Delhi Chief Minister: ದೆಹಲಿ ಸಿಎಂ ಘೋಷಣೆ, ವೀಕ್ಷಕರ ನೇಮಕ
ನವದೆಹಲಿ, ಫೆಬ್ರವರಿ 19: ದೆಹಲಿ ವಿಧಾನಸಭೆ ಚುನಾವಣೆ 2025ರ ಫಲಿತಾಂಶ ಪ್ರಕಟವಾಗಿದೆ. ರಾಜ್ಯದಲ್ಲಿ ಹೊಸ ಸರ್ಕಾರವನ್ನು ಬಿಜೆಪಿ ರಚನೆ ಮಾಡಲಿದೆ. 27 ವರ್ಷಗಳ ಬಳಿಕ ಬಿಜೆಪಿಗೆ ರಾಷ್ಟ್ರ ರಾಜಧಾನಿಯ ಅಧಿಕಾರ ಸಿಕ್ಕಿದೆ. ಮುಖ್ಯಮಂತ್ರಿ ಯಾರು? ಎಂಬುದು ಬುಧವಾರ ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಘೋಷಣೆಯಾಗಲಿದೆ.
70 ಸದಸ್ಯ ಬದಲ ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 48, ಎಎಪಿ 22 ಸ್ಥಾನಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಸತತ ಮೂರನೇ ಬಾರಿ ಯಾವುದೇ ಸ್ಥಾನಗಳಿಸದೇ ಮುಖಭಂಗವನ್ನು ಅನುಭವಿಸಿದೆ. ಐತಿಹಾಸಿಕ ಸಾಧನೆ ಮಾಡಿರುವ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲಿದೆ.

ದೆಹಲಿ ವಿಧಾನಸಭೆಯ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಬುಧವಾರ ಸಂಜೆ 6 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಈ ಸಭೆಗೆ ಕೇಂದ್ರ ಬಿಜೆಪಿ ರವಿಶಂಕರ್ ಪ್ರಸಾದ್ ಮತ್ತು ಒ. ಪಿ. ಧನ್ಕರ್ ಅವರನ್ನು ವೀಕ್ಷಕರನ್ನಾಗಿ ನೇಮಕ ಮಾಡಿದೆ. ವೀಕ್ಷಕರ ಸಮ್ಮುಖದಲ್ಲಿ ಹೊಸ ಮುಖ್ಯಮಂತ್ರಿ ಘೋಷಣೆ ಮಾಡಲಾಗುತ್ತದೆ.
ಪ್ರಮಾಣ ವಚನಕ್ಕೆ ಸಿದ್ಧತೆ: ಗುರುವಾರ ಮಧ್ಯಾಹ್ನ 4.30ಕ್ಕೆ ರಾಮ್ ಲೀಲಾ ಮೈದಾನದಲ್ಲಿ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಬಿಜೆಪಿ ನಾಯಕರಾದ ತರುಣ್ ಚುಗ್ ಮತ್ತು ವಿನೋದ್ ತಾವ್ಡೆ ಪ್ರಮಾಣ ವಚನ ಸಮಾರಂಭದ ವ್ಯವಸ್ಥೆ ಮಾಡುತ್ತಿದ್ದಾರೆ. ಆದರೆ ಯಾರು ಮುಖ್ಯಮಂತ್ರಿ ಎಂಬುದು ಇನ್ನೂ ಘೋಷಣೆಯಾಗಿಲ್ಲ.
ಮಹಿಳಾ ಅಭ್ಯರ್ಥಿಯನ್ನು ದೆಹಲಿ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿದೆ. ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ರೇಖಾ ಗುಪ್ತಾ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ರೇಖಾ ಗುಪ್ತಾ ಶಾಲಿಮರ್ ಬಾಗ್ ಕ್ಷೇತ್ರದ ಬಿಜೆಪಿ ಶಾಸಕಿ.
ಈ ಬಾರಿಯ ಚುನಾವಣೆಯಲ್ಲಿ ಅವರು 29,529 ಮತಗಳ ಅಂತರದಿಂದ ಎಎಪಿಯ ಬಂಧನ್ ಕುಮಾರಿ ಸೋಲಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದ ರೇಖಾ ಗುಪ್ತಾ ಮುಖ್ಯಮಂತ್ರಿಯಾಗಬಹುದು ಎಂಬ ಸುದ್ದಿಗಳು ಹಬ್ಬಿದೆ.
ನವದೆಹಲಿ ಕ್ಷೇತ್ರದಲ್ಲಿ ಎಎಪಿ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಸೋಲಿಸಿದ ಪರ್ವೇಶ್ ವರ್ಮಾ ಹೆಸರು ಸಹ ಮುಖ್ಯಮಂತ್ರಿ ಹುದ್ದೆಗೆ ಕೇಳಿ ಬರುತ್ತಿದೆ.
ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.
ಪ್ರಮಾಣ ವಚನ ಸಮಾರಂಭದಲ್ಲಿ 30,000 ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 5 ಸಾವಿರ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. 10 ಪ್ಯಾರಾ ಮಿಲಿಟರಿ ಪಡೆಗಳನ್ನು ನಿಯೋಜಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್ ಶಾ, ಹಲವು ಕೇಂದ್ರ ಸಚಿವರು ಪ್ರಮಾಣ ವಚನ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಮುಖ್ಯಮಂತ್ರಿ ಹುದ್ದೆಗೆ ಸತೀಶ್ ಉಪಾಧ್ಯಾಯ, ಆಶಿಶ್ ಸೂದ್, ಜಿತೇಂದ್ರ ಮಹಾಜನ್, ವಿಜೇಂದ್ರ ಗುಪ್ತಾ, ಅಭಯ್ ವರ್ಮಾ ಮತ್ತು ಶಿಖಾ ರೈ ಅವರ ಹೆಸರುಗಳು ಸಹ ಕೇಳಿ ಬರುತ್ತಿದೆ. 27 ವರ್ಷದ ಬಳಿಕ ರಾಷ್ಟ್ರ ರಾಜಧಾನಿ ಅಧಿಕಾರ ಹಿಡಿಯಲಿರುವ ಬಿಜೆಪಿ ಯಾರನ್ನು ಸಿಎಂ ಮಾಡಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications