Delhi Ordinance Bill: ಗದ್ದಲದ ನಡುವೆಯೇ ಸೇವಾ ಮಸೂದೆ ಅಂಗೀಕಾರ- ದೆಹಲಿ ಜನರ ಬೆನ್ನಿಗೆ ಬಿಜೆಪಿ ಚೂರಿ ಹಾಕಿದೆ ಎಂದ ಕೇಜ್ರಿವಾಲ್
ಲೋಕಸಭೆಯಲ್ಲಿ ಗದ್ದಲದ ನಡುವೆಯೇ ದೆಹಲಿ ಸೇವಾ ಮಸೂದೆ ( ತಿದ್ದುಪಡಿ ) ಅಂಗೀಕಾರವಾಗಿದೆ. ಸುಮಾರು ನಾಲ್ಕು ಗಂಟೆಗಳ ಸುದೀರ್ಘ ಚರ್ಚೆಯ ನಂತರ ದೆಹಲಿ ಸೇವಾ ಮಸೂದೆಯನ್ನು ಅಂಗೀಕರಿಸಲಾಯಿತು.
ಈ ವಿಚಾರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, 'ಕೇಂದ್ರಾಡಳಿತ ಪ್ರದೇಶಗಳು ಮತ್ತು ದೆಹಲಿಯಲ್ಲಿ ಕಾನೂನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ' ಎಂದು ಪ್ರತಿಪಾದಿಸಿದರು.

ರಾಷ್ಟ್ರ ರಾಜಧಾನಿ ದೆಹಲಿಯು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ನಿಯಮಗಳನ್ನು ರೂಪಿಸುವ ಸಂಪೂರ್ಣ ಹಕ್ಕು ಕೇಂದ್ರಕ್ಕೆ ಇದೆ ಎಂದು ಶಾ ಸ್ಪಷ್ಟಪಡಿಸಿದರು.
ಇದೇ ವೇಳೆ, ದೆಹಲಿ ಸೇವಾ ಮಸೂದೆಯನ್ನು ವಿರೋಧಿಸಿದ ಪ್ರತಿಪಕ್ಷಗಳ ವಿರುದ್ಧ ಶಾ ಹರಿಹಾಯ್ದರು.
'ಮಸೂದೆಯನ್ನು ಅಂಗೀಕರಿಸಿದ ನಂತರ ಪ್ರತಿಪಕ್ಷಗಳ ಮೈತ್ರಿ ಕುಸಿದು ಬೀಳುತ್ತದೆ' ಎಂದು ಭವಿಷ್ಯ ನುಡಿದರು.
ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತಿಲ್ಲ. ನಿಯಮಿತವಾಗಿ ವಿಧಾನಸಭೆ ಅಧಿವೇಶನವನ್ನು ಕರೆಯುತ್ತಿಲ್ಲ ಎಂದು ಅವರು ಆರೋಪಿಸಿದರು.

ದೆಹಲಿ ಸರ್ಕಾರದ ಕ್ಯಾಬಿನೆಟ್ ಸಭೆಯನ್ನು ಸಹ ನಿಯಮಿತವಾಗಿ ಕರೆಯುವುದಿಲ್ಲ ಎಂದು ಶಾ ಹೇಳಿದರು.
'ಮಸೂದೆಯು ಸಾಂವಿಧಾನಿಕವಾಗಿ ಮಾನ್ಯವಾಗಿದೆ ಮತ್ತು ಇದು ದೆಹಲಿಯ ಜನರಿಗೆ ಪ್ರಯೋಜನಕಾರಿಯಾಗಿದೆ' ಎಂದು ತಿಳಿಸಿದರು.
ರಾಷ್ಟ್ರ ರಾಜಧಾನಿಯ ಜನರ ಕಲ್ಯಾಣಕ್ಕಾಗಿ ಮಸೂದೆಯನ್ನು ಬೆಂಬಲಿಸುವಂತೆ ಶಾ ವಿರೋಧ ಪಕ್ಷಗಳನ್ನು ಕೇಳಿಕೊಂಡರು. ಮಸೂದೆ ಅಂಗೀಕಾರವಾಗುತ್ತಿದ್ದಂತೆಯೇ ಹಲವು ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆಯ ಸಂಕೇತವಾಗಿ ಲೋಕಸಭೆಯಿಂದ ಹೊರನಡೆದರು.

ವಿಧೇಯಕದ ಪ್ರತಿಯನ್ನು ಹರಿದು ಕುರ್ಚಿಯತ್ತ ಎಸೆದ ಎಎಪಿ ಸದಸ್ಯ ಸುಶೀಲ್ ಕುಮಾರ್ ರಿಂಕು ಅವರನ್ನು ಅಶಿಸ್ತಿನ ವರ್ತನೆಗಾಗಿ ಸ್ಪೀಕರ್ ಓಂ ಬಿರ್ಲಾ ಅವರು ಅಮಾನತುಗೊಳಿಸಿದರು.
ಹಿಂಸಾಚಾರ ಪೀಡಿತ ಮಣಿಪುರದ ಪರಿಸ್ಥಿತಿಯ ಬಗ್ಗೆ ಪ್ರತಿಪಕ್ಷಗಳು ಬಯಸಿದಷ್ಟು ಕಾಲ ಚರ್ಚೆಗೆ ಸರ್ಕಾರ ಸಿದ್ಧವಾಗಿದೆ ಮತ್ತು ಅದಕ್ಕೆ ತಾನು ಪ್ರತಿಕ್ರಿಯಿಸುತ್ತೇನೆ ಎಂದು ಶಾ ತಮ್ಮ ಭಾಷಣದಲ್ಲಿ ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, 'ಪ್ರಧಾನಿಯಾದ ಮೇಲೆ ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ನೀಡುವುದಾಗಿ ಮೋದಿ ಅವರೇ ಹೇಳಿದ್ದರು. ಆದರೆ ಇಂದು ಈ ಜನ ದೆಹಲಿ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ' ಎಂದು ಟ್ವೀಟ್ ಮಾಡಿದ್ದಾರೆ.












Click it and Unblock the Notifications