Delhi AQI: ಜ್ವಾಲಾಮುಖಿ ಸ್ಫೋಟ, ದೆಹಲಿ ಜನರಿಗೆ ಅಪಾಯ ಎದುರಾಯ್ತಾ?
ದೆಹಲಿ ನಗರದಲ್ಲಿ ಇಷ್ಟು ದಿನ ಜನರು ಉಸಿರಾಡುವುದಕ್ಕೆ ದುಡ್ಡು ಕೊಡಬೇಕಿತ್ತು, ಹೀಗೆ ದುಡ್ಡು ಕೊಟ್ಟು ಆಕ್ಸಿಜೆನ್ ಖರೀದಿ ಮಾಡಿ ಜೀವ ಉಳಿಸಿಕೊಳ್ಳುವ ಪರಿಸ್ಥಿತಿ ಇತ್ತು. ಆದರೆ ಈಗ ದಿಢೀರ್ ಈ ಪರಿಸ್ಥಿತಿ ಇನ್ನಷ್ಟು ಭೀಕರವಾಗಿದೆ. ದೆಹಲಿಗೆ ಜ್ವಾಲಾಮುಖಿ ಸ್ಫೋಟದ ಸಿಡಿಲು ಬಡಿದಿದ್ದು, ಹೀಗೆ ಜ್ವಾಲಾಮುಖಿ ಸುಳಿಯಲ್ಲಿ ಸಿಲುಕಿ ವಿಲವಿಲ ಒದ್ದಾಡಿ ಹೋಗುತ್ತಿದೆ ರಾಷ್ಟ್ರ ರಾಜಧಾನಿ. ದೂರದ ದೇಶದಲ್ಲಿ ಸಿಡಿದ ಜ್ವಾಲಾಮುಖಿ ಕೋಟ್ಯಂತರ ಜನರ ಜೀವನಕ್ಕೆ ಅಪಾಯ ತಂದೊಡ್ಡಿದೆ.
ದೆಹಲಿಗೆ ಇದೀಗ ಅಪಾಯ ಎದುರಾಗಿರುವುದು ಇಥಿಯೋಪಿಯಾ ಜ್ವಾಲಾಮುಖಿ ಸ್ಫೋಟದಿಂದ. ಹೌದು, ಇಥಿಯೋಪಿಯಾದ ಹೈಲಿ ಗುಬ್ಬಿ ಪರ್ವತದಲ್ಲಿ ಜ್ವಾಲಾಮುಖಿ ದಿಢೀರ್ ಸ್ಫೋಟಗೊಂಡಿದೆ. ಒಂದಲ್ಲ ಎರಡಲ್ಲ 12,000 ವರ್ಷಗಳ ಬಳಿಕ ಈ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಆಫ್ರಿಕಾದ ಇಥಿಯೋಪಿಯಾ ದೇಶದಲ್ಲಿ ಇರುವ ಹೈಲಿ ಗುಬ್ಬಿ ಪರ್ವತದ ಜ್ವಾಲಾಮುಖಿ ಮುನಿಸು ಇದೀಗ ನಮ್ಮ ದೇಶಕ್ಕೂ ಸಮಸ್ಯೆ ಮಾಡುತ್ತಿದೆ. ಪ್ರಮುಖವಾಗಿ ಉತ್ತರ ಭಾರತದಲ್ಲಿ ಈಗ ಸಮಸ್ಯೆ ದೊಡ್ಡದಾಗಿದ್ದು ಅಲ್ಲಿನ ಜನರ ಉಸಿರಾಟಕ್ಕೂ ತೊಂದರೆ ಆಗುವ ಸಾಧ್ಯತೆ ದಟ್ಟವಾಗಿದೆ.

ದೆಹಲಿ ಜನರಿಗೆ ಶುರುವಾಯ್ತು ಭಯ...
ರಾಷ್ಟ್ರ ರಾಜಧಾನಿ ದೆಹಲಿ ಸೇರಿ ಭಾರತದ ಹಲವು ರಾಜ್ಯಗಳಿಗೆ ಜ್ವಾಲಾಮುಖಿ ಸ್ಫೋಟದ ನಂತರ ಉಂಟಾಗುವ ಬೂದಿಯಿಂದ ಸಮಸ್ಯೆ ಎದುರಾಗಿದ್ದು, ಈಗಾಗಲೇ ಎಚ್ಚರಿಕೆ ಸಂದೇಶವನ್ನ ಕೂಡ ರವಾನಿಸಲಾಗಿದೆ. ಅದರಲ್ಲೂ ದೆಹಲಿ ಇದೀಗ ಹೈಅಲರ್ಟ್ ಆಗಿದ್ದು, ಯಾವ ಕ್ಷಣದಲ್ಲಿ ಅಲ್ಲಿನ ವಾಯುಮಟ್ಟ ಮತ್ತಷ್ಟು ಗಂಭೀರವಾಗುತ್ತೋ ಎಂಬ ಭಯ ಆವರಿಸಿದೆ. ಮತ್ತೊಂದು ಕಡೆಯಲ್ಲಿ ಹಲವರು ದೆಹಲಿಯಿಂದ ಬೇರೆ ರಾಜ್ಯಗಳಿಗೆ ಹೋಗಿ ಕೆಟ್ಟ ಗಾಳಿಯಿಂದ ರಕ್ಷಣೆ ಪಡೆಯುವ ಪ್ಲಾನ್ ಕೂಡ ಮಾಡುತ್ತಿದ್ದಾರೆ.
ಮಕ್ಕಳು & ವೃದ್ಧರಿಗೆ ಭಾರಿ ಸಮಸ್ಯೆ
ದೆಹಲಿಯಲ್ಲಿ ಎಕ್ಯೂಐ ಮಟ್ಟ ಅಂದ್ರೆ ಏರ್ ಕ್ವಾಲಿಟಿ ಇಂಡೆಕ್ಸ್ 400 ಆಸುಪಾಸು ಇತ್ತು, ಆದರೆ ಈಗ ಇದು ಮತ್ತಷ್ಟು ಕೈಮೀರಿ ಹೋಗುವ ಆತಂಕ ಎದುರಾಗಿದೆ. ಅದರಲ್ಲೂ ದೆಹಲಿಯ ಕೇಂದ್ರ ಭಾಗದಲ್ಲಿ ಹಾಗೂ ನೊಯ್ಡಾ ಸುತ್ತಮುತ್ತ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ, ಸರ್ಕಾರ ಕೂಡ ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮ ಜಾರಿ ಮಾಡುತ್ತಿದೆ.
ಏನೆಲ್ಲಾ ಕ್ರಮ ಕೈಗೊಂಡರೂ ವಾತಾವರಣ ಮಾತ್ರ ಸರಿ ಹೋಗುತ್ತಿಲ್ಲ, ಹಾಗೇ ಜನರು ನೂರಾರು ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಾ ಇದ್ದಾರೆ. ಪ್ರಮುಖವಾಗಿ ಮಕ್ಕಳು & ವೃದ್ಧರಿಗೆ ಇದೀಗ ದೆಹಲಿ ನಗರದ ಈ ವಿಷಗಾಳಿ ಸಾಕಷ್ಟು ಸಮಸ್ಯೆ ಮಾಡುತ್ತಿದೆ. ಹೊರಗಡೆ ಓಡಾಡುವವರು ಕಣ್ಣು ಹಾಗೂ ಮೂಗನ್ನೂ ಪ್ಯಾಕಿಂಗ್ ಮಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.












Click it and Unblock the Notifications