ಸಂಸತ್ ಭವನ ಭದ್ರತಾ ಲೋಪ: ಪ್ರಕರಣದ ಮಾಸ್ಟರ್ ಮೈಂಡ್ ಬಂಧನ
ದೇಶವನ್ನೇ ಬೆಚ್ಚಿ ಬೀಳಿಸಿದ ಸಂಸತ್ತಿನ ಭದ್ರತಾ ಲೋಪದ ಮಾಸ್ಟರ್ ಮೈಂಡ್ ಲಲಿತ್ ಝಾ ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೋಲ್ಕತ್ತಾ ಮೂಲದ ಶಿಕ್ಷಕ ಸುಮಾರು ಎರಡು ದಿನಗಳ ಕಾಲ ಪರಾರಿಯಾಗಿದ್ದ ನಂತರ ದೆಹಲಿಯಲ್ಲಿ ಸಿಕ್ಕಿಬಿದ್ದಿದ್ದಾನೆ.
ಬುಧವಾರ ಮಧ್ಯಾಹ್ನ ಭದ್ರತಾ ಉಲ್ಲಂಘನೆಗಾಗಿ ಐವರನ್ನು ಬಂಧಿಸಲಾಯಿತು, ಇದರಲ್ಲಿ ಇಬ್ಬರು ವ್ಯಕ್ತಿಗಳು ಹೊಗೆ ಬಾಂಬ್‌ಗಳನ್ನು ಒಳಗೆ ತೆಗೆದುಕೊಂಡು ಹೋಗಿ ಲೋಕಸಭೆಯ ಕಲಾಪದಲ್ಲಿ ತೆರೆಯುವ ಮೂಲಕ ಹಳದಿ ಬಣ್ಣದ ಹೊಗೆ ಆವರಿಸುವಂತೆ ಮಾಡಿ ಆತಂಕ ಮೂಡಿಸಿದ್ದರು.

ಪಾಸ್ ಪಡೆಯಲು ಸಾಧ್ಯವಾಗದ ಇನ್ನಿಬ್ಬರು ಸಂಸತ್ ಭವನದ ಹೊರಗೆ ಘೋಷಣೆಗಳನ್ನು ಕೂಗುತ್ತಾ ಸ್ಮೋಕ್ ಬಾಂಬ್‌ನೊಂದಿಗೆ ಪ್ರತಿಭಟನೆ ನಡೆಸಿದರು.
ಸಂದರ್ಶಕರ ಪಾಸ್ ಸಹ ಪಡೆಯದ ಲಲಿತ್ ಝಾ ಅದನ್ನು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಅವರು ಕೋಲ್ಕತ್ತಾದಲ್ಲಿ ಲಾಭರಹಿತ ಸಂಸ್ಥೆಯನ್ನು ನಡೆಸುತ್ತಿರುವ ಸಹವರ್ತಿಯೊಬ್ಬರಿಗೆ ಪ್ರತಿಯನ್ನು ರವಾನಿಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ
ಬುಧವಾರ ಸಂಸತ್ತಿನಲ್ಲಿ ಬಂಧಿತರಾದ ನಾಲ್ವರನ್ನು ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ ಮತ್ತು ಸಂಸತ್ತಿನ ಹೊರಗೆ ಪ್ರತಿಭಟಿಸುವ ಸಂದರ್ಭದಲ್ಲಿ ಬಂಧಿತರಾದ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ಹೆಚ್ಚಿನ ವಿಚಾರಣೆ ಮಾಡಬೇಕಿದೆ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ ಬಳಿಕ ಕಸ್ಟಡಿಗೆ ಒಪ್ಪಿಸಲಾಗಿದೆ.
ಸಾಗರ್ ಶರ್ಮಾ ಮತ್ತು ಡಿ ಮನೋರಂಜನ್ ಸಂಸತ್ತಿನ ಒಳಗೆ ಸ್ಮೋಕ್ ಬಾಂಬ್‌ಗಳನ್ನು ಸಾಗಿಸಿದ್ದರು. ಸಂದರ್ಶಕರ ಪಾಸ್‌ಗಳನ್ನು ಪಡೆಯಲು ಸಾಧ್ಯವಾಗದ ಮತ್ತಿಬ್ಬರು ಸಂಸತ್ತಿನ ಹೊರಗೆ ಘೋಷಣೆಗಳನ್ನು ಕೂಗಿದ್ದರು. ಆರೋಪಿಗಳ ವಿರುದ್ಧ ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಘಟನೆಯು ಭಯೋತ್ಪಾದಕ ದಾಳಿಯನ್ನು ಹೋಲುತ್ತದೆ ಎಂದು ಪೊಲೀಸರು ಗುರುವಾರ ನ್ಯಾಯಾಲಯದಲ್ಲಿ ವಾದಿಸಿದ್ದಾರೆ. ಪೊಲೀಸರು 15 ದಿನಗಳ ಕಸ್ಟಡಿಗೆ ಕೋರಿದ್ದರು ಆದರೆ 7 ದಿನಗಳ ಕಾಲಾವಕಾಶ ನೀಡಲಾಗಿದೆ.












Click it and Unblock the Notifications