Heavy Rain: ದೆಹಲಿಯಲ್ಲಿ ಮಳೆ ನಿಂತರೂ ಉತ್ತರಕ್ಕೆ ತಪ್ಪದ ಕಂಟಕ!
ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದರೂ ಉತ್ತರ ಭಾರತದಲ್ಲಿ ಮಾತ್ರ ವರುಣನ ಕಂಟಕ ಮುಂದುವರಿದಿದೆ. ಅದರಲ್ಲೂ ಒಡಿಶಾ ರಾಜ್ಯ ಮಳೆ ಅಬ್ಬರಕ್ಕೆ ಬೆಚ್ಚಿಬಿದ್ದಿದೆ. ದೆಹಲಿಯಲ್ಲಿ ಯಮುನಾ ನದಿ ಪ್ರವಾಹದಲ್ಲಿ ಇಳಿಕೆ ಕಂಡುಬಂದಿದ್ದು, ಜನರು ಸ್ವಲ್ಪ ನಿರಾಳರಾಗಿದ್ದಾರೆ. ಆದರೆ ಉತ್ತರ ಭಾರತದ ಇತರೆಡೆ ಸಮಸ್ಯೆ ಶುರುವಾಗಿಬಿಟ್ಟಿದೆ.
ದೆಹಲಿಯಲ್ಲಿ ಮಳೆ ನಿಂತಿದ್ದರು ಕೂಡ ಕೆಲ ಪ್ರದೇಶದಲ್ಲಿ ಪ್ರವಾಹದ ನೀರು ಇನ್ನೂ ಹಾಗೇ ನಿಂತಿದೆ. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಪರಿಹಾರ ಕಾರ್ಯಾಚರಣೆ ಕೂಡ ಭರದಿಂದ ಸಾಗಿದೆ. ಆದರೆ ಇದೇ ಸಂದರ್ಭದಲ್ಲಿ ಉತ್ತರ ಭಾರತದ ಇತರ ರಾಜ್ಯಗಳಲ್ಲಿ ಮಳೆ ಅಬ್ಬರ ಬಲು ಜೋರಾಗಿದ್ದು, ಜನ ನರಳಾಡುತ್ತಿದ್ದಾರೆ. ಒಡಿಶಾದ ಹಲವು ಜಿಲ್ಲೆಗಳಲ್ಲಿ ಇಂದು ಭಾರಿ ಮಳೆಯಾಗಿದೆ. ಭುವನೇಶ್ವರ ಹಾಗೂ ಕಟಕ್ ನಗರಗಳಲ್ಲಿ ವಸತಿ ಪ್ರದೇಶಗಳು & ರಸ್ತೆಗಳೆಲ್ಲಾ ನದಿಯಂತಾಗಿವೆ. ಮುಂದಿನ ಕೆಲ ಗಂಟೆಗಳ ಕಾಲ ಒಡಿಶಾದಲ್ಲಿ ಮತ್ತಷ್ಟು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೈಮೀರಿ ಹೋಗುತ್ತಿದೆ ಪರಿಸ್ಥಿತಿ
ಅತ್ತ ದೆಹಲಿಯಲ್ಲಿ ಮಳೆ ನಿಂತಿದ್ದರೂ ಹಿಮಾಚಲ ಪ್ರದೇಶದಲ್ಲಿ ಮಾತ್ರ ಮಳೆ ನಿಂತಿಲ್ಲ ಈ ಹಿನ್ನೆಲೆ ಆತಂಕ ಹೆಚ್ಚಾಗಿದೆ. ಅಲ್ಲದೆ ಜುಲೈ 17ರ ವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿ ಆರೆಂಜ್ ಅಲರ್ಟ್ ಕೂಡ ಘೋಷಿಸಿದೆ. ಜುಲೈ 18ರಂದು ಯಲ್ಲೊ ಅಲರ್ಟ್ ಘೋಷಿಸಿದ್ದು, ದಿಢೀರ್ ಪ್ರವಾಹ, ಭೂಕುಸಿತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಹೀಗಾಗಿಯೇ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಕೈಮೀರಿ ಹೋಗುತ್ತಿದೆ. ಅಲ್ಲದೆ ದೆಹಲಿಗೂ ಮತ್ತೆ ಕಂಟಕ ಎದುರಾಗುತ್ತಾ? ಎಂಬ ಭಯ ಕೂಡ ಈಗ ಆವರಿಸಿದೆ. ಕೇಜ್ರಿವಾಲ್ ಸರ್ಕಾರ ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದೆ.
ಯಮುನಾ ಅಬ್ಬರಕ್ಕೆ ಎಲ್ಲರೂ ತತ್ತರ
ಉಕ್ಕಿ ಹರಿಯುತ್ತಿರುವ ಯಮುನಾ ನದಿಯು ಅದೆಷ್ಟು ಭಯಾನಕವಾಗಿ ಕಾಣುತ್ತಿದೆ ಅಂದ್ರೆ, ಜೀವನದಿ ಎಂದು ಕರೆಸಿಕೊಳ್ಳುವ ಯಮುನೆಯ ರೌದ್ರವಾತಾರ ಕಂಡು ದೆಹಲಿ ಜನ ದೂರ ಓಡುತ್ತಿದ್ದಾರೆ. ಅಲ್ಲದೆ ಯಮುನೆಯ ನೀರಿನ ಹರಿವಿನ ಮಟ್ಟ ಸುಮಾರು 40 ವರ್ಷ ಹಿಂದಿನ ದಾಖಲೆಯನ್ನೂ ಧೂಳ್ ಮಾಡಿದೆ. 200 ಮೀಟರ್ ಮೇಲ್ಮಟ್ಟದಲ್ಲಿ ಯಮುನಾ ಹರಿಯುತ್ತಿತ್ತು ಆದರೆ ಈಗ ಒಂದಷ್ಟು ಕಡಿಮೆ ಆಗಿದೆ.

ಹರಿಯಾಣದಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಹೀಗಾಗಿ ಯಮುನೆ ನೀರಿನ ಮಟ್ಟ ಸತತ ಹಲವು ದಿನದಿಂದ ಕಡಿಮೆ ಆಗುತ್ತಿಲ್ಲ. ಈಗೀಗ ಒಂದಷ್ಟು ಹಿಡಿತಕ್ಕೆ ಬರುತ್ತಿದ್ದರೂ ಮತ್ತೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಿರುವುದು ಆತಂಕ ಮೂಡಿಸಿದೆ.
ದೆಹಲಿಯಲ್ಲಿ ಎಲ್ಲವೂ ನೀರಲ್ಲಿ ಕೊಚ್ಚಿ ಹೋಗಿಬಿಟ್ಟಿದೆ, ರಸ್ತೆಗಳು ಯಮುನೆಯ ಪ್ರವಾಹದಲ್ಲಿ ಕಾಣೆಯಾಗಿವೆ. ಶಾಲೆ ಹಾಗೂ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಮೆಟ್ರೋ ಸಂಚಾರವು ಕೂಡ ಬಂದ್ ಆಗಿದೆ. ಒಟ್ನಲ್ಲಿ ಈಗ ಮಳೆರಾಯ ನೀಡಿದ ಕಾಟದಿಂದ ಮತ್ತೆ ಸಹಜ ಸ್ಥಿತಿಗೆ ಮರಳಲು ದೆಹಲಿ ಇನ್ನಷ್ಟು ಸಮಯ ತೆಗೆದುಕೊಳ್ಳಲಿದೆ.
ಹಲವು ಪ್ರದೇಶಗಳಲ್ಲಿ ನೀರು ಇನ್ನೂ ಖಾಲಿಯಾಗಿಲ್ಲ. ಹೀಗಾಗಿ ಕೇಜ್ರಿವಾಲ್ ಸರ್ಕಾರ ಪರಿಹಾರ ಕಾರ್ಯಾಚರಣೆಗಳನ್ನ ಕೈಗೊಂಡಿದೆ. ಇನ್ನೂ ಮೂರು ಅಥವಾ ನಾಲ್ಕು ದಿನ ಪರದಾಟ ಇದ್ದಿದ್ದೆ.












Click it and Unblock the Notifications