎಸ್‌ಎಸ್ ಸರ್ದಾರ್ ಪಟೇಲ್ ಹೆಸರನ್ನು ನಿಷೇಧಿಸಿದರು. ಅವರು (ಬಿಜೆಪಿ-ಆರ್‌ಎಸ್‌ಎಸ್) ಸರ್ದಾರ್ ಪಟೇಲ್ ಹೆಸರನ್ನು ಕದ್ದಿದ್ದಾರೆ. ಅದೇ ರೀತಿ ಸುಭಾಷ್ ಚಂದ್ರ ಬೋಸ್ ರನ್ನು ಕದ್ದು ಬಾಳಾ ಸಾಹೇಬ್ ಠಾಕ್ರೆಯವರ ಹೆಸರು ಬಳಸಿದರು. ಬಾಳಾ ಸಾಹೇಬ್ ಠಾಕ್ರೆ ಅವರ ಫೋಟೋ ಇಲ್ಲದೆ ಶಿವಸೇನೆ ಹೆಸರಿನಲ್ಲಿ ಮತ ಕೇಳದೆ ಮೋದಿ ಹೆಸರಿನಲ್ಲಿ ಮತ ಕೇಳುವಂತೆ ನಾನು ಅವರಿಗೆ ಸವಾಲು ಹಾಕುತ್ತೇನೆ'' ಎಂದಿದ್ದಾರೆ.
ಪಕ್ಷ ಚಿಹ್ನೆ ಉಳಿಸಿಕೊಳ್ಳವಲ್ಲಿ ಉದ್ಧವ್ ಠಾಕ್ರೆಗೆ ಹಿನ್ನಡೆ
ಶಿವಸೇನೆ ವರ್ಸಸ್ ಶಿವಸೇನೆ ನಡುವಿನ ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ಗೆಲುವು ಸಿಕ್ಕಿದ್ದು, ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ತೀವ್ರ ಮುಖಭಂಗವಾಗಿದೆ. ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ ಬಿಲ್ಲು ಬಾಣವನ್ನು ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿತು. ತಮ್ಮ ಬಣವನ್ನೇ ನಿಜವಾದ ಶಿವಸೇನಾ ಎಂದು ಪರಿಗಣಿಸಿ ಪಕ್ಷದ ಚುನಾವಣಾ ಚಿಹ್ನೆಯನ್ನು ನೀಡುವಂತೆ ಏಕನಾಥ್ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಬಣ ಚುನಾವನಾ ಆಯೋಗದ ಮೊರೆ ಹೋಗಿದ್ದವು. ಆಯೋಗ ಅಂತಿಮವಾಗಿ ಬಿಲ್ಲು ಬಾಣ ಚಿಹ್ನೆಯನ್ನು ಶಿಂಧೆ ಬಣಕ್ಕೆ ನೀಡಿತ್ತು.
ಚುನಾವಣಾ ಆಯೋಗದ ನಿರ್ಧಾರದ ನಂತರ, ಉದ್ಧವ್ ಠಾಕ್ರೆ, 'ಶಿವಸೈನಿಕರಿಗೆ ತಮ್ಮ ಗುರುತು ಏನು ಎಂದು ತಿಳಿದಿದೆ ಮತ್ತು ಅವರು ಅದಕ್ಕೆ ಬದ್ಧರಾಗಿರುತ್ತಾರೆ. ಏಕನಾಥ್ ಶಿಂಧೆಯವರ ಪಾಳೆಯದಲ್ಲಿರುವವರು ನಿಜವಾದ ಶಿವಸೈನಿಕರಲ್ಲ. ಚುನಾವಣಾ ಆಯೋಗ ನೀಡಿರುವ ನಿರ್ಧಾರ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಏಕನಾಥ್ ಶಿಂಧೆ ಅವರ ಗುಂಪು ನಮ್ಮ ಚುನಾವಣಾ ಚಿಹ್ನೆಯ ಬಿಲ್ಲು ಬಾಣವನ್ನು ಕದ್ದಿದೆ, ಆದರೆ ಮಹಾರಾಷ್ಟ್ರದ ಜನರು ಈ ಕಳ್ಳತನಕ್ಕೆ ಸೇಡು ತೀರಿಸಿಕೊಳ್ಳುತ್ತಾರೆ. ಇಂದು ನಾವು ಚುನಾವಣಾ ಆಯೋಗ ನೀಡಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇವೆ' ಎಂದರು.
ಆದರೆ ಕೋರ್ಟ್ ಕೂಡ ಚುನಾವಣಾ ಆಯೋಗದ ನಿರ್ಧಾರವನ್ನು ಸ್ವೀಕಾರ ಮಾಡಿದ್ದು ಅಲ್ಲೂ ಉದ್ಧವ್ ಠಾಕ್ರೆಗೆ ಹಿನ್ನಡೆಯಾಯಿತು.












Click it and Unblock the Notifications