ಅಪನಗದೀಕರಣದಿಂದ ಕಡಿಮೆ ದರದಲ್ಲಿ ಮನೆಗಳು ದೊರೆಯುತ್ತಿವೆ: ಮೋದಿ
ಸೂರತ್, ಜನವರಿ 30: ತಮ್ಮ ಸರ್ಕಾರದ ಅಪನಗದೀಕರಣ ನಿರ್ಣಯದಿಂದಾಗಿ ವಸತಿ ಮನೆಗಳು ಅಗ್ಗವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೇಳಿದರು.
ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ಗೆ ಶಂಕುಸ್ಥಾಪನೆ ಮಾಡಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಪನಗದೀಕರಣದಿಂದ ಕಡಿಮೆ ದರದಲ್ಲಿ ಯುವಕರಿಗೆ ಮನೆಗಳು ದೊರೆಯುವಂತಾಗಿದೆ ಎಂದು ಮೋದಿ, 'ನಾವು ಮಾಡಿದ ಕೆಲಸವನ್ನು ಮಾಡಲು ಈ ಹಿಂದಿನ ಸರ್ಕಾರಕ್ಕೆ ಕನಿಷ್ಟ 25 ವರ್ಷ ಬೇಕಾಗುತ್ತಿತ್ತು' ಎಂದು ಕಾಂಗ್ರೆಸ್ ಅನ್ನು ಟೀಕಿಸಿದರು.

ಅಪನಗದೀಕರಣದಿಂದ ಏನು ಲಾಭವಾಯಿತು ಎಂದು ನನ್ನು ಕೇಳುತ್ತಿರುತ್ತಾರೆ, ಆದರೆ ಅದೇ ಪ್ರಶ್ನೆಯನ್ನು ದೇಶದ ಯುವಕರಿಗೆ ಕೇಳಿ. ಅಪನಗದೀಕರಣ ಮತ್ತು ರೇರಾ ಕಾಯ್ದೆಯಿಂದಾಗಿ ರಿಯಲ್ ಎಸ್ಟೇಟ್ ದರ ಕಡಿಮೆ ಆಗಿ ಕಡಿಮೆ ಬೆಲೆಗೆ ಆಸ್ತಿ ದೊರೆಯುವಂತಾಯಿತು ಎಂದು ಮೋದಿ ಹೇಳಿದ್ದಾರೆ.
ಕಳೆದ ನಾಲ್ಕುವರೆ ವರ್ಷದ ಎನ್‌ಡಿಎ ಅಧಿಕಾರವದಿಯಲ್ಲಿ ನಾವು 1.50 ಕೋಟಿ ಮನೆಗಳನ್ನು ನಿರ್ಮಿಸಿದ್ದೇವೆ. ಯುಪಿಎ ಆಡಳಿತದಲ್ಲಿ ಅವರಿಗೆ ಕಟ್ಟಲಾಗಿದ್ದ ಕೇವಲ 25 ಲಕ್ಷ ಮನೆಗಳು ಮಾತ್ರ ಎಂದು ಮೋದಿ ಅಂಕಿ-ಅಂಶ ನೀಡಿದರು.
ತಮ್ಮ ಸರ್ಕಾರದ 'ಉಡಾನ್' ಯೋಜನೆಯನ್ನು ಹೊಗಳಿದ ಮೋದಿ, ಕಡಿಮೆ ದರದಲ್ಲಿ ಸಾಮಾನ್ಯರೂ ವಿಮಾನದಲ್ಲಿ ಪ್ರಯಾಣಿಸಲು 'ಉಡಾನ್' ನಿಂದ ಸಾಧ್ಯವಾಯಿತು. ಇದು ದೇಶದ ತ್ವರಿತ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಅವರು ಹೇಳಿದರು.
ಕಳೆದ 30 ವರ್ಷದಲ್ಲಿ ದೇಶದಲ್ಲಿ ಬಲಿಷ್ಠ ಸರ್ಕಾರ ಇರಲಿಲ್ಲ. ಮೂರು ದಶಕಗಳಿಂದಲೂ ಸಮ್ಮಿಶ್ರ ಸರ್ಕಾರವೇ ಇತ್ತು, ಹಾಗಾಗಿ ಅಭಿವೃದ್ಧಿ ಕುಂಠಿತವಾಯಿತು. ಆದರೆ ಕಳೆದ ಬಾರಿ ಬಲಿಷ್ಠ ಸರ್ಕಾರ ನಿರ್ಮಾಣವಾಗಿದೆ ಅಭಿವೃದ್ಧಿಯೂ ವೇಗವಾಗಿ ಆಗುತ್ತಿದೆ ಎಂದು ಮೋದಿ ಹೇಳಿದರು.












Click it and Unblock the Notifications