ಹನಿಪ್ರೀತ್ ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ
ನವದೆಹಲಿ, ಸೆಪ್ಟೆಂಬರ್ 26 : ಬಾಬಾ ರಾಮ್ ರಹೀಮ್ ಸಿಂಗ್ ದತ್ತು ಪುತ್ರಿ ಹನಿಪ್ರೀತ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಹನಿಪ್ರೀತ್ ಬಂಧನಕ್ಕಾಗಿ ಹರ್ಯಾಣ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ.
ಮಂಗಳವಾರ ದೆಹಲಿ ಹೈಕೋರ್ಟ್ ಈ ಪ್ರಕರಣ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಪಂಜಾಬ್-ಹರ್ಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಎಂದು ಹೇಳಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.

2002ರಲ್ಲಿ ನಡೆದ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ಸಿಂಗ್ ಜೈಲು ಸೇರಿದ್ದಾನೆ. ಎರಡು ಪ್ರಕರಣಗಳಲ್ಲಿ ಅವರಿಗೆ ತಲಾ 10 ವರ್ಷದ ಜೈಲು ಶಿಕ್ಷೆ ಮತ್ತು 15 ಲಕ್ಷ ರೂ. ದಂಡವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಹನಿಪ್ರೀತ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು ಮಾಡಲಾಗಿದೆ. ಆದರೆ, ಬಂಧನದಿಂದ ತಪ್ಪಿಸಿಕೊಳ್ಳಲು ಹನಿಪ್ರೀತ್ ಪರಾರಿಯಾಗಿದ್ದಾರೆ. ಆದ್ದರಿಂದ, ಪೊಲೀಸರು ಲುಕ್ ಔಟ್ ನೋಟಿಸ್ ಜಾರಿಗೊಳಿಸಿ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಆದರೆ, ಇಂದು ಹನಿಪ್ರೀತ್ ದೆಹಲಿ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಮೊದಲು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ 12 ಗಂಟೆಯೊಳಗೆ ಪೊಲೀಸರ ಮುಂದೆ ಶರಣಾಗಬೇಕು ಎಂದು ಸೂಚನೆ ನೀಡಿ, ತೀರ್ಪು ಕಾಯ್ದಿರಿಸಿತು.
ನಂತರ ಸಂಜೆ 7.45ಕ್ಕೆ ಆದೇಶ ಹೊರಡಿಸಿದ ಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಈ ಅರ್ಜಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿತು.












Click it and Unblock the Notifications