ತಿಹಾರ್ ಜೈಲಿನಲ್ಲಿ ದೆಹಲಿ ಕೋರ್ಟ್ ಶೂಟೌಟ್ ಆರೋಪಿಯ ಹತ್ಯೆ!
ನವದೆಹಲಿ, ಮೇ 01; ನವದೆಹಲಿಯ ರೋಹಿಣಿ ಕೋರ್ಟ್ ಶೂಟೌಟ್ ಪ್ರಕರಣದ ಆರೋಪಿ ಮತ್ತು ಗ್ಯಾಂಗ್ ಸ್ಟಾರ್ ಟಿಲ್ಲೂ ತೇಜ್‌ಪೂರಿಯಾ ಹತ್ಯೆ ಮಾಡಲಾಗಿದೆ. ಎದುರಾಳಿ ಗ್ಯಾಂಗ್‌ನವರು ದೆಹಲಿಯ ತಿಹಾರ್ ಜೈಲಿನಲ್ಲಿ ಈ ಹತ್ಯೆಯನ್ನು ಮಾಡಿದ್ದಾರೆ.
ದೆಹಲಿಯ ತಿಹಾರ್ ಜೈಲಿನಲ್ಲಿ ಟಿಲ್ಲೂ ತೇಜ್‌ಪೂರಿಯಾ ಅಲಿಯಾಸ್ ಸುನೀಲ್ ಮಾನ್ ಹತ್ಯೆ ಮಾಡಲಾಗಿದೆ ಎಂದು ಎನ್‌ಡಿಟಿವಿ ಮಂಗಳವಾರ ಬೆಳಗ್ಗೆ ವರದಿ ಮಾಡಿದೆ. ಗ್ಯಾಂಗ್ ಸ್ಟಾರ್ ಯೋಗೇಶ್ ತುಂಡಾ ಮತ್ತು ಆತನ ಸಹಚರರು ಈ ಹತ್ಯೆಯನ್ನು ನಡೆಸಿದ್ದಾರೆ.

ಮಂಗಳವಾರ ಮುಂಜಾನೆ ಯೋಗೇಶ್ ತುಂಡಾ ಮತ್ತು ಆತನ ಸಹಚರರು ಟಿಲ್ಲೂ ತೇಜ್‌ಪೂರಿಯಾ ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿದರು. ಗಾಯಗೊಂಡಿದ್ದ ಅವರನ್ನು ಪಂಡಿತ್ ದೀನ್ ದಯಾಳ್ ಆಸ್ಪತ್ರೆಗೆ ದಾಖಲು ಮಾಡಲಾಯಿತು, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ಶೂಟೌಟ್ ಪ್ರಕರಣದ ಆರೋಪಿ; ಟಿಲ್ಲೂ ತೇಜ್‌ಪೂರಿಯಾ ಸೆಪ್ಟೆಂಬರ್ 24,2021ರಲ್ಲಿ ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ನಡೆದ ಶೂಟೌಟ್ ಪ್ರಕರಣದ ಆರೋಪಿ. ಕೋರ್ಟ್ ಆವರಣದಲ್ಲಿ ನಡೆದಿದ್ದ ಶೂಟೌಟ್‌ನಲ್ಲಿ ಗ್ಯಾಂಗ್ ಸ್ಟಾರ್ ಜಿತೇಂದ್ರ ಗೋಗಿ ಮತ್ತು ಇತರ ಮೂವರು ಸಾವನ್ನಪ್ಪಿದ್ದರು. ಕೋರ್ಟ್‌ನ 206ನೇ ಸಂಖ್ಯೆ ಕೊಠಡಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಜೀತೇಂದ್ರ ಗೋಗಿ ಕರೆದುಕೊಂಡು ಬರುವಾಗ ಶೂಟೌಟ್ ನಡೆದಿತ್ತು.

ವಕೀಲರ ಧಿರಿಸು ತೊಟ್ಟು ಬಂದಿದ್ದ ದಾಳಿಕೋರರು ಜಿತೇಂದ್ರ ಗೋಗಿ ಮತ್ತು ಇತರರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಸ್ಥಳದಲ್ಲಿಯೇ ಎಲ್ಲರೂ ಮೃತಪಟ್ಟಿದ್ದರು. ದೆಹಲಿ ವಿಶೇಷ ಘಟಕದ ಪೊಲೀಸರು ಗುಂಡಿನ ದಾಳಿ ನಡೆಸಿದ ಇಬ್ಬರನ್ನು ಹತ್ಯೆ ಮಾಡಿದ್ದರು. ಜಿತೇಂದ್ರ ಗೋಗಿ ಮತ್ತು ಟಿಲ್ಲೂ ಗ್ಯಾಂಗ್ ನಡುವೆ ಈ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣ ಆರೋಪಿಗಳಾದ ಗೋಗಿ ಹಾಗೂ ಟಿಲ್ಲೂ ಗ್ಯಾಂಗ್‌ನ ಸದಸ್ಯರು ತಿಹಾರ್ ಜೈಲಿನಲ್ಲಿದ್ದರು.
ಮಂಗಳವಾರ ಗ್ಯಾಂಗ್ ಸ್ಟಾರ್ ಯೋಗೇಶ್ ತುಂಡಾ ಮತ್ತು ಆತನ ಸಹಚರರು ಟಿಲ್ಲೂ ತೇಜ್‌ಪೂರಿಯಾ ಮೇಲೆ ದಾಳಿ ಮಾಡಿದ್ದಾರೆ. ಎದುರಾಳಿ ಗ್ಯಾಂಗ್‌ನ ಇಬ್ಬರು ಒಂದೇ ಜೈಲಿನಲ್ಲಿರುವ ಕಾರಣ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಆದರೂ ಸಹ ಇಂದು ಮುಂಜಾನೆ ಜೈಲಿನಲ್ಲಿಯೇ ಹತ್ಯೆ ನಡೆದಿದೆ.
30ಕ್ಕೂ ಅಧಿಕ ಪ್ರಕರಣದಲ್ಲಿ ಆರೋಪಿಯಾಗಿದ್ದ ಜಿತೇಂದ್ರ ಗೋಗಿ ಕೊಲ್ಲಲು ಟಿಲ್ಲೂ ತೇಜ್‌ಪೂರಿಯಾ ಫೋನ್ ಮೂಲಕವೇ ಸೂಚನೆ ನೀಡಿದ್ದ ಎಂಬುದು ಆರೋಪವಾಗಿತ್ತು. ಈ ದಾಳಿಯ ಸಂಚು ರೂಪಿಸಿದ್ದ ಟಿಲ್ಲೂ ತೇಜ್‌ಪೂರಿಯಾ ಫೋನ್ ಮೂಲಕ ಗುಂಡಿನ ದಾಳಿಯ ಲೈವ್ ಅಪ್‌ಡೇಟ್‌ಗಳನ್ನು ಪಡೆದಿದ್ದ ಎಂಬುದು ಆರೋಪವಾಗಿತ್ತು.
2016ರಲ್ಲಿ ಜಿತೇಂದ್ರ ಗೋಗಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ, ಟಿಲ್ಲೂ ತೇಜ್‌ಪೂರಿಯಾರನ್ನು ಕೊಲ್ಲುವುದಾಗಿ ಹೇಳಿದ್ದ. ಟಿಲ್ಲೂ ತೇಜ್‌ಪೂರಿಯಾ ಮತ್ತು ಜಿತೇಂದ್ರ ಗೋಗಿ ನವದೆಹಲಿಯ ಇಬ್ಬರು ಪ್ರಭಾವಿ ರೌಡಿಗಳಾಗಿದ್ದರು. ಇಬ್ಬರ ನಡುವೆ ಆಗಾಗ ಗ್ಯಾಂಗ್ ವಾರ್ ನಡೆಯುತ್ತಿತ್ತು.
2021ರಲ್ಲಿಯೇ ಟಿಲ್ಲೂ ತೇಜ್‌ಪೂರಿಯಾ ಹತ್ಯೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಜಿತೇಂದ್ರ ಗೋಗಿ ಹತ್ಯೆಯ ಬಳಿಕ ಎರಡು ಗ್ಯಾಂಗ್‌ಗಳ ನಡುವೆ ಪ್ರತಿದಾಳಿ ನಡೆಯಲಿದೆ ಎಂದು ಪೊಲೀಸರು ಅಂದಾಜಿಸಿದ್ದರು. ಆದ್ದರಿಂದ ಆರೋಪಿಗಳು ಇರುವ ಜೈಲಿನಲ್ಲಿಯೂ ಬಿಗಿ ಭದ್ರತೆ ಕೈಗೊಂಡಿದ್ದರು.
ದೆಹಲಿಯ ರೌಡಿ ಗ್ಯಾಂಗ್‌ಗಳು ಪಂಜಾಬ್, ಹರ್ಯಾಣ, ರಾಜಸ್ಥಾನದ ಗ್ಯಾಂಗ್‌ಗಳ ಜೊತೆ ಕೈ ಜೋಡಿಸಿದ್ದವು. ಆ ಮೂಲಕ ಮತ್ತಷ್ಟ ಬಲವನ್ನು ಪಡೆದಿದ್ದವು. ಜಿತೇಂದ್ರ ಗೋಗಿ ಹತ್ಯೆ ಪ್ರಕರಣದ ಬಳಿಕ ಟಿಲ್ಲೂ ತೇಜ್‌ಪೂರಿಯಾರನ್ನು ಪೊಲೀಸರು ಮಂಡೋಲಿ ಜೈಲಿನಲ್ಲಿ ವಿಚಾರಣೆ ನಡೆಸಿದ್ದರು. ಜೈಲಿನಿಂದಲೇ ಆತ ಗೋಗಿ ಹತ್ಯೆಗೆ ಸೂಚನೆ ಕೊಟ್ಟಿದ್ದ ಎಂಬುದು ದೂರವಾಣಿ ಕರೆಗಳ ಮಾಹಿತಿಯಲ್ಲಿ ಬೆಳಕಿಗೆ ಬಂದಿತ್ತು. ಬಳಿಕ ಟಿಲ್ಲೂವನ್ನು ತಿಹಾರ್ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.












Click it and Unblock the Notifications