'ಸರ್ಜಿಕಲ್ ಸ್ಟ್ರೈಕ್ ಗೆ ರಾಹುಲ್ ಗಾಂಧಿಯವರನ್ನೂ ಕರೆದೊಯ್ಯಬೇಕಿತ್ತೇ?'
ಪಣಜಿ, ಜುಲೈ 17: 'ಸರ್ಜಿಕಲ್ ಸ್ಟ್ರೈಕ್ ಕಾರ್ಯಾಚರಣೆ ಮಾಡುವಾಗ ಭಾರತೀಯ ಸೇನೆ ರಾಹುಲ್ ಗಾಂಧಿ ಅವರನ್ನೂ ಕರೆದೊಯ್ದಿದ್ದರೆ ಆಗ ಕಾಂಗ್ರೆಸ್ ಇದನ್ನು ನಂಬುತ್ತಿತ್ತೇನೋ' ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ವ್ಯಂಗ್ಯವಾಡಿದ್ದಾರೆ.
'ನಾನು ಎಂದಿಗೂ ಸರ್ಜಿಕಲ್ ಸ್ಟ್ರೈಕ್ ಅನ್ನು ರಾಜಕೀಯದ ದೃಷ್ಟಿಯಿಂದ ನೋಡಿಲ್ಲ. ಆದರೆ ವಿರೋಧ ಪಕ್ಷಗಳು ಹೇಳುವುದೇನು? ಅಂಥದೊಂದು ಕಾರ್ಯಾಚರಣೆಯೇ ನಡೆದಿಲ್ಲ ಎಂದು. ಹಾಗಾದರೆ ಅವರನ್ನು ನಂಬಿಸುವುದಕ್ಕಾಗಿ ನಾವು ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಕಾರ್ಯಾಚರಣೆ ಮಾಡುವಾಗ ರಾಹುಲ್ ಗಾಂಧಿಯವರನ್ನೂ ಕರೆದೊಯ್ಯಬೇಕಿತ್ತೆ?' ಎಂದು ಪರಿಕ್ಕರ್ ಪ್ರಶ್ನಿಸಿದ್ದಾರೆ.
ಅನಾರೋಗ್ಯದ ಕಾರಣ ಅಮೆರಿದಕ್ಕಿ ಚಿಕಿತ್ಸೆ ಪಡೆಯುತ್ತಿದ್ದ ಮನೋಹರ್ ಪರಿಕ್ಕರ್ ಹಿಂದಿರುಗಿ ಬಂದ ನಂತರ ಮೊದಲಬಾರಿಗೆ ಪಕ್ಷದ ಕಾರ್ಯಕರ್ತರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಮಾಜಿ ರಕ್ಷಣಾ ಸಚಿವ ಪರಿಕ್ಕರ್ ಈ ಹೇಳಿಕೆ ನೀಡಿದರು.

2016 ರ ಸೆಪ್ಟೆಂಬರ್ 29 ರಂದು ಪಾಕಿಸ್ತಾನದ ಗಡಿಯೊಳಗೆ ತೆರಳಿ ಭಾರತೀಯ ಸೇನೆಯು ಉಗ್ರ ನೆಲೆಯನ್ನು ಧ್ವಂಸಗೊಳಿಸಿತ್ತು. ಇದಕ್ಕೂ ಮುನ್ನ ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕ ಶಿಬಿರಗಳ ಮೇಳೆ ನಡೆದ ಉಗ್ರರ ದಾಳಿಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಈ ಕೃತ್ಯದ ನಂತರ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.












Click it and Unblock the Notifications