Axis My India Exit Poll: ದೆಹಲಿಯಲ್ಲಿ ಬಿಜೆಪಿಗೆ ಅಧಿಕಾರ ಖಚಿತ ಎಂದ ಸಮೀಕ್ಷೆ
ದೆಹಲಿ ವಿಧಾನಸಭಾ ಚುನಾವಣೆ ಮತದಾನ ಮುಕ್ತಾಯವಾಗಿದ್ದು ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ. ದೆಹಲಿಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹಲವು ಎಕ್ಸಿಟ್ ಪೋಲ್‌ಗಳು ಹೇಳಿವೆ, ಇದೀಗ ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ ಕೂಡ ಬಿಜೆಪಿಗೆ ಸಂತಸ ನೀಡಿದೆ. 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆ ತಿಳಿಸಿದೆ.
2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ ಬಿಜೆಪಿ 45-55 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತದೆ ಎಂದು ಪ್ರದೀಪ್ ಗುಪ್ತಾ ನೇತೃತ್ವದ ಗ್ರಾಹಕ ಡೇಟಾ ಗುಪ್ತಚರ ಕಂಪನಿಯ ಸಮೀಕ್ಷೆ ತಿಳಿಸಿದೆ.

ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆಯು ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಆಘಾತ ಕೊಟ್ಟಿದೆ. ದಶಕಗಳ ಕಾಲ ದೆಹಲಿಯಲ್ಲಿ ಆಡಳಿತ ನಡೆಸಿದ್ದ ಎಎಪಿ ಈ ಬಾರಿ ಭಾರಿ ಹಿನ್ನಡೆಯನ್ನು ಅನುಭವಿಸಲಿದ್ದು 15 ರಿಂದ 25 ಸ್ಥಾನಗಳಲ್ಲಿ ಮಾತ್ರ ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ.
ಕೇಜ್ರಿವಾಲ್ ಜನಪ್ರಿಯ ಸಿಎಂ
ಸಮೀಕ್ಷೆಯಲ್ಲಿ ಎಎಪಿಗೆ ಹಿನ್ನಡೆಯಾದರೂ ದೆಹಲಿ ಜನರು ಮಾತ್ರ ಅರವಿಂದ್ ಕೇಜ್ರಿವಾಲ್ ಅವರೇ ಸಿಎಂ ಆಗಬೇಕು ಎಂದು ಒಲವು ತೋರಿಸಿದ್ದಾರೆ. ಬಳಿಕ ಬಿಜೆಪಿಯ ಪರ್ವೇಶ್ ವರ್ಮಾ ಮತ್ತು ಮನೋಜ್ ತಿವಾರಿ ಅವರನ್ನು ಸಿಎಂ ಹುದ್ದೆಯಲ್ಲಿ ನೋಡಲು ಜನ ಇಷ್ಟಪಟ್ಟಿದ್ದಾರೆ.
ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಸಮೀಕ್ಷೆ ಪ್ರಕಾರ, ನವದೆಹಲಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಬಿಜೆಪಿ ಏಳು ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದ್ದು, ಆಮ್ ಆದ್ಮಿ ಪಕ್ಷ ಮೂರು ಕ್ಷೇತ್ರಗಳಲ್ಲಿ ಮಾತ್ರ ಗೆಲ್ಲಬಹುದು ಎಂದು ಹೇಳಿದೆ. ಅರವಿಂದ್ ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ.
ಈಶಾನ್ಯ ದೆಹಲಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಬಿಜೆಪಿ 6 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದ್ದು ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಎಎಪಿ ಗೆಲ್ಲಲಿದೆ ಎಂದು ತಿಳಿಸಿದೆ. ಆಗ್ನೇಯ ದೆಹಲಿ ಜಿಲ್ಲೆಯಲ್ಲಿ, ಬಿಜೆಪಿ ಮತ್ತು ಎಎಪಿ ತಲಾ ಐದು ಸ್ಥಾನಗಳನ್ನು ಗೆಲುವು ಸಾಧಿಸುವ ನಿರೀಕ್ಷೆ ಇದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.
ಬುಧವಾರ ಮತದಾನ ಮುಗಿದ ಬಳಿಕ ಹಲವು ಮಾಧ್ಯಮಗಳು, ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ತಿಳಿಸಿವೆ. ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದ ಎಎಪಿಗೆ ಈ ಸಮೀಕ್ಷೆಗಳು ಆಘಾತ ಕೊಟ್ಟಿದೆ. ಇನ್ನು ಕಾಂಗ್ರೆಸ್ ಇಲ್ಲಿ ಆಟಕ್ಕೂ ಇಲ್ಲ ಲೆಕ್ಕಕ್ಕೂ ಇಲ್ಲ ಎಂದು ಸಮೀಕ್ಷೆಗಳು ಹೇಳಿದ್ದು 0-1 ಕ್ಷೇತ್ರದಲ್ಲಿ ಗೆಲ್ಲಬಹುದು ಎಂದು ತಿಳಿಸಿವೆ.












Click it and Unblock the Notifications