Delhi Assembly Election 2025: ದೆಹಲಿ ಚುನಾವಣೆಯಲ್ಲಿ ಅಡಗಿದೆ ಬಿಜೆಪಿ ಪ್ರತಿಷ್ಠೆ
ನವದೆಹಲಿ, ಜನವರಿ 08: ದೆಹಲಿ ವಿಧಾನಸಭೆ ಚುನಾವಣೆ-2025 ವೇಳಾಪಟ್ಟಿ ಪ್ರಕಟವಾಗಿದೆ. ದಿನಾಂಕ 10/1/2025ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಆಮ್ ಆದ್ಮಿ ಪಕ್ಷ. ಈ ಬಾರಿ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೆಯಲ್ಲಿ ಗೆಲ್ಲುವ ಉತ್ಸಾಹದಲ್ಲಿವೆ.
ದೆಹಲಿಯಲ್ಲಿ ಈ ಬಾರಿ ಆಮ್ ಆದ್ಮಿ ಪಕ್ಷ ಭಾರೀ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ ಎಂಬ ವರದಿಗಳಿವೆ. ಇದನ್ನು ಉಪಯೋಗಿಸಿಕೊಂಡು ಬಿಜೆಪಿ, ಕಾಂಗ್ರೆಸ್ ಅಧಿಕಾರ ಹಿಡಿಯಲು ತಂತ್ರ ರೂಪಿಸುತ್ತಿವೆ. ಆದ್ದರಿಂದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದ ಒಟ್ಟು ವಿಧಾನಸಭಾ ಕ್ಷೇತ್ರಗಳು 70. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.

ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ 26 ವರ್ಷಗಳಿಂದ ಅಧಿಕಾರದಲ್ಲಿಲ್ಲ. 2014ರ ಲೋಕಸಭೆ ಚುನಾವಣೆಯಲ್ಲಿ ದೆಹಲಿಯ 7 ಸೀಟುಗಳಲ್ಲಿ ಪಕ್ಷ ಜಯಗಳಿಸಿದರೂ ಸಹ 2015ರ ವಿಧಾನಸಭೆಯ ಚುನಾವಣೆ ಗೆದ್ದಿಲ್ಲ. 2020ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ 70 ಸೀಟುಗಳ ಪೈಕಿ ಪಕ್ಷ ಗೆದ್ದಿದ್ದು ಕೇವಲ 8 ಸೀಟುಗಳಲ್ಲಿ ಮಾತ್ರ.
ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ: 2024ರ ಲೋಕಸಭೆ ಚುನಾವಣೆ ಗೆದ್ದ ಬಳಿಕ ಬಿಜೆಪಿ ರಾಷ್ಟ್ರ ರಾಜಧಾನಿಯ ವಿಧಾನಸಭೆ ಚುನಾವಣೆ ಮೇಲೆ ಗಮನಹರಿಸಿದೆ. ಚುನಾವಣೆಯನ್ನು ಸಹ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ದೆಹಲಿಯಲ್ಲಿ ಬಿಜೆಪಿಯ ಕೊನೆಯ ಮುಖ್ಯಮಂತ್ರಿ ದಿ. ಸುಷ್ಮಾ ಸ್ವರಾಜ್. 1998ರಲ್ಲಿ ಅವರು 52 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.
2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮತಗಳಿಕೆ ಶೇ 33.1, 2015ರ ಚುನಾವಣೆಯಲ್ಲಿ ಇದು ಶೇ 32.2ಕ್ಕೆ ಏರಿಕೆ ಕಂಡಿತು. 2020ರಲ್ಲಿ ಇದು ಶೇ 38.5ರಷ್ಟು ಹೆಚ್ಚಳವಾಯಿತು. ಆದರೆ 2015ರಲ್ಲಿ 32 ಸೀಟು ಗೆದ್ದಿದ್ದ ಬಿಜೆಪಿ, 2020ರಲ್ಲಿ ಗೆದ್ದಿದ್ದು ಕೇವಲ 8 ಸೀಟು.
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ನರೇಂದ್ರ ಮೋದಿ ಅವರ ಅಲೆ ಇದ್ದು, ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿದರೂ ಸಹ ದೆಹಲಿ ಚುನಾವಣೆ ಗೆಲ್ಲಲಿಲ್ಲ. ಆದ್ದರಿಂದ ಈ ಬಾರಿ ಯಾವ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ದೆಹಲಿ ಚುನಾವಣೆಯನ್ನು ಬಿಜೆಪಿ ಎದುರಿಸುತ್ತಿದೆ.
ಎಎಪಿ 2015, 2020ರಲ್ಲಿ ದೆಹಲಿಯಲ್ಲಿ ಗೆದ್ದು ಸರ್ಕಾರ ರಚನೆ ಮಾಡಿದೆ. ಎಎಪಿ ಪಕ್ಷದ 10 ವರ್ಷಗಳ ಆಡಳಿತವನ್ನು ಈ ಬಾರಿ ಕೊನೆಯಾಗಿಸಬೇಕು ಎಂಬುದು ಬಿಜೆಪಿ ತಂತ್ರವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಬಾವುಟ ಹಾರಿಸಬೇಕು ಎಂದು ಪಕ್ಷ ತಂತ್ರ ರೂಪಿಸಿದೆ.
ಬಿಜೆಪಿ ದೆಹಲಿ ಅಬಕಾರಿ ನೀತಿ ಹಗರಣ, ಎಎಪಿಯ ಭ್ರಷ್ಟಾಚಾರದ ಆಡಳಿತ, ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯನ್ನು ಮುಂದಿಟ್ಟುಕೊಂಡು ದೆಹಲಿ ಚುನಾವಣೆಯನ್ನು ಎದುರಿಸುತ್ತಿದೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮುಖ್ಯಂತ್ರಿಯಾಗಿದ್ದ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲಿಗೆ ಹೋಗಿ ಬಂದಿದ್ದು, ಬಿಜೆಪಿಗೆ ಪ್ರಮುಖ ಚುನಾವಣಾ ಅಸ್ತ್ರವಾಗಿದೆ.
ಚುನಾವಣೆ ದಿನಾಂಕ ಘೋಷಣೆಗೂ ಮೊದಲು ಬಿಜೆಪಿ ನರೇಂದ್ರ ಮೋದಿ ಅವರ ಎರಡು ಸಮಾವೇಶಗಳನ್ನು, ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಹೆಸರಿನಲ್ಲಿ ದೆಹಲಿಯಲ್ಲಿ ಆಯೋಜಿಸಿತ್ತು. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ದೆಹಲಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಮನ್ನಣೆ ನೀಡಿದೆ ಎಂದು ಪಕ್ಷ ಪ್ರಚಾರ ಆರಂಭಿಸಿದೆ. 'ವಿಕಸಿತ ದೆಹಲಿ' ಕನಸು ನನಸು ಮಾಡುತ್ತೇವೆ ಎಂದು ಬಿಜೆಪಿ ಭರವಸೆಯನ್ನು ನೀಡುತ್ತಿದೆ.
ಮಂಗಳವಾರ ದೆಹಲಿ ವಿಧಾನಸಭೆ ಚುನಾವಣೆ ಘೋಷಣೆ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಟ್ವೀಟ್ ಮಾಡಿ, "ದೆಹಲಿ ವಿಧಾನಸಭೆ ಚುನಾವಣಗೆ ದಿನಾಂಕ ಘೋಷಣೆ ಮಾಡಿರುವುದನ್ನು ಸ್ವಾಗತಿಸುತ್ತೇನೆ. ಚುನಾವಣೆ ಪ್ರಜಾಪ್ರಭುತ್ವದ ಮುಖ್ಯ ಹಬ್ಬ. ರಾಜ್ಯ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಚುನಾವಣೆ ಸಹಕಾರಿಯಾಗಿದೆ. ಜೀವನ ಮಟ್ಟ ಸುಧಾರಣೆ ಮಾಡುವ ಪಕ್ಷವನ್ನು ಚುನಾವಣೆಯಲ್ಲಿ ಬೆಂಬಲಿಸಿ ಎಂದು ನಾನು ದೆಹಲಿಯ ಜನರನ್ನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.












Click it and Unblock the Notifications