Delhi Pollution: ಗಬ್ಬೆದ್ದ ಗಾಳಿಯಿಂದ ಉಸಿರಾಟದ ಸಮಸ್ಯೆ!
ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯದ ಪ್ರಮಾಣದ ಹೆಚ್ಚಾಗ್ತಿದೆ. ಅದರಲ್ಲೂ ಚಳಿಗಾಲದಲ್ಲಿ ಈ ಪ್ರದೇಶ ಅಕ್ಷರಶಃ ನರಕವಾಗಿ ಬದಲಾಗುತ್ತಿತ್ತು. ಆದರೆ ಈಗ ಬೇಸಿಗೆ ಹೊತ್ತಲ್ಲಿ ದೆಹಲಿ ಗಾಳಿಯ ಗುಣಮಟ್ಟ 400ಕ್ಕೆ ಕುಸಿತ ಕಂಡಿದೆ. ಗಾಳಿಯಲ್ಲಿನ ಧೂಳಿನ ಕಣಗಳು ಹೆಚ್ಚಾಗಿ ದಿಲ್ಲಿ ಜನರ ಆರೋಗ್ಯ ಹಾಳಾಗಿರುವ ಹೊತ್ತಲ್ಲೇ, ಗಾಳಿಯ ಗುಣಮಟ್ಟ ಕೂಡ ಕಳಪೆಯಾಗಿದೆ.
ಕಳೆದ 3 ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ದೆಹಲಿಯ ಗಾಳಿ ಗುಣಮಟ್ಟ ಕುಸಿದಿದೆ ಎಂಬ ವರದಿ ತೀವ್ರ ಆತಂಕ ಸೃಷ್ಟಿಮಾಡಿದೆ. ಇದು ದೆಹಲಿಯ ಕೇಜ್ರಿವಾಲ್ ಸರ್ಕಾರಕ್ಕೆ ದೊಡ್ಡ ಸವಾಲು ತಂದಿದೆ. ಇಷ್ಟಾದರೂ ಪರಿಸ್ಥಿತಿ ನಿಭಾಯಿಸಲು ಪರದಾಟ ಮುಂದುವರಿದಿದ್ದು, ದೆಹಲಿಯ ರಸ್ತೆಗಳಲ್ಲಿ ದಟ್ಟವಾದ ಧೂಳು ಮಿಶ್ರಿತ ಹೊಗೆ ಆವರಿಸಿದೆ. ಜನರು ಈ ನರಕದಿಂದ ಮುಕ್ತಿ ಸಿಕ್ಕರೆ ಸಾಕಪ್ಪ ಎಂದು ಪರದಾಡುತ್ತಿದ್ದಾರೆ. ನಿನ್ನೆಯಿಂದ ದೆಹಲಿ ವಾತಾವರಣ ತೀವ್ರವಾಗಿ ಕುಸಿದಿದ್ದು, ಅಲರ್ಜಿ & ಅಸ್ತಮಾ ಇರುವವರು ಪರದಾಡುವಂತಾಗಿದೆ.

ನೀರು ಸಿಂಪಡಿಸಿದ ಕೇಜ್ರಿ ಸರ್ಕಾರ
ಭರ್ಜರಿಯಾಗಿ ಧೂಳು ತುಂಬಿಕೊಂಡಿರುವ ಕಾರಣ ಅದನ್ನ ನಿಯಂತ್ರಿಸಲು ದೆಹಲಿ ಆಡಳಿತ ನಾನಾ ರೀತಿಯ ಮಾರ್ಗ ಕಂಡುಕೊಂಡಿದೆ. ಅದ್ರಲ್ಲೂ ಯಂತ್ರಗಳ ಮೂಲಕ ನೀರನ್ನ ಸಿಂಪಡನೆ ಮಾಡಿ, ವಾತಾವರಣವನ್ನು ನಿಯಂತ್ರಿಸಲು ಯತ್ನಿಸಲಾಗುತ್ತಿದೆ. ಆದರೆ ಏನೇ ಮಾಡಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಾಗಿ ಇನ್ನೂ ಹೆಚ್ಚಾಗುತ್ತಿರುವ ಧೂಳಿನ ಕಣಗಳು, ದೆಹಲಿಯಲ್ಲಿ ಜನ ಉಸಿರಾಡುವುದಕ್ಕೂ ಯೋಚಿಸುವ ಪರಿಸ್ಥಿತಿ ತಂದೊಡ್ಡಿದೆ. ಇದರ ಜೊತೆಗೆ ಮಕ್ಕಳಲ್ಲೂ ಸಾಕಷ್ಟು ಆರೋಗ್ಯ ಸಮಸ್ಯೆಗಳು ಎದುರಾಗಿದ್ದು, ಪೋಷಕರಿಗೆ ತಮ್ಮ ಮಕ್ಕಳ ಆರೋಗ್ಯ ಜೋಪಾನ ಮಾಡುವುದೇ ಸವಾಲಾಗಿದೆ.
ಧೂಳಿನ ಬಿರುಗಾಳಿಗೆ ತತ್ತರಿಸಿದ್ದ ದೆಹಲಿ
ನಿನ್ನೆ ದೆಹಲಿಯಲ್ಲಿ ಭೀಕರ ಧೂಳಿನ ಬಿರುಗಾಳಿ ಪರಿಣಾಮ ದಟ್ಟ ದೂಳು ಆವರಿಸಿ ಗಾಳಿಯ ಗುಣಮಟ್ಟ ಅತ್ಯಂತ ಕೆಳಮಟ್ಟಕ್ಕೆ ಕುಸಿದಿತ್ತು. ಇಂದು ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರೂ, ಸಂಪೂರ್ಣವಾಗಿ ಹಿಡಿತಕ್ಕೆ ಬಂದಿದೆ. ಈ ಹಿನ್ನೆಲೆ ಮುಂದೆ ಇರುವ ವ್ಯಕ್ತಿಯನ್ನ ಇನ್ನೊಬ್ಬ ವ್ಯಕ್ತಿ ಗುರುತಿಸಲು ಆಗದ ಸ್ಥಿತಿ ನಿರ್ಮಾಣ ಆಗಿತ್ತು. ಗಂಟೆಗೆ 30, 35 ಕಿಮೀ ವೇಗದಲ್ಲಿ ಗಾಳಿ ಬೀಸಿದ್ದರಿಂದ ಮನುಷ್ಯರಿಗೆ ಉಸಿರಾಡಲು ಗಾಳಿ ವ್ಯವಸ್ಥೆ ಇಲ್ಲದಂತಾಗಿತ್ತು. ದೂಳು ಮೇಲೆದ್ದು ವಾತಾವರಣ ಕಲುಷಿತವಾಗಿ ರಾಷ್ಟ್ರ ರಾಜಧಾನಿ ಜನ ಪರದಾಡಿದರು, ಈಗಲೂ ಗಾಳಿಯ ಗುಣಮಟ್ಟ ಚೇತರಿಕೆ ಕಂಡಿಲ್ಲ.

ಚಳಿಗಾಲದ ನರಕ ಬೇಸಿಗೆಯಲ್ಲೇ ಪ್ರತ್ಯಕ್ಷ!
ಇಂದು ದೆಹಲಿಯಲ್ಲಿ ವಾಯು ಗುಣಮಟ್ಟ 400ಕ್ಕೆ ಕುಸಿತ ಕಂಡಿ ಅಂದರೆ ನೀವೆ ಅಲ್ಲಿನ ಪರಿಸ್ಥಿತಿ ಲೆಕ್ಕಹಾಕಿ. ಸಾಮಾನ್ಯವಾಗಿ ಚಳಿಗಾಲದಲ್ಲಿ ದೆಹಲಿಯನ್ನ ನರಕ ಎಂದು ಕರೆಯುವುದು ಮಾಮೂಲು. ಯಾಕಂದ್ರೆ ಹೊಗೆ & ಮತ್ತು ಮಂಜು ಸೇರಿ ಹೂಂಜು ನಿರ್ಮಾಣವಾಗಿ, ದೆಹಲಿ ಜನರನ್ನ ಇನ್ನಿಲ್ಲದ ರೀತಿ ಬಾಧಿಸುತ್ತದೆ. ಎಷ್ಟೋ ಜನ ಚಳಿಗಾಲ ಬಂತು ಅಂದರೆ ಸಾಕು ದೆಹಲಿ ಬಿಟ್ಟು ಓಡಿ ಬಿಡುತ್ತಾರೆ. ಅದ್ರಲ್ಲೂ ಡಿಸೆಂಬರ್ ಸಂದರ್ಭದಲ್ಲಿ ಅಸ್ತಮಾ ಮತ್ತು ಡಸ್ಟ್ ಅಲರ್ಜಿ ಇದ್ದವರು ದೆಹಲಿಯಲ್ಲಿ ಇರಲ್ಲ. ಆದರೆ ಈ ಬಾರಿ ಬೇಸಿಗೆಯಲ್ಲೂ ನರಕ ನೋಡ್ತಿದ್ದಾರೆ.
ಧೂಳಿನ ಪ್ರಮಾಣ ವಾತಾವರಣದಲ್ಲಿ ಹರಡಿದಾಗ ಮನುಷ್ಯರು ಉಸಿರಾಡುವ ವೇಳೆ ದೂಳಿನ ಕಣ ಶ್ವಾಸಕೋಶಕ್ಕೆ ಸೇರಿ ಸಮಸ್ಯೆ ಎದುರಾಗುತ್ತೆ. ಇದರಿಂದ ಉಸಿರಾಟ ಸಮಸ್ಯೆ ಉಂಟಾಗಿ ಅಸ್ತಮಾ & ಶ್ವಾಸನಾಳ ಉರಿಯೂತ ಸೇರಿ ಅಲರ್ಜಿಯಂಥ ಸಮಸ್ಯೆ ತಲೆದೋರಬಹುದು ಎಂದು ತಜ್ಞರು ನಿನ್ನೆ ತಾನೆ ಎಚ್ಚರಿಕೆ ನೀಡಿದ್ದರು. ಆದರೆ ಇಂದು ಮತ್ತೆ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ನೆಲಕ್ಕಚ್ಚಿದೆ. ಅತ್ತ 40 ಡಿಗ್ರಿ ದಾಟುತ್ತಿರುವ ವಾತಾವರಣದ ಬಿಸಿಲು ಮತ್ತೊಂದ್ಕಡೆ ಹೊರ ಬಂದರೆ ಎಲ್ಲೆಲ್ಲೂ ತುಂಬಿ ತುಳುಕುತ್ತಿರುವ ಧೂಳು. ದೆಹಲಿ ಜನರ ಬದುಕು ಕೂಡ ಈ ಧೂಳಿನ ಜೊತೆ ಧೂಳ್ ಧೂಳ್ ಆಗಿ ಹೋಗಿದೆ.












Click it and Unblock the Notifications