Arvind Kejriwal: ಕೇಜ್ರಿವಾಲ್‌ಗೆ ಹೈಕೋರ್ಟ್ ಬಿಗ್ ಶಾಕ್, ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ
ನವದೆಹಲಿ, ಜೂನ್ 25: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆಗೆ ಆರೋಪ ಹೊತ್ತು ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬಿಡುಗಡೆ ಭಾಗ್ಯ ನೀಡಿಲ್ಲ. ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ಕೇಜ್ರಿವಾಲ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಆರೋಪಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡದಂತೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಹೈಕೋರ್ಟ್ ಇಡಿ ಮನವಿ ಪುರಸ್ಕರಿಸುವ ಮೂಲಕ ಅರವಿಂದ್ ಕೇಜ್ರಿವಾಲ್‌ಗೆ ಶಾಕ್ ನೀಡಿದೆ.

ಪ್ರಕರಣ ಸಂಬಂಧ ಟ್ರಯಲ್ ಕೋರ್ಟ್ ಜೂನ್ 20 ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿತ್ತು. ಆಗ ದೆಹಲಿ ಸಿಎಂ ಪ್ರಕರಣದಿಂದ ತಕ್ಕ ಮಟ್ಟಿನ ನಿರಾಳತೆ ಅನುಭವಿಸಿದ್ದರು. ಆದರೆ ಇದು ಹೆಚ್ಚು ದಿನ ಉಳಿಯಲಿಲ್ಲ. ಏಕೆಂದರೆ ಟ್ರಯಲ್ ಕೋರ್ಟ್ ತೀರ್ಪು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ದೆಹಲಿ ಹೈಕೋರ್ಟ್ ಅರ್ಜಿ ಮೇಲ್ಮನವಿ ಸಲ್ಲಿಸಿತ್ತು.
ಜೂನ್ 20ರ ಜಾಮೀನು ಆದೇಶಕ್ಕೆ ತಡೆ
ಇದೀಗ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ವಾದ ವಿವಾದ ಆಲಿಸಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾಮೀನು ನೀಡಲು ನಿರಾಕರಿಸಿತು. ಇಡಿ ಮನವಿಯನ್ನು ಪುರಸ್ಕರಿಸಿತ್ತು. ನ್ಯಾಯಾಧೀಶರಾದ ಸುಧೀರ್ ಕುಮಾರ್ ಜೈನ್ ಅವರಿದ್ದ ಪೀಠವು ಜೂನ್ 20 ರಂದು ನೀಡಿದ್ದ ಜಾಮೀನು ಮಂಜೂರು ಆದೇಶಕ್ಕೆ ತಡೆ ನೀಡಿ ಆದೇಶಿಸಿದೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಕರಣದಿಂದ ಷರತ್ತು ಬದ್ಧ ಜಾಮೀನು ಪಡೆದಿದ್ದ ಅರವಿಂದ್ ಕೇಜ್ರಿವಾಲ್ ಅವರು ಜಾಮೀನಿನ ಮೇಲೆ ಹೊರಗಿದ್ದರು. ನಂತರ ಜೂನ್ 2ರಂದು ಮತ್ತೆ ಕೋರ್ಟ್ ನಿರ್ದೇಶನದಂತೆ ಜೈಲು ಸೇರಿದರು. ಈ ಮಧ್ಯೆ ಅವರು ಜಾಮೀನಿಗೆ ಒಂದಷ್ಟು ಕಸರತ್ತು ನಡೆಸಿದ್ದರು.
ಅದರ ಫಲವಾಗಿ ಜೂನ್ 20 ರಂದು ಟ್ರಯಲ್ ಕೋರ್ಟ್ ಕೇಜ್ರಿವಾಲರ ಮನವಿ ಪುರಸ್ಕರಿಸಿ ಜಾಮೀನು ನೀಡಿತ್ತು. ಆದರೆ ಇಂದು ಆ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದು, ತನಿಖಾಧಿಕಾರಿಗಳಿಗೆ ಮನ್ನಣೆ ಸಿಕ್ಕಂತಾಗಿದೆ.












Click it and Unblock the Notifications