ದೆಹಲಿ ಮದ್ಯ ಹಗರಣ: ಇಂಡೋ ಸ್ಪಿರಿಟ್ಸ್‌ನಲ್ಲಿ ಕೆಸಿಆರ್ ಪುತ್ರಿ ಕವಿತಾ ಪಾಲು ಎಂಬ ಸ್ಫೋಟಕ ಮಾಹಿತಿ ಇಡಿಯಿಂದ ಬಹಿರಂಗ
ನವದೆಹಲಿ, ಡಿಸೆಂಬರ್ 21: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಪುತ್ರಿ ಕವಿತಾ ಅವರ ಕುರಿತು ಜಾರಿ ನಿರ್ದೇಶನಾಲಯವು(ಇಡಿ) ಸ್ಪೋಟಕ ಮಾಹಿತಿಯೊಂದನ್ನು ಬಹಿರಂಗ ಪಡಿಸಿದೆ.
ದೆಹಲಿ ಮದ್ಯ ಹಗರಣದಲ್ಲಿ ಭಾಗಿಯಾಗಿರುವ ಇಂಡೋ ಸ್ಪಿರಿಟ್ಸ್‌ನಲ್ಲಿ ಸುಮಾರು ಶೇ 65 ಪಾಲನ್ನು ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ಮಾಹಿತಿ ಹೊರಹಾಕಿದೆ.
ಕಳೆದ ತಿಂಗಳು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ, ಕವಿತಾ ಅವರು ಪ್ರಾಕ್ಸಿಗಳ ಮೂಲಕ ಪಾಲನ್ನು ಹೊಂದಿದ್ದಾರೆ ಎಂದು ಇಡಿ ತಿಳಿಸಿದೆ.

ಇಡಿ ಚಾರ್ಜ್‌ಶೀಟ್ ಅನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ನಾಗ್‌ಪಾಲ್‌ಗೆ ಸಲ್ಲಿಸಲಾಗಿದ್ದು, ಅವರು ಮಂಗಳವಾರ ಅದನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಜನವರಿ 5 ರಂದು ಮಾಡಲಿದ್ದಾರೆ.
ದೆಹಲಿ ಮದ್ಯ ಹಗರಣವು ಹೇಗೆ ಬಯಲಾಯಿತು ಎಂಬುದರ ಬಗ್ಗೆ ಇಡಿ ಚಾರ್ಜ್‌ಶೀಟ್‌ನಲ್ಲಿ ವಿವರಿಸಲಾಗಿದೆ. ಇಂಡೋ ಸ್ಪಿರಿಟ್ ಜೊತೆಗಿನ ಪಾಲುದಾರಿಕೆ ಹಾಗೂ ಹಗರಣದ ಕುರಿತ ಮಾಹಿತಿಯನ್ನು ಚಾರ್ಜ್‌ಶೀಟ್‌ನಲ್ಲಿ ದಾಖಲಿಸಲಾಗಿದೆ.
ನವೆಂಬರ್ 12 ರಂದು ಸಮೀರ್(ಇಂಡೋ ಸ್ಪಿರಿಟ್ ಮುಖ್ಯಸ್ಥ) ಇಡಿಗೆ ಹೇಳಿಕೆ ನೀಡಿರುವ ಪ್ರಕಾರ, ವಿಜಯ್ ನಾಯರ್ ಎಂಬ ವ್ಯಕ್ತಿ ಅರುಣ್ ಪಿಳ್ಳೈ ಎಂಬುವವರನ್ನು ನನಗೆ ಪರಿಚಯಿಸಿದರು. ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ನಿಟಕವರ್ತಿಗಳು ಎಂದು ಹೇಳಲಾಯಿತು. ಈ ವ್ಯಕ್ತಿಗಳಿಗೆ ದೆಹಲಿಯಲ್ಲಿರುವ ನನ್ನ ಉದ್ಯಮದಲ್ಲಿ ಪಾಲುದಾರಿಕೆ ಬೇಕಾಗಿತ್ತು ಎಂದು ಸಮೀರ್ ತಿಳಿಸಿದ್ದಾರೆ.
ಪಾಲುದಾರಿಕೆಯ ಷರತ್ತನ್ನು ಸಮೀರ್ ಈ ಮೊದಲ ಒಪ್ಪಲಿಲ್ಲ. ಏಕೆಂದರೆ, ಈ ವ್ಯಕ್ತಿಗಳಿಂದ ಯಾವುದೇ ಗಮನಾರ್ಹ ಹೂಡಿಕೆಗಳಿರಲಿಲ್ಲ. ಆದರೆ, ಪೆರ್ನಾಡ್ ಉದ್ಯಮವನ್ನು ತಮಗೆ ಒಪ್ಪಿಸುವುದಾಗಿ ವಿಜಯ್ ಹೇಳಿದ್ದಾರೆ. ಆ ನಂತರ ಸಮೀರ್ ಅವರು ತಮ್ಮ ವ್ಯವಹಾರದಲ್ಲಿ ಶೇ 65 ಪಾಲು ನೀಡಲು ಸಮ್ಮತಿ ಸೂಚಿಸಿದ್ದಾರೆ.

ಎಂಎಸ್ಆರ್ (ಮಗುಂಟಾ ಶ್ರೀನಿವಾಸುಲು ರೆಡ್ಡಿ) ಮತ್ತು ಕೆ. ಕವಿತಾ ಇಂಡೋ ಸ್ಪಿರಿಟ್ಸ್‌ನ ನಿಜವಾದ ಪಾಲುದಾರರು ಎಂದು ಈ ವ್ಯಕ್ತಿಗಳೊಂದಿಗೆ ನಡೆದ ಮಾತುಕತೆಯಲ್ಲಿ ಸಮೀರ್‌ಗೆ ಗೊತ್ತಾಗಿದೆ.
ಕವಿತಾ ಮತ್ತು ಸಮೀರ್ ಅವರ ನಡುವೆ ನಡೆದಿರುವ ಫೇಸ್‌ಟೈಮ್ ಮೀಟಿಂಗ್‌ಗೆ ವೇದಿಕೆಯನ್ನು ಅರುಣ್ ಪಿಳ್ಳೈ ಏರ್ಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಸಮೀರ್ ಮಹೇಂದ್ರು ಮತ್ತು ಕವಿತಾ ಅವರ ಸಭೆಯನ್ನು ಏರ್ಪಡಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ












Click it and Unblock the Notifications