Get Updates
Get notified of breaking news, exclusive insights, and must-see stories!

ದೆಹಲಿ ಚುನಾವಣೆ: ಸಮೀಕ್ಷೆಗಳು ಏನೇ ಹೇಳಲಿ..ಇಂದಿನ ಫಲಿತಾಂಶವೇ ಅಂತಿಮ!

ನವದೆಹಲಿ, ಫೆಬ್ರವರಿ 08: ಇತ್ತೀಚೆಗಿನ ರಾಜಕೀಯ ಬೆಳವಣಿಗೆಯಲ್ಲಿ ನಮ್ಮ ದೇಶದ ಯಾವುದೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಇಡೀ ದೇಶದ ಜನ ಅತ್ತ ಕುತೂಹಲ ಮತ್ತು ಅಚ್ಚರಿಯ ನೋಟ ಹರಿಸುವುದು ಮಾಮೂಲಿಯಾಗಿದೆ. ಇದಕ್ಕೆ ಕಾರಣವಾಗಿರುವುದು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ದಂಡಯಾತ್ರೆ. ದೇಶದ ಎಲ್ಲ ರಾಜ್ಯಗಳಲ್ಲೂ ಪ್ರಾಬಲ್ಯ ಸಾಧಿಸಬೇಕೆನ್ನುವ ಹಠಕ್ಕೆ ಬಿದ್ದಿರುವ ಬಿಜೆಪಿ ನಾಯಕರು ಪಕ್ಷದ ಅಸ್ತಿತ್ವವೇ ಇಲ್ಲದ ರಾಜ್ಯಗಳಲ್ಲಿಯೂ ನಿಧಾನವಾಗಿ ಖಾತೆ ತೆರೆಯಲಾರಂಭಿಸಿದ್ದರೆ, ಬಹುಕಾಲ ದೇಶವನ್ನಾಳಿದ ಕಾಂಗ್ರೆಸ್ ರಾಜ್ಯಗಳ ಮೇಲೆ ಹಿಡಿತ ಕಳೆದುಕೊಳ್ಳುತ್ತಿರುವುದು ಎದ್ದು ಕಾಣಿಸುತ್ತಿದೆ.

ಈ ನಡುವೆ ದೆಹಲಿ ಗದ್ದುಗೆಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಹಠಕ್ಕೆ ಬಿದ್ದಂತೆ ಹೋರಾಟ ನಡೆಸಿದ್ದವು. ಇದರ ಪರಿಣಾಮಗಳು ಹೇಗಿರಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳುವ ಕ್ಷಣಗಳು ಹತ್ತಿರವಾಗುತ್ತಿವೆ. ಫೆ.5ರಂದು ದೆಹಲಿ ವಿಧಾನಸಭೆಗೆ ಚುನಾವಣೆಗಳು ನಡೆದಿದ್ದವು. ಅತ್ತ ಮತದಾನ ಮುಗಿಯುತ್ತಿದ್ದಂತೆಯೇ ಮಾಧ್ಯಮಗಳಲ್ಲಿ ಚುನಾವಣಾ ಸಮೀಕ್ಷೆಗಳು ಒಂದರ ಮೇಲೊಂದರಂತೆ ಹೊರ ಬರಲಾರಂಭಿಸಿದವು. ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡು ಮತ ಪಡೆಯುವ ಸಲುವಾಗಿ ಹತ್ತಾರು ಸರ್ಕಸ್ ಗಳನ್ನು ಮಾಡಿ, ತಂತ್ರಗಳನ್ನು ಉಪಯೋಗಿಸಿಕೊಂಡು ಈ ಸಲ ಗೆಲ್ಲುವುದು ನಾವೇ ಎನ್ನುವ ಹೊತ್ತಿಗೆ ಸಮೀಕ್ಷೆಗಳು ಕಾಂಗ್ರೆಸ್ ಮತ್ತು ಎಎಪಿ ನಾಯಕರಿಗೆ ಶಾಕ್ ನೀಡಿವೆ.

Delhi Assembly Elections 2025 Poll Results and Insights

ಇತ್ತೀಚೆಗಿನ ಸಮೀಕ್ಷೆಗಳು ಅಂದು ಕೊಂಡಂತೆ ಆಗದ ಕಾರಣದಿಂದಾಗಿ ಸಮೀಕ್ಷೆಗಳಲ್ಲಿ ಹೆಚ್ಚು ಮತ್ತು ಕಡಿಮೆ ಸ್ಥಾನ ಪಡೆದ ಇಬ್ಬರಿಗೂ ಆತಂಕವಂತು ಇದ್ದೇ ಇದೆ. ಕಳೆದ ಎರಡು ಅವಧಿಯಿಂದಲೂ ಗೆಲುವನ್ನಷ್ಟೇ ನೋಡಿಕೊಂಡು ಬಂದಿರುವ ಎಎಪಿ ನಾಯಕರಿಗೆ ಸಮೀಕ್ಷೆಗಳು ಭಯ, ಆಕ್ರೋಶ ಎಲ್ಲವನ್ನು ತರಿಸಿವೆ. ಹೀಗಾಗಿ ಎಎಪಿ ಸಂಸ್ಥಾಪಕ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಸಮೀಕ್ಷೆಗಳೆಲ್ಲವನ್ನು ನಿವಾಳಿಸಿ ಆಚೆಗೆ ಎಸೆದು ಗೆಲುವು ನಮ್ಮದೇ ಎಂಬ ವಿಶ್ವಾಸದಲ್ಲಿದ್ದಾರೆ. ಹಾಗೇನಾದರೂ ಆದರೆ ಅದು ಸಂತಸ ತರುವ ವಿಚಾರವೇ.

ಕಾಂಗ್ರೆಸ್ ವಿರುದ್ಧವೇ ಹುಟ್ಟಿದ ಎಎಪಿ

ದೆಹಲಿ ವಿಧಾನಸಭೆಯಲ್ಲಿ 70ಸ್ಥಾನಗಳಿದ್ದು ಅಧಿಕಾರ ಪಡೆಯಲು ಮ್ಯಾಜಿಕ್ ಸಂಖ್ಯೆ 36 ಬೇಕಾಗುತ್ತದೆ. ಆದರೆ ಸಮೀಕ್ಷೆಗಳ ಪೈಕಿ ಹೆಚ್ಚಿನವು ಮ್ಯಾಜಿಕ್ ಸಂಖ್ಯೆಯನ್ನು ಬಿಜೆಪಿ ದಾಟುತ್ತದೆ ಎಂದು ಹೇಳಿವೆ. ಕೆಲವು ಎಎಪಿಗೆ ಮತ್ತೆ ಅಧಿಕಾರ ಸಿಗುತ್ತದೆ ಎಂಬ ಸಂದೇಶ ರವಾನಿಸಿವೆ. ಆದರೆ ಯಾವುದೇ ಸಮೀಕ್ಷೆಗಳು ಕಾಂಗ್ರೆಸ್ ನ್ನು ಎರಡು ಅಂಕಿಗೆ ಕೊಂಡೊಯ್ಯಲಿಲ್ಲ. ಆದರೂ ನಾವು ಹೆಚ್ಚಿನ ಸ್ಥಾನವನ್ನು ಪಡೆದೇ ಪಡೆಯುತ್ತೇವೆ ಎಂಬ ವಿಶ್ವಾಸವನ್ನು ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುತ್ತಿದ್ದಾರೆ. ಹಾಗೆಯೇ ಚುನಾವಣೆ ಬಳಿಕ ಅರವಿಂದ್ ಕೇಜ್ರಿವಾಲ್ ಪರ ಸಹಾನುಭೂತಿ ತೋರಿಸುತ್ತಿದ್ದಾರೆ. ಇಲ್ಲಿ ಎರಡಂಕಿ ದಾಟಿದರೆ ಕಾಂಗ್ರೆಸ್ ಅಗತ್ಯತೆ ಎಎಪಿಗೂ ಕಂಡು ಬರಬಹುದೇನೋ?

Delhi Assembly Elections 2025 Poll Results and Insights

ಹಾಗೆನೋಡಿದರೆ ಎಎಪಿ ದೆಹಲಿ ಗದ್ದುಗೆಯನ್ನು ಹಿಡಿದಿದ್ದೇ ಕಾಂಗ್ರೆಸ್ ಪಕ್ಷದ ವಿರುದ್ಧ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ವಿರುದ್ಧ ಹೋರಾಟದ ಹಿನ್ನಲೆಯಲ್ಲಿ ಹುಟ್ಟಿಕೊಂಡ ಎಎಪಿ ಭ್ರಷ್ಟಾಚಾರವನ್ನು ಪೊರಕೆಯಿಂದ ಗುಡಿಸಿ ಹೊರಗೆ ಹಾಕುವ ವಾಗ್ದಾನ ಮಾಡಿತ್ತು. ಕೇಜ್ರಿವಾಲ್ ಅವರ ಆಲೋಚನೆಗಳು ಮತ್ತು ಹೋರಾಟಗಳು ಯುವ ಸಮೂಹವನ್ನು ಸೆಳೆದಿತ್ತು. ಜನಕ್ಕೆ ಎಎಪಿ ಕಡಿಮೆ ಅವಧಿಯಲ್ಲಿ ಬಹುಬೇಗವೇ ಯುವಜನತೆಗೆ ಇಷ್ಟವಾಗಿ ಹೋಯಿತು. ಬೇರೆ ರಾಜಕೀಯ ಪಕ್ಷಗಳಿಗಿಂತ ಭಿನ್ನತೆ ಹೊಂದಿದ್ದ ಎಎಪಿಬಳಿಕ ಅಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಅವಕಾಶವನ್ನೇ ನೀಡಿರಲಿಲ್ಲ.

ಜನರ ವಿಶ್ವಾಸ ಉಳಿಸಿಕೊಳ್ಳದ ಕೇಜ್ರಿವಾಲ್

ಮೊದಲ ಅವಧಿ (2015)ಯಲ್ಲಿ 70 ಸ್ಥಾನಗಳ ಪೈಕಿ 67 ಸ್ಥಾನಗಳನ್ನು ಗೆದ್ದು ಬಿಜೆಪಿ ಮತ್ತು ಕಾಂಗ್ರೆಸ್ ನ್ನು ಗುಡಿಸಿ ಸ್ವಚ್ಛ ಮಾಡಿತ್ತು. ಈ ವೇಳೆ ಶೇಕಡವಾರು 54ರಷ್ಟು ಮತಪ್ರಮಾಣವಿತ್ತು. ಆದರೆ ಮೊದಲನೆ ಅವಧಿಗೆ ಹೋಲಿಸಿದರೆ 2ನೇ ಅವಧಿಗೆ 2020ಕ್ಕೆ ಚುನಾವಣೆಗೆ ಹೋದಾಗ ಮತಪ್ರಮಾಣ 53ಕ್ಕೆ ಇಳಿಯಿತು. ಜತೆಗೆ 70 ಸ್ಥಾನಗಳಲ್ಲಿ 62 ಸ್ಥಾನವನ್ನು ಗೆದ್ದು 8 ಸ್ಥಾನಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿತು. ಮೊದಲ ಅವಧಿಯ ಅಧಿಕಾರದಲ್ಲಿ ಭ್ರಷ್ಟಚಾರದ ಆರೋಪಗಳು ಹೆಚ್ಚಾಗಿ ಕೇಳಿ ಬಂದಿರಲಿಲ್ಲ. ಆದರೆ ಎರಡನೇ ಅವಧಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲು ಸೇರುವ ಮಟ್ಟಕ್ಕೆ ಭ್ರಷ್ಟಾಚಾರ ನಡೆದು ಹೋಯಿತು.

ಎಎಪಿ ರಾಜಕೀಯ ಹಾದಿಯನ್ನು ನೋಡಿದರೆ ಪಕ್ಷದ ಸಿದ್ಧಾಂತ, ಹೋರಾಟ ಎಲ್ಲವೂ ಭರವಸೆಯನ್ನು ಹುಟ್ಟಿಸುವಂತಿತ್ತು. ಹೀಗಾಗಿಯೇ ಯುವಜನರು ಬಹುಬೇಗ ಆಕರ್ಷಿತರಾದರು. ದೆಹಲಿಯಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವವೇ ಇಲ್ಲ ಎಂದರಿತ ಕಾಂಗ್ರೆಸ್ ಮತದಾರರು ಕೂಡ ಎಎಪಿಯತ್ತ ಮುಖ ಮಾಡಿದರು. ಇದರ ಪರಿಣಾಮ ಮತ್ತು ಕಾಂಗ್ರೆಸ್ ವಿರುದ್ಧವೇ ಎಎಪಿ ಹೋರಾಟ ಮಾಡುತ್ತಾ ಬಂದಿದ್ದರಿಂದ ಕಾಂಗ್ರೆಸ್ ದೆಹಲಿಯಲ್ಲಿ ಮೂಲೆಗುಂಪಾಯಿತು. ದೆಹಲಿ ಮಟ್ಟಿಗೆ ಎಎಪಿಗೆ ಪ್ರಬಲ ಎದುರಾಳಿಯಾಗಿದ್ದ ಕಾಂಗ್ರೆಸ್ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗಿಂತ ಹೆಚ್ಚಾಗಿ ಎಎಪಿಯನ್ನೇ ಟಾರ್ಗೆಟ್ ಮಾಡಿತು. ಇದರ ಲಾಭ ಕಾಂಗ್ರೆಸ್ ಆಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಬಿಜೆಪಿಗೆ ಲಾಭ ಆಗುವ ಲಕ್ಷಣ ಗೋಚರಿಸುತ್ತಿದೆ.

ಸಮೀಕ್ಷೆಗಳು ಏನೇ ಇರಲಿ ಫಲಿತಾಂಶವಷ್ಟೇ ಅಂತಿಮ

ಸಮೀಕ್ಷೆಗಳು ಏನೇ ಹೇಳಿದರೂ ಫೆ.8ರಂದು ಪ್ರಕಟವಾಗುವ ಫಲಿತಾಂಶವೇ ಅಂತಿಮ. ಸುಮಾರು ಒಂದೂವರೆ ಕೋಟಿಗಿಂತಲೂ ಅಧಿಕ ಮಂದಿ ಮತದಾನ ಮಾಡಿದ್ದು, ಅವರು ಯಾರನ್ನು ಆಶೀರ್ವಾದ ಮಾಡಿದ್ದಾರೋ ಅವರೇ ಗೆಲ್ಲುವುದಂತು ನಿಜ. ಮತದಾರರ ಪೈಕಿ ಮೂರು ಬಗೆಯ ಮತದಾರರಿದ್ದು, ಒಬ್ಬರು ಅಭ್ಯರ್ಥಿ ಮತ್ತು ಸಮುದಾಯವನ್ನು ನೋಡಿ ಮತನೀಡಿದರೆ ಇನ್ನೊಬ್ಬರು ಪಕ್ಷಕ್ಕೆ ಮನ್ನಣೆ ನೀಡುತ್ತಾರೆ. ಮತ್ತೊಬ್ಬರು ಹಣ ಆಮಿಷಕ್ಕೆ ಮತ ಹಾಕಿರುತ್ತಾರೆ. ಹೀಗಾಗಿ ಯಾವುದೇ ಪಕ್ಷವಾಗಿರಲಿ ಅದರದ್ದೇ ಮತಗಳಂತು ಇದ್ದೇ ಇರುತ್ತದೆ.

ಎಎಪಿ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್ ನಾಯಕರು ದೆಹಲಿ ರಾಜಕಾರಣದ ಬಗ್ಗೆ ತಲೆಯನ್ನು ಕೆಡಿಸಿಕೊಂಡಿರಲಿಲ್ಲ. ಆದರೆ ಬಿಜೆಪಿ ಕಳೆದ 27 ವರ್ಷಗಳಿಂದ ಅಧಿಕಾರಕ್ಕೆ ಬರಲೇ ಬೇಕೆಂಬ ಹಠಕ್ಕೆ ಬಿದ್ದಿತು. ಹೀಗಾಗಿ ಅದು ಎಎಪಿ ವಿರುದ್ಧ ಹೋರಾಟ ಮಾಡುತ್ತಲೇ ಬಂತು. ಎಎಪಿ ಸರ್ಕಾರದ ಭ್ರಷ್ಟಾಚಾರವನ್ನು ಜನಕ್ಕೆ ಮುಟ್ಟಿಸುವ ಕೆಲಸವನ್ನು ದೊಡ್ಡ ಮಟ್ಟದಲ್ಲಿಯೇ ಮಾಡಿತು. ಅದನ್ನು ರಾಜಕೀಯ ಹುನ್ನಾರ, ದ್ವೇಷದ ರಾಜಕಾರಣ ಎಂದು ಎಎಪಿ ಅಲ್ಲಗಳೆಯುತ್ತಲೇ ಇದೆ. ಇದನ್ನು ಮೀರಿಯೂ ಲಾಭ ಬಿಜೆಪಿಗೆ ಆಗುತ್ತಾ? ಖಂಡಿತಾ ಗೊತ್ತಿಲ್ಲ. ಏಕೆಂದರೆ ಸಮೀಕ್ಷೆಗಳು ಏನೇ ಹೇಳಿದರೂ ಅದನ್ನು ಪರಿಗಣಿಸಲಾಗದು. ಇಂದಿನ ಫಲಿತಾಂಶವಷ್ಟೇ ಅಂತಿಮ. ಕಾದು ನೋಡೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+