ಗಾಳಿಪಟ ಹಿಡಿಯಲು ಹೋಗಿ ಚರಂಡಿಗೆ ಬಿದ್ದ 15 ವರ್ಷದ ಬಾಲಕ: ನಾಪತ್ತೆಯಾದ ಮಗನಿಗಾಗಿ ಚರಂಡಿಗಿಳಿದ ತಂದೆ
ದೆಹಲಿಯಲ್ಲಿ ಗಾಳಿಪಟದ ಹಿಂದೆ ಓಡುತ್ತಿದ್ದ 15 ವರ್ಷದ ಬಾಲಕನೊಬ್ಬ ಆಯತಪ್ಪಿ ಚರಂಡಿಗೆ ಬಿದ್ದಿದ್ದಾನೆ. ದೆಹಲಿಯ ಜಸೋಲಾದಲ್ಲಿ ಶನಿವಾರ ಈ ಆಘಾತಕಾರಿ ಘಟನೆ ನಡೆದಿದೆ. ಮಿಥುನ್ ಎಂಬ ಹೆಸರಿನ ಈ ಬಾಲಕ ಗಾಳಿಪಟವನ್ನ ಹಿಡಿಯುವ ಭರದಲ್ಲಿ ಚರಂಡಿಯನ್ನ ಗಮನಿಸದೆ ಅದರಲ್ಲಿ ಬಿದ್ದು ಕೊಚ್ಚಿಕೊಂಡು ಹೋಗಿದ್ದಾನೆ.
ಘಟನೆ ನಡೆದು ಒಂದು ದಿನ ಕಳೆದರೂ ಆತನ ಸುಳಿವು ಸಿಗದ ಕಾರಣ, ಮಗನನ್ನ ಹುಡುಕಲು ಆತನ ತಂದೆಯೇ ಕೊಳಚೆ ತುಂಬಿದ ಚರಂಡಿಗಿಳಿದ ದೃಶ್ಯ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿದೆ.

ಬಾಲಕ ಮಿಥುನ್ ಚರಂಡಿಗೆ ಬಿದ್ದ ತಕ್ಷಣವೇ ಸ್ಥಳೀಯರು ಅಗ್ನಿಶಾಮಕ ದಳ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತರಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ದೆಹಲಿ ಅಗ್ನಿಶಾಮಕ ದಳದವರು, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಇತರ ರಕ್ಷಣಾ ಏಜೆನ್ಸಿಗಳು ಬಾಲಕನಿಗಾಗಿ ವ್ಯಾಪಕ ಶೋಧ ಆರಂಭಿಸಿದವು.
ಆದರೆ, ಚರಂಡಿಯಲ್ಲಿ ನೀರಿನ ಹರಿವು ವೇಗವಾಗಿದ್ದ ಕಾರಣ ಮತ್ತು ಕೊಳಚೆ ತುಂಬಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಹಿನ್ನಡೆಯಾಗಿದೆ. ಸತತ 24 ಗಂಟೆಗಳ ಕಾಲ ಶೋಧ ನಡೆಸಿದರೂ ಮಿಥುನ್‌ನ ಸುಳಿವು ರಕ್ಷಣಾ ಪಡೆಗಳಿಗೆ ಲಭ್ಯವಾಗಿಲ್ಲ. ಇದೇ ವಿಚಾರ ಕುಟುಂಬದ ಆತಂಕವನ್ನ ಹೆಚ್ಚು ಮಾಡಿದೆ.
ನಾಪತ್ತೆಯಾದ ಮಗನಿಗಾಗಿ ಹುಡುಕಾಟ: ಕೊಚ್ಚೆಗಿಳಿದ ತಂದೆ
ಒಂದೆಡೆ ರಕ್ಷಣಾ ಪಡೆಗಳು ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದರೂ, ಯಾವುದೇ ಫಲಿತಾಂಶ ಸಿಗದ ಕಾರಣ ತಂದೆ ಅವಧೇಶ್ ಅವರ ತಾಳ್ಮೆ ಕಟ್ಟೆಯೊಡೆದಿತ್ತು. ಮಗನನ್ನು ಹೇಗಾದರೂ ಮಾಡಿ ಬದುಕಿಸಿಕೊಳ್ಳಬೇಕು ಎಂಬ ಹಂಬಲದಲ್ಲಿ, ತಮ್ಮ ಜೀವದ ಹಂಗನ್ನ ತೊರೆದ ಆ ತಂದೆ ಭಾನುವಾರ ತಾನೇ ಖುದ್ದಾಗಿ ಕೊಳಚೆ ತುಂಬಿ ವೇಗವಾಗಿ ಹರಿಯುತ್ತಿದ್ದ ಚರಂಡಿಯ ನೀರಿಗಿಳಿದಿದ್ದಾರೆ. ರಕ್ಷಣಾ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳದಲ್ಲೇ ಇದ್ದರೂ, ಅಸಹಾಯಕ ತಂದೆ ಮಾತ್ರ ಯಾರ ಮಾತನ್ನೂ ಕೇಳದೆ ಮಗನಿಗಾಗಿ ಆ ಕಲುಷಿತ ನೀರಿನಲ್ಲಿ ಜಾಲಾಡಿದ್ದಾರೆ. ಕಣ್ಣೆದುರಲ್ಲೇ ಮಗ ನೀರುಪಾಲಾಗಿದ್ದನ್ನು ನೆನೆದು ಆ ತಂದೆ ಪಡುತ್ತಿರುವ ಪಾಡು, ನೆರೆದಿದ್ದ ಪ್ರತಿಯೊಬ್ಬರ ಹೃದಯ ಕರಗಿಸುವಂತಿತ್ತು.
प्रशासन जब बच्चे को खोज नहीं पाया तो बेबस पिता नाले में उतरे। बच्चे डूबने के मामले में... @NBTDilli pic.twitter.com/VyWYfE76cM
— Ashwani Sharma (@ashwanituntun) August 23, 2026
ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರ ಆಕ್ರೋಶ
ಘಟನೆ ನಡೆದು 24 ಗಂಟೆ ಕಳೆದರೂ ಬಾಲಕ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯ ನಿವಾಸಿಗಳ ಆಕ್ರೋಶ ಭುಗಿಲೆದ್ದಿದೆ. ಭಾನುವಾರ ರಸ್ತೆ ತಡೆದು ಬೃಹತ್ ಪ್ರತಿಭಟನೆ ನಡೆಸಿದ ನೂರಾರು ಜನರು, ವಾಹನ ಸಂಚಾರವನ್ನ ಸಂಪೂರ್ಣವಾಗಿ ಅಸ್ತವ್ಯಸ್ತಗೊಳಿಸಿದರು. ಅಧಿಕಾರಿಗಳು ಹಾಗೂ ಆಡಳಿತ ವ್ಯವಸ್ಥೆ ತೀವ್ರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದ ಅವರು, ಕಾರ್ಯಾಚರಣೆಯನ್ನ ಮತ್ತಷ್ಟು ಚುರುಕುಗೊಳಿಸುವಂತೆ ಪಟ್ಟು ಹಿಡಿದರು.
"ರಕ್ಷಣಾ ಸಿಬ್ಬಂದಿ ಕೇವಲ ಮರದ ಉದ್ದನೆಯ ಕೋಲುಗಳನ್ನು ಇಟ್ಟುಕೊಂಡು ಚರಂಡಿಯಲ್ಲಿ ಹುಡುಕುತ್ತಿದ್ದಾರೆ. ಇಂತಹ ಹಳೆಯ ಮತ್ತು ಅವೈಜ್ಞಾನಿಕ ವಿಧಾನಗಳಿಂದ ಬಾಲಕನನ್ನು ಪತ್ತೆ ಹಚ್ಚಲು ಹೇಗೆ ಸಾಧ್ಯ? ಅಧಿಕಾರಿಗಳು ಈ ಕಾರ್ಯಾಚರಣೆಯನ್ನ ಗಂಭೀರವಾಗಿ ಪರಿಗಣಿಸಿಲ್ಲ" ಎಂದು ಪ್ರತಿಭಟನಾಕಾರರು ತೀವ್ರ ವಾಗ್ದಾಳಿ ನಡೆಸಿದರು. ಆದಷ್ಟು ಬೇಗ ನುರಿತ ಮುಳುಗುತಜ್ಞರು ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ಬಳಸಿ ಬಾಲಕನ ಪತ್ತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


Click it and Unblock the Notifications
